ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ‘ಕೊಂದವರು ಯಾರು?’ ಆಂದೋಲನವು ಸ್ವಾಗತಿಸಿದೆ. ಅಲ್ಲದೆ, ಕಾಲಮಿತಿಯೊಳಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಅನುವಾಗುವಂತೆ ಕೂಡಲೇ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ (SIT) ರಚಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಂದೋಲನದ ಪ್ರಮುಖರು, ಧರ್ಮಸ್ಥಳದ ಆಸುಪಾಸಿನಲ್ಲಿ ದಶಕಗಳಿಂದ ನಡೆಯುತ್ತಿರುವ ಮಹಿಳೆಯರ ಮತ್ತು ಮಕ್ಕಳ ಅಸಹಜ ಸಾವುಗಳು, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ವಿರುದ್ಧ ನಿರಂತರ ಜನಚಳುವಳಿಗಳು ನಡೆಯುತ್ತಿದ್ದರೂ, ‘ಸೌಜನ್ಯಳನ್ನು ಕೊಂದವರು ಯಾರು?’ ಎಂಬ ಪ್ರಶ್ನೆ ಇಂದಿಗೂ ಕಗ್ಗಂಟಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೌಜನ್ಯಳ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮರುತನಿಖೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ಹಿಂದಿನ ತನಿಖಾ ಸಂಸ್ಥೆಗಳು ಸಾಕ್ಷ್ಯ ಸಂಗ್ರಹಿಸಿದ ಹಾಗೂ ತನಿಖೆ ಮುಂದುವರಿಸಿದ ರೀತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಿಓಡಿ, ಸಿಬಿಐ ಸೇರಿದಂತೆ ಹಲವು ಸಂಸ್ಥೆಗಳು ತನಿಖೆ ನಡೆಸಿದ್ದರೂ, ನೈಜ ಹಂತಕರು ಯಾರೆಂಬುದು ಇನ್ನೂ ನಿಗೂಢವಾಗಿದೆ. ಈ ಹಿಂದೆ ಆರೋಪಿಯೆಂದು ಬಂಧಿತನಾಗಿದ್ದ ಅಮಾಯಕನನ್ನು ನ್ಯಾಯಾಲಯವು ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ, ನೈಜ ಅಪರಾಧಿಗಳನ್ನು ಪತ್ತೆಹಚ್ಚುವುದು ಸರ್ಕಾರದ ನೈತಿಕ ಹಾಗೂ ಶಾಸನಬದ್ಧ ಜವಾಬ್ದಾರಿಯಾಗಿದೆ ಎಂದು ಆಂದೋಲನವು ಒತ್ತಿ ಹೇಳಿದೆ.
ಸೌಜನ್ಯ ಕೊಲೆಯಾದ ದಿನದಿಂದಲೂ ನ್ಯಾಯಕ್ಕಾಗಿ ಆಕೆಯ ಕುಟುಂಬ ದಣಿವಿಲ್ಲದ ಹೋರಾಟ ನಡೆಸುತ್ತಿದೆ. ತನಿಖಾ ಸಂಸ್ಥೆಗಳಿಂದ ಪದೇ ಪದೇ ನಿರಾಸೆಯಾದರೂ ಧೃತಿಗೆಡದೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನ್ಯಾಯಕ್ಕಾಗಿ ಆಗ್ರಹಿಸಿದ ತಾಯಿ ಕುಸುಮಾವತಿಯವರ ಹೋರಾಟಕ್ಕೆ ಆಂದೋಲನವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಹಾಗೆಯೇ, ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಸ್‌ಐಟಿ ರಚಿಸುವ ಭರವಸೆ ನೀಡಿದ ಗೃಹ ಸಚಿವರ ನಡೆಯನ್ನೂ ಆಂದೋಲನವು ಸ್ಮರಿಸಿದೆ.
ಆಂದೋಲನದ ಪ್ರಮುಖ ಹಕ್ಕೊತ್ತಾಯಗಳು:
- ವರದಿ ಬಹಿರಂಗಪಡಿಸಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಚನೆಯಾಗಿದ್ದ ಎಸ್‌ಐಟಿ ಸಲ್ಲಿಸಿರುವ ಸಮಗ್ರ ತನಿಖಾ ವರದಿಯನ್ನು ತಕ್ಷಣವೇ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು (Public Domain).
