ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯ ಬೆನ್ನಲ್ಲೇ, ಅಗತ್ಯ ವಸ್ತುಗಳ ಧಾರಣೆಯೂ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ ಎರಡು ತಿಂಗಳಿಂದ ಅಕ್ಕಿ, ಬೇಳೆ, ತರಕಾರಿ, ಹಣ್ಣು ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಳವಾಗಿದ್ದು, ಕುಟುಂಬಗಳ ಮಾಸಿಕ ವೆಚ್ಚ ಸುಮಾರು ₹2,000ರಿಂದ ₹4,000ದವರೆಗೆ ಏರಿಕೆಯಾಗಿದೆ. ಇದರ ಬಿಸಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ಬಡವರು, ಕೃಷಿ ಕಾರ್ಮಿಕರು ಹಾಗೂ ಕೆಳಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚು ತಟ್ಟುತ್ತಿದೆ.
ರಾಜ್ಯದ ಎಲ್ಲ ಭಾಗಗಳಲ್ಲೂ ಅಗತ್ಯ ವಸ್ತುಗಳ ಬೆಲೆ ಏರುಮುಖವಾಗುತ್ತಲೇ ಇದೆ. ಆದರೆ ಅದಕ್ಕೆ ತಕ್ಕ ಆದಾಯ ಬರುತ್ತಿಲ್ಲ. ನಂದಿನಿ ಹಾಲಿನ ಬೆಲೆಯನ್ನು ಲೀಟರ್ಗೆ ₹8 ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಬಸ್ ಪ್ರಯಾಣ ದರ ಏರಿಕೆಯ ಪ್ರಸ್ತಾಪವೂ ಜನರ ಆತಂಕ ಹೆಚ್ಚಿಸಿದೆ. ಜೊತೆಗೆ ಶಿಕ್ಷಣ ಶುಲ್ಕ, ವೈದ್ಯಕೀಯ ವೆಚ್ಚ, ಇಂಧನ ದರ ಹಾಗೂ ಸಾಲದ ಬಡ್ಡಿ ಹೆಚ್ಚಳದಿಂದ ಕುಟುಂಬಗಳ ಆರ್ಥಿಕ ನಿರ್ವಹಣೆ ದುಸ್ತರವಾಗಿದೆ.
ಬೆಲೆ ಏರಿಕೆಯ ವೇಗಕ್ಕೆ ತಕ್ಕಂತೆ ಆದಾಯ ಹೆಚ್ಚಾಗದಿರುವುದರಿಂದ ಜನರು ತಮ್ಮ ದೈನಂದಿನ ಜೀವನಶೈಲಿಯಲ್ಲೇ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಅಕ್ಕಿ, ಬೇಳೆ, ತರಕಾರಿ ಖರೀದಿಯ ಪ್ರಮಾಣ ಕಡಿತಗೊಳಿಸುತ್ತಿದ್ದಾರೆ. ವಾರಕ್ಕೊಮ್ಮೆ ಮಾಂಸಾಹಾರ ಸೇವಿಸುತ್ತಿದ್ದವರು ಎರಡು-ಮೂರು ವಾರಗಳಿಗೊಮ್ಮೆ ಖರೀದಿಸುವಂತಾಗಿದೆ. ಅನಾರೋಗ್ಯ ಉಂಟಾದರೂ ತಕ್ಷಣ ಆಸ್ಪತ್ರೆಗೆ ತೆರಳದೆ, ಅನಿವಾರ್ಯವಾದಾಗ ಮಾತ್ರ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ ಕುಟುಂಬಗಳ ಬಜೆಟ್ ಮೇಲೆ ನೇರ ಪರಿಣಾಮ ಬೀರಿದೆ. ಶೇಂಗಾ, ಸಕ್ಕರೆ, ತೊಗರಿ ಬೇಳೆ, ಕಡಲೆ ಬೇಳೆ ಹಾಗೂ ಗೋಧಿ ಹಿಟ್ಟು ಸೇರಿದಂತೆ ಹಲವು ವಸ್ತುಗಳ ಸಗಟು ಧಾರಣೆಯೂ ಹೆಚ್ಚಾಗಿದೆ. ಅಕ್ಕಿ ಬೆಲೆ ಕೆ.