‘ಸಿದ್ದರಾಮಯ್ಯ ಅವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಮೈಸೂರಿನಲ್ಲಿ ವರದಿಗಾರರಿಗೆ ಸ್ಪಂದಿಸಿದ ಪರಮೇಶ್ವರ್, 2013ರಲ್ಲಿ ಸಿದ್ದರಾಮಯ್ಯ ಅವರೇ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಇರುತ್ತಾರೆ ಎಂದು ಹೈಕಮಾಂಡ್ ಘೋಷಣೆ ಮಾಡಿರಲಿಲ್ಲ. ಅವರು ಅವಧಿ ಪೂರ್ಣಗೊಳಿಸಿದ್ದರು. 2023ರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೈಕಮಾಂಡ್ ಹೇಳಿತ್ತು. ಅಧಿಕಾರದ ಅವಧಿ 2028ರವರೆಗೆ ಇದೆ. ಅದನ್ನು ಪೂರ್ಣಗೊಳಿಸಬೇಕಲ್ಲವೇ ? ನೀವೇ 5 ವರ್ಷವೂ ಸಿಎಂ ಎಂದು ಹೈಕಮಾಂಡ್ ಪ್ರತ್ಯೇಕವಾಗಿ ಸ್ಪಷ್ಟಿಕರಣ ನೀಡುವ ಅಗತ್ಯವಿಲ್ಲ’ ಎಂದು ಪರಮೇಶ್ವರ್ ಪ್ರತಿಪಾದಿಸಿಕೊಂಡಿದ್ದಾರೆ.
‘ಯಾವ ಗೊಂದಲವನ್ನೂ ನಮ್ಮ ಹೈಕಮಾಂಡ್ ಸೃಷ್ಟಿ ಮಾಡಿಲ್ಲ. ಸಿದ್ದರಾಮಯ್ಯ ಅವರ ಅಧಿಕಾರದ ಅವಧಿ ಇಂತಿಷ್ಟೆಂದು ಎಂದಾದರೂ ಹೈಕಮಾಂಡ್ ನಾಯಕರು ಹೇಳಿದ್ದಾರಾ ? ಬದಲಾವಣೆ ಬಗ್ಗೆ ಹೈಕಮಾಂಡ್ ನಾಯಕರು ಮಾತನಾಡಿದ್ದಾರಾ? ಇಲ್ಲ. ಅದರರ್ಥ ಆ ರೀತಿಯ ಯಾವ ಬೆಳವಣಿಗೆಯೂ ಇಲ್ಲ ಎಂದೇ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಆ ಬಗ್ಗೆ ಎಂದಾದರೂ ಮಾತನಾಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಅಲ್ಲಿಯವರೆಗೆ ಯಾರಾದರೂ ಹೇಳಿಕೆ ನೀಡಿದರೆ ಅದು ವೈಯಕ್ತಿಕ ಅಭಿಪ್ರಾಯವಷ್ಟೆ’ ಎಂದು ಅಭಿಪ್ರಾಯ ಪಟ್ಟರು.