- ಅಧಿಕಾರಿಗಳು, ವೈದ್ಯರ ವಿರುದ್ಧ ಕ್ರಮ: ಪ್ರಕರಣದ ದಿಕ್ಕುತಪ್ಪಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ತಪ್ಪು ಮಾಹಿತಿ ನೀಡಿದ ವೈದ್ಯರ ವಿರುದ್ಧ ಕೂಲಂಕಷ ವಿಚಾರಣೆ ನಡೆಸಬೇಕು.
- ಸಾಕ್ಷ್ಯ ನಾಶಪಡಿಸಿದವರ ಪತ್ತೆ: ಅಪರಾಧಿಗಳನ್ನು ರಕ್ಷಿಸಲು ಸಾಕ್ಷ್ಯ ನಾಶಪಡಿಸಿದವರನ್ನು ಮತ್ತು ಅವರಿಗೆ ಹಿಂಬಾಗಿಲಿನಿಂದ ರಕ್ಷಣೆ ನೀಡಿದ ಪ್ರಭಾವಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು.
- ಪಾರದರ್ಶಕ ತನಿಖೆ: ಯಾವುದೇ ರಾಜಕೀಯ ಅಥವಾ ಪ್ರಭಾವಿ ಶಕ್ತಿಗಳ ಒತ್ತಡಕ್ಕೆ ಮಣಿಯದೆ, ನಿರ್ದಿಷ್ಟ ಕಾಲಮಿತಿಯೊಳಗೆ ಮರುತನಿಖೆ ಪೂರ್ಣಗೊಳಿಸಬೇಕು. ಅಧಿಕಾರಿಗಳಿಗೆ ಯಾವುದೇ ಒತ್ತಡ ಹೇರದೆ ಮುಕ್ತ ಅವಕಾಶ ನೀಡಬೇಕು.
- ಸಾಕ್ಷಿದಾರರಿಗೆ ರಕ್ಷಣೆ ಮತ್ತು ಸಹಾಯವಾಣಿ: ಸಂತ್ರಸ್ತ ಕುಟುಂಬಕ್ಕೆ ಹಾಗೂ ಹೊಸದಾಗಿ ಸಾಕ್ಷ್ಯ ನುಡಿಯಲು ಮುಂದೆ ಬರುವವರಿಗೆ ಸರ್ಕಾರವೇ ಸಂಪೂರ್ಣ ಭದ್ರತೆ ಮತ್ತು ಗೌಪ್ಯತೆ ಒದಗಿಸಬೇಕು. ಹೊಸ ಸಾಕ್ಷಿಗಳು ಎಸ್‌ಐಟಿಯನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಸಹಾಯವಾಣಿ ತೆರೆಯಬೇಕು.
- ಇತರ ಪ್ರಕರಣಗಳ ತನಿಖೆ: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಇತರ ಮಹಿಳೆಯರ ಮೇಲಿನ ದೌರ್ಜನ್ಯಗಳು, ನಾಪತ್ತೆ ಹಾಗೂ ಅಮಾಯಕ ಭಕ್ತಾದಿಗಳ ಅಸಹಜ ಸಾವುಗಳ ಬಗ್ಗೆಯೂ ನಿಷ್ಪಕ್ಷಪಾತ ತನಿಖೆಯಾಗಬೇಕು.
ನ್ಯಾಯಕ್ಕಾಗಿ ಆಗ್ರಹಿಸುವುದು ಹಾಗೂ ಅನ್ಯಾಯವನ್ನು ಪ್ರಶ್ನಿಸುವುದು ಪ್ರಜೆಗಳ ಕರ್ತವ್ಯವಾಗಿದ್ದು, ಸರ್ಕಾರವು ಈ ಹಕ್ಕೊತ್ತಾಯಗಳನ್ನು ನಿಷ್ಪಕ್ಷಪಾತವಾಗಿ ಈಡೇರಿಸಲಿದೆ ಎಂಬ ನಿರೀಕ್ಷೆಯನ್ನು ‘ಕೊಂದವರು ಯಾರು?’ ಆಂದೋಲನದ ಪ್ರಮುಖರಾದ ಮಧುಭೂಷಣ್, ಜ್ಯೋತಿ ಎ., ಮಲ್ಲಿಗೆ ಮತ್ತು ಗೌರಮ್ಮ ವ್ಯಕ್ತಪಡಿಸಿದ್ದಾರೆ.