ಜಿಗೆ ₹60ರಿಂದ ₹80–₹85ಕ್ಕೆ ಏರಿಕೆಯಾಗಿದೆ. ತೊಗರಿ ಬೇಳೆ ₹110ರಿಂದ ₹140ಕ್ಕೆ ತಲುಪಿದೆ. ₹65ರಷ್ಟಿದ್ದ ಕಡಲೆ ಹಿಟ್ಟು ಈಗ ₹85ರಿಂದ ₹90ಕ್ಕೆ ಮಾರಾಟವಾಗುತ್ತಿದೆ. ಗೋಧಿಯ ಬೆಲೆ ₹36ರಿಂದ ₹40ಕ್ಕೆ ಹೆಚ್ಚಳವಾಗಿದೆ. ಅಡುಗೆ ಎಣ್ಣೆ ಲೀಟರ್ಗೆ ₹150ರಿಂದ ₹180ಕ್ಕೆ ಏರಿಕೆಯಾಗಿದೆ. ಮೊಟ್ಟೆ ₹5-6ರಿಂದ 7-8ಕ್ಕೆ ಏರಿಕೆಯಾಗಿದೆ.
ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿಯೂ ಮಾರುಕಟ್ಟೆಗೆ ಅಗತ್ಯ ವಸ್ತುಗಳ ಆವಕ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಗದಗ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳೀಯ ಹೆಸರುಕಾಳಿನ ಪೂರೈಕೆ ಶೇ 60ರಷ್ಟು ಕುಸಿದಿದೆ. ಗೋವಿನಜೋಳದ ಆವಕದಲ್ಲಿಯೂ ಶೇ 40ರಷ್ಟು ಇಳಿಕೆಯಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಬಾಗಲಕೋಟೆಯಲ್ಲಿ ಕಳೆದ ವರ್ಷ ಪ್ರತಿದಿನ 3,000ರಿಂದ 4,000 ಕ್ವಿಂಟಲ್ ಹೆಸರುಕಾಳು ಮಾರುಕಟ್ಟೆಗೆ ಬರುತ್ತಿದ್ದರೆ, ಈಗ 400ರಿಂದ 500 ಕ್ವಿಂಟಲ್ ಮಾತ್ರ ಪೂರೈಕೆಯಾಗುತ್ತಿದೆ. ಸೂರ್ಯಕಾಂತಿ ಮತ್ತು ಈರುಳ್ಳಿಯ ಆವಕವೂ ಇಳಿಕೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಏಲಕ್ಕಿ ಕೆ.ಜಿಗೆ ₹1,800ರಿಂದ ₹4,500ಕ್ಕೆ, ಕಾಳುಮೆಣಸು ₹650ರಿಂದ ₹950ಕ್ಕೆ, ಗೋಡಂಬಿ ₹600ರಿಂದ ₹800ಕ್ಕೆ, ಕೊಬ್ಬರಿ ₹280ರಿಂದ ₹400ಕ್ಕೆ ಹಾಗೂ ಹೆಸರುಕಾಳು ₹110ರಿಂದ ₹140ಕ್ಕೆ ಏರಿಕೆಯಾಗಿದೆ. ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇತರ ವೆಚ್ಚಗಳಿಗೆ ಜನ ಕಡಿವಾಣ ಹಾಕುತ್ತಿದ್ದಾರೆ. ಮದುವೆ, ಗೃಹಪ್ರವೇಶ ಸೇರಿದಂತೆ ಶುಭ ಸಮಾರಂಭಗಳಿಗೆ ಹಿಂದೆ ಸುಮಾರು 1,000 ಅತಿಥಿಗಳನ್ನು ಆಹ್ವಾನಿಸುತ್ತಿದ್ದ ಕುಟುಂಬಗಳು ಈಗ 500ರಿಂದ 600 ಮಂದಿಗೆ ಸೀಮಿತಗೊಳಿಸುತ್ತಿವೆ. ಆಹಾರ, ಆತಿಥ್ಯ ಹಾಗೂ ಇತರ ವ್ಯವಸ್ಥೆಗಳ ವೆಚ್ಚ ಕಡಿಮೆ ಮಾಡುವ ಪ್ರಯತ್ನ ನಡೆದಿದೆ.
