ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಯೋಜನೆಯ ಅನುಷ್ಠಾನದ ಬಗ್ಗೆ ಕರ್ನಾಟಕ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಆರೋಪಿಸಿದೆ. ಈ ಕುರಿತು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ನವೆಂಬರ್ 17ರಂದು ಪತ್ರ ಬರೆದಿದ್ದು, ಬುಧವಾರ ಅದನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೇಂದ್ರದ ಇಬಿಪಿ ಯೋಜನೆಗೆ ಕರ್ನಾಟಕದ ವಿರೋಧವಿಲ್ಲ, ಆದರೆ ಅದರ ಅನುಷ್ಠಾನದ ರೀತಿಯ ಬಗ್ಗೆ ಆತಂಕವಿದೆ ಎಂದು ಸಚಿವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ನಾಗರಿಕರ ಹಿತಾಸಕ್ತಿಗೆ ಧಕ್ಕೆ ತಂದು ಇಂತಹ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿರುವ ಅವರು, ಇಂತಹ ದೊಡ್ಡ ಮಟ್ಟದ ಬದಲಾವಣೆಗೆ ಇಂಧನ ಮೂಲಸೌಕರ್ಯ ಹಾಗೂ ಎಥೆನಾಲ್‌ಗೆ ಹೊಂದಿಕೊಳ್ಳುವ ವಾಹನಗಳು ಸೇರಿದಂತೆ ಇಡೀ ವ್ಯವಸ್ಥೆ ಸಿದ್ಧವಾಗಬೇಕಿದ್ದು, ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ವಾಹನ ಸವಾರರಿಂದ ಮೈಲೇಜ್ ಕುಸಿತ, ಎಂಜಿನ್ ಕಾರ್ಯಕ್ಷಮತೆಯಲ್ಲಿ ವ್ಯತ್ಯಯ, ಹಳೆಯ ವಾಹನಗಳಿಗೆ ಹಾನಿ ಹಾಗೂ ಪಾವತಿಸಿದ ಹಣಕ್ಕಿಂತ ಕಡಿಮೆ ಪ್ರಮಾಣದ ಇಂಧನ ದೊರೆಯುತ್ತಿರುವ ಕುರಿತು ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೆಟ್ರೋಲ್‌ನ ಗುಣಮಟ್ಟ ಮತ್ತು ಪ್ರಮಾಣ ಪರಿಶೀಲಿಸಲು ರಾಜ್ಯದ ಅಧಿಕಾರಿಗಳು 2026ರ ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್ ಮತ್ತು ಎಂಆರ್‌ಪಿಎಲ್ ಕಂಪನಿಗಳಿಗೆ ಸೇರಿದ 63 ಪೆಟ್ರೋಲ್ ಬಂಕ್‌ಗಳಲ್ಲಿ ತಪಾಸಣೆ ನಡೆಸಿದ್ದರು.
ಮೊದಲ ಹಂತದಲ್ಲಿ ಸಂಗ್ರಹಿಸಿದ ಮಾದರಿಗಳನ್ನು ತೈಲ ಕಂಪನಿಗಳ ರಾಜ್ಯ ಮಟ್ಟದ ಸಮನ್ವಯಾಧಿಕಾರಿಗಳ ಮೂಲಕ ಅವುಗಳ ನಿಗದಿತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಆದರೆ, 63 ಮಾದರಿಗಳ ಪೈಕಿ ಇದುವರೆಗೆ ಕೇವಲ 42ರ ವರದಿ ಮಾತ್ರ ಲಭ್ಯವಾಗಿದ್ದು, ಅವುಗಳಲ್ಲಿ ಯಾವುದರಲ್ಲೂ ಎಥೆನಾಲ್ ಪ್ರಮಾಣವನ್ನು ಉಲ್ಲೇಖಿಸಿರಲಿಲ್ಲ. ಹೀಗಾಗಿ, ವಿಶ್ವಾಸಾರ್ಹತೆ ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು ತನ್ನದೇ ಪ್ರಯೋಗಾಲಯಗಳ ಬದಲಾಗಿ, ರಾಷ್ಟ್ರೀಯ ಪರೀಕ್ಷಾ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ಮಾನ್ಯತಾ ಮಂಡಳಿಯ (ಎನ್‌ಎಬಿಎಲ್) ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳಲ್ಲಿ ಹೊಸದಾಗಿ ಪರೀಕ್ಷೆ ನಡೆಸಿತು ಎಂದು ರಿಜ್ವಾನ್ ಅರ್ಷದ್ ವಿವರಿಸಿದ್ದಾರೆ.
