ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ಪ್ರಕರಣ ಸೇರಿದಂತೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪ್ರೊ. ಮೈಕೆಲ್ ಫ್ರೀಮನ್ ಅವರು ಎಪ್ಸ್ಟೀನ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುಮಾರು ಒಂದು ವರ್ಷ ಪರಿಶೀಲಿಸಿದ್ದಾರೆ. ಬಿಬಿಸಿಯ ‘ನ್ಯೂಸ್ನೈಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಎಪ್ಸ್ಟೀನ್ ದೇಹದ ಮೇಲಿದ್ದ ಗಾಯಗಳು ಮತ್ತು ಮೃತದೇಹ ಪತ್ತೆಯಾದ ಸ್ಥಿತಿ ಆತ್ಮಹತ್ಯೆಯ ಅಧಿಕೃತ ವಿವರಣೆಗೆ ಹೊಂದಿಕೆಯಾಗುವುದಿಲ್ಲ” ಎಂದು ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯದ ಜಾಲ ನಡೆಸುತ್ತಿದ್ದ ಅಮೆರಿಕದ ವಿಕೃತ ಕಾಮುಕ ಜೆಫ್ರಿ ಎಪ್ಸ್ಟೀನ್ 2019ರಲ್ಲಿ ಜೈಲಿನಲ್ಲಿ ಮೃತಪಟ್ಟಿದ್ದು. ಆತನ ಸಾವು ಆತ್ಮಹತ್ಯೆಯಲ್ಲ, ಕೊಲೆಯಿಂದ ನಡೆದಿದೆ ಎಂದು ವಿಧಿವಿಜ್ಞಾನ ತಜ್ಞ ಪ್ರೊ. ಮೈಕೆಲ್ ಫ್ರೀಮನ್ ಹೊಸ ವಾದ ಮುಂದಿಟ್ಟಿದ್ದಾರೆ. ಒಂದು ವರ್ಷ ಕಾಲ ವೈದ್ಯಕೀಯ ದಾಖಲೆಗಳನ್ನು ಅಧ್ಯಯನ ನಡೆಸಿರುವ ಅವರು, “ಎಪ್ಸ್ಟೀನ್ನನ್ನು ಹಿಂದಿನಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ಸಾಧ್ಯತೆಯಿದೆ” ಎಂದಿದ್ದಾರೆ.
ವಿಶ್ವದ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಗಣ್ಯರೊಂದಿಗೆ ಸಂಪರ್ಕ ಹೊಂದಿದ್ದ ಎಪ್ಸ್ಟೀನ್, 2019ರ ಆಗಸ್ಟ್ 10ರಂದು ಅಮೆರಿಕದ ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಕರೆಕ್ಷನಲ್ ಸೆಂಟರ್ ಜೈಲಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಪ್ರಾಪ್ತ ಬಾಲಕಿಯರ ಲೈಂಗಿಕ ಕಳ್ಳಸಾಗಣೆ ಮತ್ತು ಶೋಷಣೆಗೆ ಸಂಬಂಧಿಸಿದ ಗಂಭೀರ ಆರೋಪಗಳ ವಿಚಾರಣೆ ಎದುರಿಸುತ್ತಿದ್ದ ಎಪ್ಸ್ಟೀನ್, ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಮೊದಲೇ ಸಾವನ್ನಪ್ಪಿದ್ದರು. ಈ ಸಾವನ್ನು ‘ನೇಣು ಬಿಗಿದುಕೊಂಡ ಆತ್ಮಹತ್ಯೆ’ ಎಂದು ನ್ಯೂಯಾರ್ಕ್ ನಗರದ ವೈದ್ಯಕೀಯ ಪರೀಕ್ಷಕರ ಕಚೇರಿಯು ಘೋಷಿಸಿತ್ತು. ಅಮೆರಿಕ ಸರ್ಕಾರದ ಅಧಿಕೃತ ತೀರ್ಮಾನದಲ್ಲಿಯೂ ಆತ್ಮಹತ್ಯೆ ಎಂದೇ ಹೇಳಲಾಗಿದೆ.
