SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7 ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚನೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಚಿಕ್ಕಮಗಳೂರು ನಗರದಲ್ಲಿ ಎದ್ದೇಳು ಕರ್ನಾಟಕ ವತಿಯಿಂದ ಪ್ರತ್ರಿಕಾಗೋಷ್ಠಿ ನಡೆಸಲಾಯಿತು.
ಎದ್ದೇಳು ಕರ್ನಾಟಕ ಸೇರಿದಂತೆ ನೂರಾರು ಸಂಘಟನೆಗಳು, ಜಾತ್ಯಾತೀತ ಪಕ್ಷಗಳು ಒಗ್ಗೂಡಿ, ದೇಶಾದ್ಯಂತ ತೀವ್ರ ತರಹದ ಹೋರಾಟ ಹಾಗೆಯೇ 2 ಬಾರಿ ಕರ್ನಾಟಕ ರಾಜ್ಯಾದ್ಯಂತ ಜಾಥಾ ನಡೆಸಿ, ಎಸ್.ಐ.ಆರ್ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಹುನ್ನಾರವನ್ನು ಬಯಲು ಮಾಡಿದೆ. ಆದರೂ ಈಗ ಫಾರಂ 7ನ್ನು ಅದೇ ಮತಕಟ್ಟೆಯ ಬಿ.ಎಲ್.ಎ ಗಳ ಮುಖಾಂತರ ಸುಳ್ಳು ಮಾಹಿತಿ ಅಂದರೆ ತಲ ತಲಾಂತರದಿಂದ ವಾಸ ಮಾಡುತ್ತಿರುವ ಕುಟುಂಬಗಳನ್ನು ಇವರು ವಾಸವಾಗಿಲ್ಲ ಎನ್ನುವ ಸುಳ್ಳು ಮಾಹಿತಿಯ ಫಾರಂ.7 ತುಂಬಿಸಲಾಗಿದೆ.
ಈ ವಿಚಾರ ಎಲ್ಲರ ಗಮನಕ್ಕೆ ಬಂದಿದ್ದರೂ ಕೂಡಾ ಅದರಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸಂಖ್ಯೆ.153 ಬಣಕಲ್, ಮೂಡಿಗೆರೆ ಇಲ್ಲಿ ಸುಮಾರು ಕುಟುಂಬಗಳ ಹೆಸರುಗಳನ್ನು ಫಾರಂ.7 ರಲ್ಲಿ ಸುಳ್ಳು ಮಾಹಿತಿ ತುಂಬಿದ್ದು, ಅದೇ ರೀತಿ ಶೃಂಗೇರಿ, ಕೊಪ್ಪ, ಬೇರೆ ಬೇರೆ ಕಡೆ ಕೂಡಾ ಇ೦ತಹ ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ, ಆ ಬಗ್ಗೆ ಸ್ಥಳೀಯ ತಹಶೀಲ್ದಾರ್‌ರವರುಗಳಿಗೆ ದೂರು ನೀಡಿದರೆ ಅವರು ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ ಎಂದು ಎದ್ದೇಳು ಕರ್ನಾಟಕ ರಾಜ್ಯ ಸಂಚಾಲಕರಾದ ಗೌಸ್ ಮೋಹಿಯುದ್ದಿನ್ ತಿಳಿಸಿದರು.
ಈ ಬಗ್ಗೆ ಅರಕ್ಷಕ ಠಾಣೆಗೆ ದೂರು ನೀಡಿದರೆ ಒಂದು ಎನ್.ಸಿ ಕೊಟ್ಟು ಈವರೆಗೂ ಎಫ್.ಐ.ಆರ್ ಮಾಡಿರುವುದಿಲ್ಲ. ಆದ್ದರಿಂದ ಈ ಫಾರಂ.7 ರಲ್ಲಿ ತಪ್ಪು ಮಾಹಿತಿ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಒತ್ತಾಯಿಸುತ್ತೇವೆಂದು ಗೌಸ್ ಮೋಹಿಯುದ್ದಿನ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಫಾರಂ-7 ದುರುಪಯೋಗ; ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಯತ್ನಕ್ಕೆ ತೀವ್ರ ವಿರೋಧ
ಈ ವೇಳೆ ಟಿ. ಎಲ್ ಗಣೇಶ್, ದಿವಾಕರ್, ಸಂದೀಪ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.