ಸ್ವತಂತ್ರ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡಿಸಿದ 14 ಮಾದರಿಗಳ ಪೈಕಿ 11 ಮಾದರಿಗಳಲ್ಲಿ ನಿಗದಿತ ಶೇ 20ರ ಮಿತಿಗಿಂತ ಹೆಚ್ಚು ಎಥೆನಾಲ್ ಇರುವುದು ದೃಢಪಟ್ಟಿದೆ. ಪರೀಕ್ಷಿತ ಮಾದರಿಗಳಲ್ಲಿ ಎಥೆನಾಲ್ ಪ್ರಮಾಣವು ಶೇ 13.5ರಿಂದ ಗರಿಷ್ಠ ಶೇ 31.2ರವರೆಗೆ ಭಾರಿ ಏರುಪೇರು ಹೊಂದಿರುವುದು ಕಂಡುಬಂದಿದೆ. ವಾಹನ ಸವಾರರು ಲೀಟರ್‌ಗೆ ಸುಮಾರು ₹120ರಿಂದ ₹140 ಪಾವತಿಸಿ ಖರೀದಿಸುವ ಪ್ರೀಮಿಯಂ ಹೈ-ಸ್ಪೀಡ್ ಪೆಟ್ರೋಲ್‌ನಲ್ಲೂ ಅಧಿಕ ಎಥೆನಾಲ್ ಅಂಶ ಪತ್ತೆಯಾಗಿದೆ. ಇದು ನಿಗದಿತ ಮಾನದಂಡಗಳಿಗೆ ವಿರುದ್ಧವಾಗಿದ್ದು, ತಾವು ಖರೀದಿಸುವ ಇಂಧನದ ನೈಜ ಸಂಯೋಜನೆ ತಿಳಿಯುವ ಹಕ್ಕಿನಿಂದ ಗ್ರಾಹಕರು ವಂಚಿತರಾಗುತ್ತಿದ್ದಾರೆ ಹಾಗೂ ಅವರಿಗೆ ಬೇರೆ ಆಯ್ಕೆಯೇ ಇಲ್ಲದಂತಾಗಿದೆ ಎಂದು ಸಚಿವರು ಆಕ್ಷೇಪಿಸಿದ್ದಾರೆ.
ಗ್ರಾಹಕರ ಹಿತರಕ್ಷಣೆ ಮತ್ತು ಪಾರದರ್ಶಕತೆಗಾಗಿ ಐದು ಪ್ರಮುಖ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ನೈಜ ಎಥೆನಾಲ್ ಪ್ರಮಾಣವನ್ನು ಪ್ರದರ್ಶಿಸಬೇಕು, ಪ್ರತಿ ಇಂಧನ ಬಿಲ್‌ನಲ್ಲೂ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು ಮುದ್ರಿಸಬೇಕು, ಇ20 ಪೆಟ್ರೋಲ್ ಜೊತೆಗೆ ಇ10 ಹಾಗೂ ಎಥೆನಾಲ್ ರಹಿತ ಪೆಟ್ರೋಲ್ ಲಭ್ಯತೆಯನ್ನು ಖಚಿತಪಡಿಸಬೇಕು, ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಸ್ವತಂತ್ರ ಪರೀಕ್ಷಾ ವ್ಯವಸ್ಥೆ ರೂಪಿಸಬೇಕು ಹಾಗೂ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾದ ಗ್ರಾಹಕರಿಗಾಗಿ ಪ್ರತ್ಯೇಕ ‘ಇ20 ಪರಿಹಾರ ನಿಧಿ’ ಸ್ಥಾಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಇದೇ ವೇಳೆ, ಪೆಟ್ರೋಲ್‌ನಲ್ಲಿ ಎಥೆನಾಲ್ ಕಲಬೆರಕೆ ಕುರಿತು ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.