ಶವಪರೀಕ್ಷೆ ನಡೆಸಿದ ವೈದ್ಯಕೀಯ ತಜ್ಞರು, “ದೇಹದ ಗಾಯಗಳು ಕತ್ತು ಹಿಸುಕಿದ ಕೊಲೆಗಿಂತ ನೇಣು ಬಿಗಿದುಕೊಂಡ ಆತ್ಮಹತ್ಯೆಗೆ ಹೆಚ್ಚು ಹೊಂದಿಕೆಯಾಗುತ್ತವೆ” ಎಂದು ತಿಳಿಸಿದ್ದರು. 2019ರಲ್ಲಿ ನ್ಯೂಯಾರ್ಕ್ ನಗರದ ಮುಖ್ಯ ವೈದ್ಯಕೀಯ ಪರೀಕ್ಷಕರಾಗಿದ್ದ ಡಾ. ಬಾರ್ಬರಾ ಸ್ಯಾಂಪ್ಸನ್ ಕೂಡ ಈ ವರದಿಗಳನ್ನು ಸಮರ್ಥಿಸಿಕೊಂಡಿದ್ದಾರೆ.
2023ರಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯ ಇನ್ಸ್ಪೆಕ್ಟರ್ ಜನರಲ್ ಕಚೇರಿ ನಡೆಸಿದ ತನಿಖೆಯಲ್ಲಿಯೂ ಕೊಲೆಗೆ ಸಾಕ್ಷ್ಯ ದೊರಕಿರಲಿಲ್ಲ. 2025ರಲ್ಲಿ ನ್ಯಾಯಾಂಗ ಇಲಾಖೆ ಮತ್ತು ಎಫ್ಬಿಐ ನಡೆಸಿದ ಪರಿಶೀಲನೆಯೂ ಆತ್ಮಹತ್ಯೆ ಎಂಬ ತೀರ್ಮಾನವನ್ನು ಪುನರುಚ್ಚರಿಸಿತ್ತು.
ಆದರೆ, ಜೈಲಿನ ಭದ್ರತಾ ವೈಫಲ್ಯಗಳು, ಸಮರ್ಪಕವಾಗಿ ದಾಖಲಾಗದ ಕ್ಯಾಮೆರಾ ದೃಶ್ಯಗಳು ಹಾಗೂ ಎಪ್ಸ್ಟೀನ್ ಹೊಂದಿದ್ದ ಪ್ರಭಾವಿ ಸಂಪರ್ಕಗಳು ಈ ಸಾವಿನ ಕುರಿತು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದವು. ಆತ ಸತ್ತು ಏಳು ವರ್ಷಗಳಾದರೂ ಈ ಅನುಮಾನಗಳು ಮುಂದುವರಿದಿವೆ. ಇದೀಗ, ಮೈಕೆಲ್ ಫ್ರೀಮನ್ ಅವರ ವರದಿಯು ಹೊಸ ಅನುಮಾನ-ಚರ್ಚೆಗಳಿಗೆ ನಾಂದಿ ಹಾಡಿದೆ.
ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ಪ್ರಕರಣ ಸೇರಿದಂತೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪ್ರೊ. ಮೈಕೆಲ್ ಫ್ರೀಮನ್ ಅವರು ಎಪ್ಸ್ಟೀನ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುಮಾರು ಒಂದು ವರ್ಷ ಪರಿಶೀಲಿಸಿದ್ದಾರೆ. ಬಿಬಿಸಿಯ ‘ನ್ಯೂಸ್ನೈಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಎಪ್ಸ್ಟೀನ್ ದೇಹದ ಮೇಲಿದ್ದ ಗಾಯಗಳು ಮತ್ತು ಮೃತದೇಹ ಪತ್ತೆಯಾದ ಸ್ಥಿತಿ ಆತ್ಮಹತ್ಯೆಯ ಅಧಿಕೃತ ವಿವರಣೆಗೆ ಹೊಂದಿಕೆಯಾಗುವುದಿಲ್ಲ” ಎಂದು ಹೇಳಿದ್ದಾರೆ.