ಮಕ್ಕಳ ಶಿಕ್ಷಣವೂ ಕುಟುಂಬಗಳ ಬಜೆಟ್ನ ದೊಡ್ಡ ಪಾಲನ್ನು ಆಕ್ರಮಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಧ್ಯಮ ವರ್ಗದ ಕುಟುಂಬಗಳು ತಮ್ಮ ವಾರ್ಷಿಕ ಆದಾಯದ ಸುಮಾರು ಶೇ 25ರಷ್ಟನ್ನು ಶಾಲಾ-ಕಾಲೇಜು ಶುಲ್ಕಕ್ಕೆ ವ್ಯಯಿಸುತ್ತಿವೆ ಎಂಬುದು ಆತಂಕಕಾರಿ. ಸಣ್ಣ ಜ್ವರ, ಕೆಮ್ಮು, ನೆಗಡಿ ಬಂದರೂ ವೈದ್ಯಕೀಯ ತಪಾಸಣೆ ಮತ್ತು ಔಷಧಗಳಿಗೆ ₹3,000ರಿಂದ ₹4,000 ಖರ್ಚಾಗುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಮಾಸಿಕವಾಗಿ ಹೋಟೆಲ್ಗೆ ಹೋಗುವುದು, ಸಿನಿಮಾ ನೋಡುವುದು ಸೇರಿದಂತೆ ಮನರಂಜನಾ ಚಟುವಟಿಕೆಗಳಿಗೂ ಜನ ಬ್ರೇಕ್ ಹಾಕಿದ್ದಾರೆ.
ದಿನಸಿ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ತರಕಾರಿ ಮತ್ತು ಹಣ್ಣುಗಳ ಧಾರಣೆಯೂ ಗ್ರಾಹಕರನ್ನು ಕಂಗೆಡಿಸಿದೆ. ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚಾಗಿರುವುದು ಹಾಗೂ ಅದಕ್ಕೆ ತಕ್ಕಂತೆ ಪೂರೈಕೆಯಾಗದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಹಲವು ತರಕಾರಿಗಳ ಬೆಲೆ ಕೆ.ಜಿಗೆ ₹50 ದಾಟಿದೆ. ಬೆಂಗಳೂರಿನಲ್ಲಿ ಈರುಳ್ಳಿ ಕೆ.ಜಿಗೆ ₹55ರಿಂದ ₹70ರವರೆಗೆ ಮಾರಾಟವಾಗುತ್ತಿದೆ. ಟೊಮೆಟೊ ಪೂರೈಕೆ ಕಡಿಮೆಯಾಗಿರುವುದರಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲೇ ಕೆ.ಜಿಗೆ ₹40 ಇದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ ₹50ರಿಂದ ₹60ರವರೆಗೆ ಮಾರಾಟವಾಗುತ್ತಿದೆ. ಸೌತೆಕಾಯಿ ಕೆ.ಜಿಗೆ ₹50ರಿಂದ ₹60, ಕ್ಯಾರೆಟ್ ₹60ರಿಂದ ₹70ರಷ್ಟಿದೆ. ಬೀನ್ಸ್ ಬೆಲೆ ಕೆ.ಜಿಗೆ ₹100ರ ಆಸುಪಾಸಿನಲ್ಲಿದೆ. ನಿಂಬೆ ಹಣ್ಣಿನ ಪೂರೈಕೆ ಕುಸಿದಿರುವುದರಿಂದ ಒಂದಕ್ಕೆ ₹12ರವರೆಗೂ ಬೆಲೆ ತಲುಪಿದೆ.
