ತೆರೆದ ನ್ಯಾಯಾಲಯದ ಕಲಾಪದ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, “ನೀವು ಆ ಕುರ್ಚಿಗೆ ಅರ್ಹರಲ್ಲ” ಎಂದು ಹೇಳಿದ್ದ ವಕೀಲ ಪ್ರವೀಣ್ ಸಿಂಘಾಲ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನ್ಯಾಯಾಂಗ ನಿಂದನೆ (Contempt of Court) ನೋಟಿಸ್ ಜಾರಿ ಮಾಡಿದೆ.
ಸುಪ್ರೀಂ ಕೋರ್ಟ್ ವಕೀಲರ ಸಂಘ (SCBA) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ವಿಶೇಷ ತ್ರಿಸದಸ್ಯ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ನೋಟಕ್ಕೆ ಇದು ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಪ್ರಕರಣವೆಂದು ಪರಿಗಣಿಸಿರುವ ಪೀಠ, 2027ರ ಜನವರಿ 8ರೊಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ವಕೀಲ ಪ್ರವೀಣ್ ಸಿಂಘಾಲ್ ಅವರಿಗೆ ಸೂಚಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯ ದಿನಾಂಕವಾದ 2027ರ ಜನವರಿ 20ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆಯೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಇದನ್ನೂ ಓದಿ: ನೀವು ಆ ಕುರ್ಚಿಗೆ ಅರ್ಹರಲ್ಲ: ಸುಪ್ರೀಂನಲ್ಲಿ ಸಿಜೆಐ ವಿರುದ್ಧ ವಕೀಲರ ಆಕ್ರೋಶ; ಲೈವ್ ಪ್ರಸಾರ ಕಟ್
ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕಲಾಪ ನಡೆಯುತ್ತಿದ್ದ ವೇಳೆ, ವಕೀಲ ಪ್ರವೀಣ್ ಅವರು ತಮ್ಮ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸುವಂತೆ ಪಟ್ಟು ಹಿಡಿದಿದ್ದರು. “ಈ ವಿಷಯವನ್ನು ನವೆಂಬರ್ 2ರಂದೇ ನ್ಯಾಯಮೂರ್ತಿಗಳ (ಸಿಜೆಐ) ಕಚೇರಿಗೆ ಸಲ್ಲಿಸಲಾಗಿತ್ತು. 15 ದಿನಗಳು ಕಳೆದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ, ಹಾಗಾಗಿ ನಾನು ಅನಿವಾರ್ಯವಾಗಿ ನ್ಯಾಯಾಲಯದ ಮುಂದೆ ಬರಬೇಕಾಯಿತು” ಎಂದು ಆ ವಕೀಲರು ವಾದಿಸಿದ್ದರು.
ವಕೀಲರಿಂದ ಈ ರೀತಿಯ ಅನಿರೀಕ್ಷಿತ ವರ್ತನೆ ಮತ್ತು ವೈಯಕ್ತಿಕ ಟೀಕೆಗಳು ಬಂದ ತಕ್ಷಣವೇ ಸುಪ್ರೀಂ ಕೋರ್ಟ್ ಆಡಳಿತ ಮಂಡಳಿಯು, ನ್ಯಾಯಾಲಯದ ಕಲಾಪದ ಲೈವ್ ಪ್ರಸ್ರಾರದ ಆಡಿಯೋ ಮತ್ತು ವಿಡಿಯೋ ಫೀಡ್ ಅನ್ನು ತಕ್ಷಣವೇ ಕಟ್/ಮ್ಯೂಟ್ ಮಾಡಿತ್ತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ವಕೀಲರ ಸಂಘವು (SCBA), ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ಅನುಮತಿ ಪಡೆದು ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ವಕೀಲ ಸಿಂಘಾಲ್ ಅವರ ವರ್ತನೆಯು “ಅತ್ಯಂತ ಅಸಭ್ಯ ಮತ್ತು ಕ್ಷಮಿಸಲಾಗದಂತಹದ್ದು” ಎಂದು ಅಟಾರ್ನಿ ಜನರಲ್ ತಮ್ಮ ಒಪ್ಪಿಗೆ ಪತ್ರದಲ್ಲಿ ಉಲ್ಲೇಖಿಸಿದ್ದರು.
ಬುಧವಾರದ ವಿಚಾರಣೆಯ ವೇಳೆ SCBA ಅಧ್ಯಕ್ಷ ಮತ್ತು ಹಿರಿಯ ವಕೀಲ ಪ್ರದೀಪ್ ರಾಯ್ ವಾದ ಮಂಡಿಸಿ, “ಇಂತಹ ವರ್ತನೆಯನ್ನು ಕಬ್ಬಿಣದ ಹಸ್ತದಿಂದ ಹತ್ತಿಕ್ಕಬೇಕು, ಇದಕ್ಕೆ ಅವಕಾಶ ನೀಡಬಾರದು” ಎಂದರು. ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ವಕೀಲರ ಸಂಘದ ಅರ್ಜಿಯನ್ನು ಸಂಪೂರ್ಣವಾಗಿ ಬೆಂಬಲಿಸಿ, “ಈ ನ್ಯಾಯಾಲಯದ ಘನತೆ ಮತ್ತು ಗಾಂಭೀರ್ಯದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಪೀಠಕ್ಕೆ ತಿಳಿಸಿದರು.