ಅವರ ವಿಶ್ಲೇಷಣೆಯಲ್ಲಿ ಪ್ರಮುಖವಾಗಿ ಮೂರು ಅಂಶಗಳು ಗಮನ ಸೆಳೆದಿವೆ: ಮೊದಲನೆಯದು, ಎಪ್ಸ್ಟೀನ್ನ ಎಡಭುಜದ ಒಳಭಾಗದಲ್ಲಿ ಕಂಡುಬಂದ ಆಳವಾದ ರಕ್ತಸ್ರಾವ. ಇಂತಹ ಗಾಯವು ದೈಹಿಕ ಸಂಘರ್ಷ ಅಥವಾ ಹಲ್ಲೆಯಿಂದ ಉಂಟಾಗಿರಬಹುದು. ಎರಡನೆಯದು, ಮುಖದ ಮೇಲಿನ ಕೆಲವು ಗಾಯಗಳು ಹೊಡೆತಗಳಿಂದ ಉಂಟಾಗಿರುವ ಸಾಧ್ಯತೆಯಿದೆ. ಮೂರನೆಯದು, ಕತ್ತಿನ ಮೇಲಿರುವಹಗ್ಗ ಅಥವಾ ಬಟ್ಟೆ ಬಿಗಿದ ಗುರುತಿನ ಮೇಲ್ಭಾಗದಲ್ಲಿ ಉಗುರಿನಿಂದ ಉಂಟಾಗಿರುವಂತೆ ಕಾಣುವ ಗಾಯಗಳಿವೆ. ಯಾರಾದರೂ ಕತ್ತು ಹಿಸುಕಿದಾಗ ಅದರಿಂದ ತಪ್ಪಿಸಿಕೊಳ್ಳಲು ಎಪ್ಸ್ಟೀನ್ ಪ್ರಯತ್ನಿಸಿದ್ದರೆ. ಈ ಗುರುತುಗಳು ಉಂಟಾಗಿರಬಹುದು.
ಈ ಸಾಕ್ಷ್ಯಗಳನ್ನು ಆಧರಿಸಿ, ಎಪ್ಸ್ಟೀನ್ ಅವರನ್ನು ಮೊದಲು ಹಿಂದಿನಿಂದ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಮೃತದೇಹವನ್ನು ನೇತುಹಾಕಿರುವ ಸಾಧ್ಯತೆಯನ್ನು ಫ್ರೀಮನ್ ಮುಂದಿಟ್ಟಿದ್ದಾರೆ.
ಎಪ್ಸ್ಟೀನ್ ಸಹೋದರ ಮಾರ್ಕ್ ಎಪ್ಸ್ಟೀನ್ ಈ ಅಧ್ಯಯನಕ್ಕೆ ದಾಖಲೆಗಳನ್ನು ಒದಗಿಸಿದ್ದಾರೆ. ಆದರೆ, ತಾವು ಸ್ವತಂತ್ರವಾಗಿ ಅಧ್ಯಯನ ನಡೆಸಿದ್ದು, ಮಾರ್ಕ್ ಅವರಿಂದ ಹಣ ಪಡೆದಿಲ್ಲ ಎಂದು ಫ್ರೀಮನ್ ತಿಳಿಸಿದ್ದಾರೆ.
ಎಪ್ಸ್ಟೀನ್ ಸಾವಿನ ಬಗ್ಗೆ ಅನುಮಾನಗಳು ಮುಂದುವರಿಯಲು ಜೈಲಿನಲ್ಲಿನ ಗಂಭೀರ ನಿರ್ಲಕ್ಷ್ಯಗಳು ಪ್ರಮುಖ ಕಾರಣಗಳಾಗಿವೆ. 2019ರ ಜುಲೈ 23ರಂದು ಜೈಲಿನಲ್ಲಿ ಸಂಭವಿಸಿದ್ದ ಘಟನೆಯೊಂದರ ನಂತರ, ಆತನನ್ನು ಕೆಲಕಾಲ ‘ಆತ್ಮಹತ್ಯೆ ಅಪಾಯದ ಮೇಲ್ವಿಚಾರಣೆ’ಯಲ್ಲಿ ಇರಿಸಲಾಗಿತ್ತು. ಬಳಿಕ ಆತನನ್ನು ಸೂಕ್ತ ಸಹಕೈದಿಯೊಂದಿಗೆ ಇರಿಸಬೇಕೆಂದು ಜೈಲಿನ ಮನೋವಿಜ್ಞಾನ ವಿಭಾಗ ಸೂಚಿಸಿತ್ತು. ಆದರೆ, ಆಗಸ್ಟ್ 9ರ ರಾತ್ರಿ ಆತನೊಬ್ಬರನ್ನೇ ಕೊಠಡಿಯಲ್ಲಿ ಇರಿಸಲಾಗಿತ್ತು.
