ದೆಹಲಿ ವಿಧಾನಸಭೆ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಭದ್ರತಾ ಲೋಪವೊಂದು ನಡೆದಿದ್ದು, ಮುಸುಕುಧಾರಿಯೊಬ್ಬ ಚಲಾಯಿಸುತ್ತಿದ್ದ ಕಾರು ಬ್ಯಾರಿಕೇಡ್‌ಗಳನ್ನು ಮುರಿದುಕೊಂಡು ಅತಿ ಭದ್ರತಾ ವಲಯದೊಳಗೆ ನುಗ್ಗಿದೆ. ಸ್ಪೀಕರ್ ಕಚೇರಿ ಬಳಿ ಹೂಗುಚ್ಛವೊಂದನ್ನು ಇರಿಸಿ, ಕ್ಷಣಾರ್ಧದಲ್ಲಿ ಆತ ಪರಾರಿಯಾಗಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ವೇಳೆ ವಿಧಾನಸಭೆಗೆ ಬಾಂಬ್ ಬೆದರಿಕೆ ಬಂದಿದ್ದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆಯ ವೈಫಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ದೆಹಲಿ ವಿಧಾನಸಭೆಯ ವಿವಿಐಪಿ ಪ್ರವೇಶ ದ್ವಾರವಾದ ‘ಗೇಟ್ ನಂಬರ್ 2’ರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶ ನೋಂದಣಿ ಸಂಖ್ಯೆ ಹೊಂದಿರುವ ಬಿಳಿ ಬಣ್ಣದ ಎಸ್‌ಯುವಿ ಕಾರೊಂದು ಅತಿ ವೇಗವಾಗಿ ಬಂದು ನೇರವಾಗಿ ಕಬ್ಬಿಣದ ಗೇಟಿಗೆ ಡಿಕ್ಕಿ ಹೊಡೆದಿದೆ. ಮುಖಕ್ಕೆ ಮುಸುಕು ಧರಿಸಿದ್ದ ಚಾಲಕ, ಬಹುಹಂತದ ಭದ್ರತೆಯನ್ನು ಭೇದಿಸಿ ಆವರಣದೊಳಗೆ ಪ್ರವೇಶಿಸಿದ್ದಾನೆ.
ಸುಮಾರು ಐದು ನಿಮಿಷಗಳ ಕಾಲ ಕಾರು ಆವರಣದೊಳಗೆ ಚಲಿಸಿದ್ದು, ನಂತರ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಮುಖಮಂಟಪದ ಬಳಿ ವಾಹನವನ್ನು ನಿಲ್ಲಿಸಲಾಗಿದೆ. ಅಲ್ಲಿ ಹೂಗುಚ್ಛವೊಂದನ್ನು ಇರಿಸಿದ ಆತ, ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡು ಕಾರಿನತ್ತ ಓಡಿಬರುವಷ್ಟರಲ್ಲೇ ವಾಹನವನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ಇದನ್ನು ಓದಿದ್ದೀರಾ? IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ
ಮಾರ್ಚ್ 25 ರಂದು ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದಾಗ ಕಟ್ಟಡದಲ್ಲಿ ಸ್ಫೋಟಕಗಳಿರುವುದಾಗಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆ ಘಟನೆಯ ಆತಂಕ ಮಾಸುವ ಮುನ್ನವೇ, ಹಾಡಹಗಲೇ ಇಂಥದ್ದೊಂದು ಭದ್ರತಾ ಉಲ್ಲಂಘನೆ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದು 2001ರ ಸಂಸತ್ ಭವನದ ಮೇಲಿನ ದಾಳಿಯ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ ಎಂದು ಭದ್ರತಾ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆಯನ್ನು ಅತ್ಯಂತ ಗಂಭೀರ ಭದ್ರತಾ ಲೋಪ ಎಂದು ಪರಿಗಣಿಸಿರುವ ದೆಹಲಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಧಿವಿಜ್ಞಾನ ತಜ್ಞರ ತಂಡಗಳನ್ನು ರವಾನಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಪರಾರಿಯಾಗಿರುವ ವಾಹನ ಮತ್ತು ಮುಸುಕುಧಾರಿ ಆರೋಪಿಯ ಬೆನ್ನು ಬಿದ್ದಿರುವ ಪೊಲೀಸರು, ಆತನನ್ನು ಪತ್ತೆಹಚ್ಚಲು ಆವರಣ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ತೀವ್ರವಾಗಿ ಜಾಲಾಡುತ್ತಿದ್ದಾರೆ.




