2002ರ ಗುಜರಾತ್ ನರಮೇಧದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಅವರ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಮೂರು ವರ್ಷದ ಮಗು ಸೇರಿದಂತೆ ಕುಟುಂಬದ 14 ಜನರನ್ನು ಹತ್ಯೆ ಮಾಡಿದ ಭೀಕರ ಪ್ರಕರಣದ ಅಪರಾಧಿಗಳಾದ ಬಿಪಿನ್‌ಚಂದ್ ಕನ್ಯಾಯಾಲಾಲ್ ಜೋಶಿ ಮತ್ತು ಪ್ರದೀಪ್ ರಮಣ್‌ಲಾಲ್ ಮೋಧಿಯಾಗೆ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಸುಪ್ರೀಂ ಕೋರ್ಟ್ ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಒತ್ತಾಯಿಸಿದೆ.
ಈ ಹಿಂದೆ ಗುಜರಾತ್ ಸರ್ಕಾರವು ಈ ಎಲ್ಲ 11 ಅಪರಾಧಿಗಳನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದಾಗ ದೇಶಾದ್ಯಂತ ಮತ್ತು ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತದನಂತರ 2024ರಲ್ಲಿ ಸರ್ವೋಚ್ಚ ನ್ಯಾಯಾಲಯವು ಆ ಕಾನೂನುಬಾಹಿರ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ, ಸಂತ್ರಸ್ತೆಗೆ ನ್ಯಾಯದ ಭರವಸೆ ಮೂಡಿಸಿತ್ತು. ಆದರೆ, ಇದೀಗ ಮತ್ತೆ ಅಪರಾಧಿಗಳಿಗೆ ಜಾಮೀನು ನೀಡಿರುವುದು ಸಂತ್ರಸ್ತೆ ಬಿಲ್ಕಿಸ್ ಬಾನೋ ಅವರಿಗೆ ಮತ್ತು ದೇಶದ ನ್ಯಾಯ ವ್ಯವಸ್ಥೆಯನ್ನು ನಂಬಿರುವ ಕೋಟ್ಯಂತರ ನಾಗರಿಕರಿಗೆ ಆಘಾತ ಉಂಟುಮಾಡಿದೆ. ಅಲ್ಲದೇ, ನ್ಯಾಯಾಲಯವು ಬಿಲ್ಕಿಸ್ ಬಾನೋ ಅವರನ್ನು ಸಂಪರ್ಕಿಸದೆ ಅಥವಾ ಅವರ ವಾದವನ್ನೂ ಕೇಳದೆ ಜಾಮೀನು ನೀಡಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬೆಳವಣಿಗೆಯಿಂದ ಬಿಲ್ಕಿಸ್ ಬಾನೋ ಅವರು ಕೂಡ ತೀವ್ರ ಆಘಾತ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಸುಪ್ರೀಂ ಕೋರ್ಟ್ ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹಿಸಿದೆ.
ಇದನ್ನೂ ಓದಿ: “ನನ್ನನ್ನ ನೇಣಿಗೇರಿಸಿ” ; ಪ್ರಧಾನಿಗೆ ಚಾಲೆಂಜ್ ಮಾಡಿದ ನೇಹಾ ಸಿಂಗ್!
ಅತ್ಯಾಚಾರ ಮತ್ತು ಹತ್ಯೆಯಂತಹ ಅತ್ಯಂತ ಭೀಕರ ಅಪರಾಧಗಳನ್ನು ಎಸಗಿದವರಿಗೆ ಈ ರೀತಿ ನಿರಂತರವಾಗಿ ರಿಲೀಫ್ ಸಿಗುತ್ತಿರುವುದು ಸಂತ್ರಸ್ತೆಯ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುವುದಲ್ಲದೆ, ಅಪರಾಧಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಬಿಲ್ಕಿಸ್ ಬಾನೋ ಅವರ ಪರವಾಗಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಮ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳಿಗೆ ನೀಡಲಾಗಿರುವ ಜಾಮೀನನ್ನು ತಕ್ಷಣವೇ ರದ್ದುಗೊಳಿಸಬೇಕು. ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಶಿಕ್ಷೆಯಿಂದ ವಿನಾಯಿತಿ ಪಡೆಯಲು ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ತಡೆಯೊಡ್ಡಬೇಕು. ಸಂತ್ರಸ್ತೆ ಬಿಲ್ಕಿಸ್ ಬಾನೋ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಭದ್ರತೆ ಹಾಗೂ ಸೂಕ್ತ ನ್ಯಾಯವನ್ನು ಖಾತ್ರಿಪಡಿಸಬೇಕು. ದೇಶದಲ್ಲಿ ಕಾನೂನಿನ ಆಡಳಿತ ಮತ್ತು ಮಹಿಳೆಯರ ಸುರಕ್ಷತೆ ಉಳಿಯಬೇಕಾದರೆ ಇಂತಹ ಘೋರ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದು ಅತ್ಯಗತ್ಯ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹಿಸಿದೆ.