ಅಂದು ರಾತ್ರಿ ಸುಮಾರು 10.40ರಿಂದ ಮರುದಿನ ಬೆಳಗ್ಗೆ 6.30ರವರೆಗೆ ಎಪ್ಸ್ಟೀನ್ ಪರಿಣಾಮಕಾರಿ ಮೇಲ್ವಿಚಾರಣೆಯಿಲ್ಲದೆ ಕೊಠಡಿಯಲ್ಲಿ ಒಬ್ಬನೇ ಇದ್ದರು. ಆ ರಾತ್ರಿ ಜೈಲು ಸಿಬ್ಬಂದಿ ನಿಯಮಿತ ಭದ್ರತಾ ಪರಿಶೀಲನೆಗಳನ್ನು ನಡೆಸಿರಲಿಲ್ಲ. ತಪಾಸಣೆ ನಡೆಸಿದಂತೆ ತಪ್ಪು ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಆ ಕೊಠಡಿಯಲ್ಲಿ ಹೆಚ್ಚುವರಿ ಹಾಸಿಗೆ ಬಟ್ಟೆಗಳು ಉಳಿದಿದ್ದವು. ಭದ್ರತಾ ಕ್ಯಾಮೆರಾಗಳ ವ್ಯವಸ್ಥೆಯಲ್ಲಿಯೂ ತಾಂತ್ರಿಕ ಸಮಸ್ಯೆಗಳಿದ್ದವು. ಕೆಲವು ದೃಶ್ಯಗಳು ಸರಿಯಾಗಿ ದಾಖಲಾಗಿರಲಿಲ್ಲ ಎಂಬುದನ್ನೂ ತನಿಖೆ ಪತ್ತೆಹಚ್ಚಿತ್ತು.
ಎಪ್ಸ್ಟೀನ್ ನೇತಾಡುತ್ತಿದ್ದ ಸ್ಥಿತಿಯ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ಮೊದಲೇ ಸಿಬ್ಬಂದಿ ಆತನ ದೇಹವನ್ನು ಕೆಳಗಿಳಿಸಿದ್ದರು. ಆತನ ಜೀವ ಉಳಿಸುವ ಪ್ರಯತ್ನವಾಗಿ ಕೆಳಗಿಳಿಸಲಾಗಿತ್ತು ಎಂದು ಜೈಲು ಅಧಿಕಾರಿಗಳು ಹೇಳಿಕೊಂಡಿದ್ದರು. ಇದರಿಂದ ಮೃತದೇಹದ ಮೂಲ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ. ಈ ಬಗ್ಗೆಯೂ ಫ್ರೀಮನ್ ಪ್ರಶ್ನೆ ಎತ್ತಿದ್ದಾರೆ.
ಏನೀ ಎಪ್ಸ್ಟೀನ್ ಪ್ರಕರಣ; ಯಾರು ಈ ವಿಕೃತ ಕಾಮುಕ?
ಜೆಫ್ರಿ ಎಪ್ಸ್ಟೀನ್ ಅಮೆರಿಕದ ಶ್ರೀಮಂತ ಹಣಕಾಸು ಉದ್ಯಮಿಯಾಗಿದ್ದವ. ನ್ಯೂಯಾರ್ಕ್, ಫ್ಲೋರಿಡಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದ ಈತ, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಗಣ್ಯರೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ. ಆತನ ಐಷಾರಾಮಿ ಜೀವನದ ಹಿಂದೆ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಜಾಲವಿತ್ತು.
ಹಣ, ಉದ್ಯೋಗ, ಮಾಡೆಲಿಂಗ್ ಅವಕಾಶ ಹಾಗೂ ಉತ್ತಮ ಭವಿಷ್ಯದ ಭರವಸೆಯೊಂದಿಗೆ ಯುವತಿಯರನ್ನು ಸಂಪರ್ಕಿಸಿ, ನಂತರ ಅವರನ್ನು ಲೈಂಗಿಕ ದೌರ್ಜನ್ಯದ ಕರಾಳತೆಗೆ ದೂಡಲಾಗುತ್ತಿತ್ತು.