ಕೇಂದ್ರ ಸರ್ಕಾರದ ತೆರಿಗೆ ನೀತಿ, ಇಂಧನ ಬೆಲೆ ನಿರ್ವಹಣೆ, ದಾಸ್ತಾನು ವ್ಯವಸ್ಥೆ ಹಾಗೂ ಪೂರೈಕೆ ಸರಪಳಿಯಲ್ಲಿನ ಲೋಪಗಳೂ ಬೆಲೆ ಏರಿಕೆಗೆ ಕಾರಣವಾಗುತ್ತಿವೆ ಎಂಬ ಟೀಕೆಗಳಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದ ಸಂದರ್ಭದಲ್ಲೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆಗಳನ್ನು ಅನುಗುಣವಾಗಿ ಕಡಿಮೆ ಮಾಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಯುದ್ಧದ ಪರಿಣಾಮ ತೈಲ ಬೆಲೆ ಏರಿದಾಗ ಅದರ ಹೊರೆ ಗ್ರಾಹಕರ ಮೇಲೆ ವರ್ಗಾವಣೆಯಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಇದನ್ನೂ ಓದಿ: ಧಾರವಾಡ | ಕಬ್ಬು ಬೆಳೆಗಾರರು; ಬೈಪಾಸ್ ರಸ್ತೆ ತಡೆದು ಪ್ರತಿಭಟನೆ
ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಂಡ ಸಂದರ್ಭದಲ್ಲೂ ಅದರ ಲಾಭ ಗ್ರಾಹಕರಿಗೆ ತಲುಪದೆ ಖಾಸಗಿ ಕಂಪನಿಗಳಿಗೆ ಅನುಕೂಲವಾಗಿದೆ ಎಂಬ ಟೀಕೆಗಳಿವೆ. ಈರುಳ್ಳಿ ದಾಸ್ತಾನು ಮತ್ತು ಪೂರೈಕೆ ನಿರ್ವಹಣೆಯಲ್ಲಿಯೂ ಕೇಂದ್ರ ಸರ್ಕಾರದ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.
ರಾಜ್ಯ ಸರ್ಕಾರದ ವೆಚ್ಚದ ಆದ್ಯತೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಬರ ಮತ್ತು ಬೆಲೆ ಏರಿಕೆಯ ಸಂಕಷ್ಟದ ನಡುವೆಯೇ ಬೆಂಗಳೂರಿನಲ್ಲಿ ಸುಮಾರು ₹20,000 ಕೋಟಿ ವೆಚ್ಚದ ಸುರಂಗ ರಸ್ತೆ ಯೋಜನೆ ಕೈಗೆತ್ತಿಕೊಳ್ಳುತ್ತಿರುವುದು, ದಸರಾ ಆಚರಣೆಗೆ ಭಾರಿ ಮೊತ್ತ ವ್ಯಯಿಸುತ್ತಿರುವುದು ಹಾಗೂ ಕಂಬಳ ಆಯೋಜನೆಗೆ ಅಂದಾಜು ₹4ರಿಂದ ₹5 ಕೋಟಿ ಖರ್ಚು ಮಾಡುವ ಯೋಜನೆ ಟೀಕೆಗೆ ಗುರಿಯಾಗಿದೆ. ಕಾವೇರಿ ಆರತಿಗೆ ಸುಮಾರು ₹100 ಕೋಟಿ ವೆಚ್ಚವಾಗುವ ನಿರೀಕ್ಷೆಯೂ ವ್ಯಕ್ತವಾಗಿದೆ.
ಬರಗಾಲ ಮತ್ತು ಬೆಲೆ ಏರಿಕೆಯ ಸಂಕಷ್ಟದ ಸಂದರ್ಭದಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಅಗತ್ಯ ವಸ್ತುಗಳ ಪೂರೈಕೆ ಸುಧಾರಣೆ, ಮಾರುಕಟ್ಟೆ ಮೇಲ್ವಿಚಾರಣೆ ಹಾಗೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆರವು ನೀಡುವ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.




