ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧ ರಾಜ್ಯದಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಮುಗಿದಿದ್ದು ನಾಳೆ (ಜೂನ್ 30)ಯಿಂದ ಬಿಎಲ್‌ಒಗಳು ಮನೆ ಮನೆ ಭೇಟಿ ನೀಡಲಿದ್ದಾರೆ. ಜುಲೈ 29ರ ತನಕ ಇದು ನಡೆಯಲಿದೆ. ಕರಡು ಮತದಾರರ ಪಟ್ಟಿ ಆಗಸ್ಟ್ 5ರಂದು ಚುನಾವಣಾ ಆಯೋಗ ಪ್ರಕಟಿಸಲಿದೆ.
ರಾಜ್ಯದಾದ್ಯಂತ ಒಟ್ಟು 59,050 ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳಿಗೆ ತರಬೇತಿ ನೀಡಿರುವುದಾಗಿ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ರಾಜಕೀಯ ಪಕ್ಷಗಳಿಂದ 1,15,112 ಬೂತ್ ಮಟ್ಟದ ಏಜೆಂಟರನ್ನು (ಬಿಎಲ್‌ಎ) ನೇಮಿಸಲಾಗಿದೆ. ಅದರಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಸ್ಥಾನದಲ್ಲಿದೆ. ಕಾಂಗ್ರೆಸ್‌ನಿಂದ 52,419 ಏಜೆಂಟರಿದ್ದಾರೆ. ಬಿಜೆಪಿಯಿಂದ 48,614, ಜೆಡಿಎಸ್‌ನಿಂದ 14,020 ಏಜೆಂಟರನ್ನು ನೇಮಿಸಲಾಗಿದೆ. ಬಿಎಸ್‌ಪಿಯಿಂದ 36, ಆಮ್ ಆದ್ಮಿಯಿಂದ 18, ಸಿಪಿಎಂ ನಿಂದ 5 ಏಜೆಂಟರನ್ನು ನೇಮಿಸಲಾಗಿದೆ.
ಬಿಎಲ್‍ಒಗಳಿಂದ ಎಷ್ಟು ಗಣತಿ ನಮೂನೆಗಳು ವಿತರಣೆಯಾಗಿವೆ, ಸಂಗ್ರಹಿಸಲಾಗಿದೆ, ಡಿಜಿಟಲೀಕರಣಗೊಳಿಸಲಾಗಿದೆ, ಎಷ್ಟು ಗಣತಿ ನಮೂನೆಗಳು ಸ್ವೀಕರಿಸಲಾಗಿಲ್ಲ ಎಂಬ ಮಾಹಿತಿಯನ್ನು ಪ್ರತಿದಿನ ಪತ್ರಿಕಾ ಪ್ರಕಟಣೆ ಮೂಲಕ ಹೊರಡಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಗಣತಿ ನಮೂನೆಯು ಕನ್ನಡದಲ್ಲಿ ಮುದ್ರಿತವಾಗಿರುತ್ತದೆ. ಮತದಾರರು ಅದನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಭರ್ತಿ ಮಾಡಿ ಸಹಿ ಮಾಡಿ ಹಿಂದಿರುಗಿಸಿದ ನಂತರ, ಬಿಎಲ್‍ಒಗಳು ಗಣತಿ ನಮೂನೆಯಲ್ಲಿನ ಮಾಹಿತಿಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ‘ಬಿಎಲ್‍ಒ ಮೊಬೈಲ್ ಆ್ಯಪ್’ ಮೂಲಕ ಮತದಾರರ ಪಟ್ಟಿ ನಿರ್ವಹಣಾ ವ್ಯವಸ್ಥೆ (ಇಆರ್‌ಎಂಎಸ್)ಯಲ್ಲಿ ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಿದ್ದಾರೆ.
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, 5,07,79,810 ಮತದಾರರ ಮ್ಯಾಪಿಂಗ್ ನಡೆದಿದೆ (91.61%). 46,52,504 ಮತದಾರರ ಮ್ಯಾಪಿಂಗ್ ನಡೆದಿಲ್ಲ. ಮ್ಯಾಪಿಂಗ್ ಕಾರ್ಯ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಗಣತಿ ನಮೂನೆಗಳನ್ನು ಭರ್ತಿ ಮಾಡುವ ಸೌಲಭ್ಯವು https://voters.eci.gov.in/ ಮತ್ತು ECINET ಮೊಬೈಲ್ ಅಪ್ಲಿಕೇಶನ್‍ನಲ್ಲಿ ಜೂ.30ರಿಂದ ಲಭ್ಯವಿರುತ್ತದೆ.