ಮುಖ್ಯವಾಗಿ, ಎಪ್ಸ್ಟೀನ್ – ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಬ್ರಿಟನ್ನ ಮಾಜಿ ರಾಜಕುಮಾರ ಆಂಡ್ರ್ಯೂ ಸೇರಿದಂತೆ ಹಲವು ಗಣ್ಯರೊಂದಿಗೆ ಸಂಪರ್ಕ ಹೊಂದಿದ್ದ ಎಂಬುದು ಹಲವು ದಾಖಲೆಗಳಿಂದ ಬಹಿರಂಗವಾಗಿದೆ. ಗಮನಾರ್ಹವಾಗಿ, ಭಾರತದ ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೂ ಎಪ್ಸ್ಟೀನ್ ಜೊತೆ ನಂಟು ಇತ್ತು ಎಂಬ ಗಂಭೀರ ಆರೋಪಗಳೂ ಇವೆ.
ಈ ಪ್ರಭಾವಿಗಳೊಂದಿಗಿನ ಸಂಪರ್ಕಕ್ಕೂ ಆತನ ಲೈಂಗಿಕ ಅಪರಾಧಗಳಿಗೂ ನೇರ ಸಂಬಂಧವಿದೆ ಎಂಬ ಆರೋಪಗಳೂ ಇವೆ. ಆದರೆ, ಇವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಮತ್ತು ಎಫ್ಬಿಐ ಪೂರ್ಣವಾಗಿ ಬಹಿರಂಗಗೊಳಿಸಿಲ್ಲ.
ಈ ಎಪ್ಸ್ಟೀನ್ ವಿರುದ್ಧ ಮೊದಲ ಬಾರಿಗೆ 2008ರಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಬಹಿರಂಗಗೊಂಡಿತ್ತು. ಫ್ಲೋರಿಡಾದಲ್ಲಿ ಅಪ್ರಾಪ್ತೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅದೇ ವರ್ಷ ಆತನನ್ನು ಬಂಧಿಸಲಾಗಿತ್ತು. ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದ. ಆದಾಗ್ಯೂ ಆತನಿಗೆ ತೀರಾ ಲಘು ಶಿಕ್ಷೆ ವಿಧಿಸಲಾಗಿತ್ತು. ಆತ, ಶೀಘ್ರವೇ ಬಿಡುಗಡೆಯಾಗಿದ್ದ.
ನಂತರ, 2019ರ ಜುಲೈ 6ರಂದು ಅಪ್ರಾಪ್ತ ಬಾಲಕಿಯರ ಲೈಂಗಿಕ ಕಳ್ಳಸಾಗಣೆಗೆ ಸಂಬಂಧಿಸಿದ ಆರೋಪಗಳಡಿ ಆತನನ್ನು ಮತ್ತೆ ಬಂಧಿಸಲಾಯಿತು. ಆದರೆ, ಆ ಪ್ರಕರಣದ ಪೂರ್ಣ ವಿಚಾರಣೆ ನಡೆಯುವ ಮೊದಲೇ ಆತ ಸಾವನ್ನಪ್ಪಿದ್ದ. ಆತನ ಸಾವು, ಆತನಿಗಿದ್ದ ಸಂಪರ್ಕ ಹಾಗೂ ಗಣ್ಯರ ಜೊತೆಗಿನ ಆತನ ನಂಟಿನ ಉದ್ದೇಶಗಳ ಕುರಿತು ತನಿಖೆಗಳು ಮುಂದುವರೆದಿವೆ.
ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?
ಇದೆಲ್ಲದರ ನಡುವೆ, ಇತ್ತೀಚೆಗೆ, ಎಪ್ಸ್ಟೀನ್ ಲೈಂಗಿಕ ಶೋಷಣೆಯ ಜಾಲದ ಕುರಿತು ಬಿಬಿಸಿ ಬಿಡುಗಡೆ ಮಾಡಿದ ‘The Model Trap: Exposing Jeffrey Epstein’s Network’ ಸಾಕ್ಷ್ಯಚಿತ್ರವು ಮತ್ತಷ್ಟು ಗಂಭೀರ ಆರೋಪಗಳನ್ನು ಬಹಿರಂಗಪಡಿಸಿದೆ.
