ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದಾಗಿ ಬೆಂಗಳೂರಿನ ಬೂತ್‌ವೊಂದರಲ್ಲಿ ಬರೋಬ್ಬರಿ 93.71%ರಷ್ಟು ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂದು ‘ಮ್ಯಾಂಡೇಟ್ ಅನಾಲಿಟಿಕ್ಸ್ ಅಂಡ್ ಕನ್ಸಲ್ಟಿಂಗ್’ (MAC) ಸಂಸ್ಥೆಯು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ.
ಎಂಎಸಿ ಸಂಸ್ಥೆಯು ತನ್ನ ‘ಮ್ಯಾಕ್ ಇನ್‌ಸೈಟ್ಸ್’ ವೇದಿಕೆಯಲ್ಲಿ ವರದಿಯನ್ನು ಬಹಿರಂಗ ಪಡಿಸಿದೆ. ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಂತಿ ಚಿಲ್ಡ್ರನ್ ಸ್ಕೂಲ್ ಮತಗಟ್ಟೆಯಲ್ಲಿ ಬಹುತೇಕ ಮತದಾರರನ್ನು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ ಹೊರಹಾಕಲಾಗಿದೆ ಎಂದು ಹೇಳಿದೆ.
ಶಾಂತಿ ಚಿಲ್ಡ್ರನ್ ಸ್ಕೂಲ್ ಬೂತ್‌ನಲ್ಲಿ 2023ರ ಚುನಾವಣೆ ವೇಳೆ 1,129 ಮತದಾರರು ಇದ್ದರು. ಈ ಪೈಕಿ, 1,058 (93.71%) ಮತದಾರರ ಹೆಸರುಗಳನ್ನು ಎಎಸ್‌ಡಿಡಿಒ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರಲ್ಲಿ, 1,057 ಮಂದಿಯನ್ನು ಸ್ಥಳಾಂತರಗೊಂಡಿದ್ದಾರೆ ಎಂದು ಪಟ್ಟಿ ಮಾಡಲಾಗಿದೆ. ಅಂದರೆ, ಈ ಎಲ್ಲ ಹೆಸರುಗಳನ್ನು ಚುನಾವಣಾ ಆಯೋಗ ಡೀಲೀಟ್ ಮಾಡಲು ಮುಂದಾಗಿದೆ ಎಂದು ಎಂಎಸಿ ಹೇಳಿದೆ.
ಈ ಲೇಖನ ಓದಿದ್ದೀರಾ?: SIR | ಬದುಕಿರುವವರನ್ನೇ ಮತಪಟ್ಟಿಯಲ್ಲಿ ಕೊಂದ ಚುನಾವಣಾ ಆಯೋಗ
ಕೇವಲ ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ ಒಟ್ಟು 3,372 ಮತಗಟ್ಟೆಗಳಲ್ಲಿ ಬರೋಬ್ಬರಿ 50%ಕ್ಕಿಂತ ಹೆಚ್ಚು ಮತದಾರರ ಹೆಸರುಗಳನ್ನು ಎಎಸ್‌ಡಿಡಿಒ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ ಎಂಬುದನ್ನು ಸಂಸ್ಥೆಯ ದತ್ತಾಂಶ ವಿಶ್ಲೇಷಣೆ ಪತ್ತೆಹಚ್ಚಿದೆ.
ಮತ್ತೊಂದು ಪ್ರಮುಖ ಅಂಶವೆಂದರೆ, ಚುನಾವಣಾ ಆಯೋಗವು ತನ್ನ ಲೋಪವನ್ನು ಮುಚ್ಚಿಹಾಕಲು ಸರ್ವಜ್ಞನಗರ ವಿಧಾನಸಭೆಯ ಎಎಸ್‌ಡಿಡಿಒ ಪಟ್ಟಿಯನ್ನೇ ತನ್ನ ವೆಬ್‌ಸೈಟ್‌ನಲ್ಲಿ ತೆಗೆದುಹಾಕಿದೆ.