ಈ ಸಾಕ್ಷ್ಯಚಿತ್ರದಲ್ಲಿ ‘ಸಿಮೋನಾ’ ಎಂಬ ಕಾಲ್ಪನಿಕ ಹೆಸರಿನಲ್ಲಿ ಮಾತನಾಡಿರುವ ಪೂರ್ವ ಯುರೋಪ್ನ ಸಂತ್ರಸ್ತೆಯೊಬ್ಬರು ತಾವು ಅನುಭವಿಸಿದ ಕರಾಳ ಅನುಭವಗಳನ್ನು ವಿವರಿಸಿದ್ದಾರೆ. ಸಿಮೋನಾ ಅವರು20 ವರ್ಷ ವಯಸ್ಸಿನವರಿದ್ದಾಗ ಮಾಡೆಲಿಂಗ್ ವೃತ್ತಿಗಾಗಿ ನ್ಯೂಯಾರ್ಕ್ಗೆ ಬಂದಿದ್ದರು. ಆಗ ಎಪ್ಸ್ಟೀನ್ನನ್ನು ಭೇಟಿಯಾಗಿದ್ದರು. ಈ ವೇಳೆ, ಸಿಮೋನಾ ಅವರಿಗೆ ಎಪ್ಸ್ಟೀನ್ ತನ್ನ ಸ್ನೇಹಿತೆ, ಮಾಡೆಲಿಂಗ್ ಸಂಸ್ಥೆ ‘Next Management’ನ ಹಿರಿಯ ಕಾರ್ಯನಿರ್ವಾಹಕಿ ಫೇಯ್ತ್ ಕೇಟ್ಸ್ ಅವರನ್ನು ಪರಿಚಯಿಸಿದ್ದ.
“ಆ ಭೇಟಿಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತೆ ತಮಗೆ ಕೇಟ್ಸ್ ಸಲಹೆ ನೀಡಿದ್ದರು. ಬಳಿಕ, ಮಾಡೆಲಿಂಗ್ ಬಿಟ್ಟು ತಮ್ಮ ಸಹಾಯಕಿಯಾಗಿ ಕೆಲಸ ಮಾಡುವಂತೆ ಎಪ್ಸ್ಟೀನ್ ಒತ್ತಾಯಿಸಿದ್ದರು. ಆ ನಂತರದ ಎರಡು ವರ್ಷಗಳ ಕಾಲ ತಮ್ಮ ಬದುಕಿನ ಮೇಲೆ ನಿಯಂತ್ರಣ ಸಾಧಿಸಿದ ಎಪ್ಸ್ಟೀನ್, ನನ್ನ ಮೇಲೆ 200ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಎಸಗಿದ್ದಾನೆ” ಎಂದು ಸಿಮೋನಾ ಆರೋಪಿಸಿದ್ದಾರೆ.
ಅಲ್ಲದೆ, “ಸಂತ್ರಸ್ತೆಯರು ಹಣ ಅಥವಾ ಪ್ರಭಾವಕ್ಕಾಗಿ ಸ್ವಯಂಪ್ರೇರಿತವಾಗಿ ಎಪ್ಸ್ಟೀನ್ ಜೊತೆ ಇಂತಹ ಸಂಬಂಧಗಳಲ್ಲಿ ಇದ್ದರು ಎಂಬ ಅಭಿಪ್ರಾಯ ಸಂಪೂರ್ಣ ಸುಳ್ಳು. ಶೋಷಣೆಯಿಂದ ಹಲವಾರು ಸಂತ್ರಸ್ತೆಯರು ತೀವ್ರ ಮಾನಸಿಕ ಆಘಾತ ಅನುಭವಿಸಿದ್ದಾರೆ. ನಾನೂ ತೀವ್ರವಾಗಿ ಕುಗ್ಗಿದ್ದೇನೆ” ಎಂದು ಸಿಮೋನಾ ವಿವರಿಸಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ದಾಖಲೆಗಳಲ್ಲಿ, ಇನ್ನೂ ಐವರು ಮಾಡೆಲ್ಗಳನ್ನು ಭೇಟಿಯಾಗುವಂತೆ ಕೇಟ್ಸ್ ಅವರಿಗೆ ಎಪ್ಸ್ಟೀನ್ ಸೂಚಿಸಿರುವ ಉಲ್ಲೇಖಗಳಿವೆ ಎಂದು ಬಿಬಿಸಿ ವರದಿ ಮಾಡಿದೆ.
ಲೈಂಗಿಕ ಶೋಷಣೆಗೆ ನೆರವಾಗಿದ್ದ ಮ್ಯಾಕ್ಸ್ವೆಲ್ಗೆ 20 ವರ್ಷ ಜೈಲು
ಎಪ್ಸ್ಟೀನ್ ಅವರ ಸಾವಿನ ನಂತರವೂ ಆತನ ಲೈಂಗಿಕ ದೌರ್ಜನ್ಯದ ಜಾಲಕ್ಕೆ ಸಂಬಂಧಿಸಿದ ನ್ಯಾಯಾಂಗ ಪ್ರಕ್ರಿಯೆಗಳು ಮುಂದುವರಿದಿವೆ. ಆತನ ಆಪ್ತೆಯಾಗಿದ್ದ ಗಿಸ್ಲೇನ್ ಮ್ಯಾಕ್ಸ್ವೆಲ್, ಅಪ್ರಾಪ್ತ ಬಾಲಕಿಯರನ್ನು ಎಪ್ಸ್ಟೀನ್ ಅವರ ಸಂಪರ್ಕಕ್ಕೆ ತಂದು ಲೈಂಗಿಕ ಶೋಷಣೆಗೆ ನೆರವಾಗುತ್ತಿದ್ದರು. 2021ರಲ್ಲಿ ಆಕೆಯನ್ನು ದೋಷಿಯೆಂದು ಘೋಷಿಸಿದ ನ್ಯಾಯಾಲಯವು, ಆಕೆಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈಗ ಉಳಿದಿರುವ ಪ್ರಶ್ನೆ: ಎಪ್ಸ್ಟೀನ್ ಕೊಲೆಯಾಗಿದ್ದರೆ, ಕೊಂದವರು ಯಾರು?
ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿದ್ದ ಎಪ್ಸ್ಟೀನ್ ಬದುಕಿದ್ದರೆ, ವಿಚಾರಣೆಯ ಸಂದರ್ಭದಲ್ಲಿ ಇನ್ನಷ್ಟು ಮಾಹಿತಿಗಳು ಬಹಿರಂಗವಾಗುತ್ತಿದ್ದವು. ಆತನ ಸಂಪರ್ಕದಲ್ಲಿದ್ದ ಗಣ್ಯರ ಸಂಗತಿಗಳೂ ಬೆಳಕಿಗೆ ಬರುತ್ತಿದ್ದವು. ಅದೇ ಕಾರಣಕ್ಕಾಗಿಯೇ ಆತನ್ನು ಕೊಲೆ ಮಾಡಲಾಗಿದೆ ಎಂಬ ಅಭಿಪ್ರಾಯಗಳಿವೆ. ಹೊಸ ಅಧ್ಯಯನ ನಡೆಸಿರುವ ಮೈಕೆಲ್ ಫ್ರೀಮನ್ ಕೂಡ ಎಪ್ಸ್ಟೀನ್ನದ್ದು ಕೊಲೆ ಎಂದೇ ಹೇಳಿದ್ದಾರೆ.
ಆದರೆ, ಆತನದ್ದು ಕೊಲೆಯೇ ಆಗಿದ್ದರೆ, ಹತ್ಯೆಗೈದವರು ಯಾರು ಎಂಬ ಪ್ರಶ್ನೆ ಉಳಿದಿದೆ. ಇದರ ಜೊತೆಗೆ, ಎಪ್ಸ್ಟೀನ್ನ ಲೈಂಗಿಕ ಕ್ರೌರ್ಯದ ಜಾಲಕ್ಕೆ ಬಲಿಯಾದ ಮಹಿಳೆಯರು ಮತ್ತು ಬಾಲಕಿಯರಿಗೆ ನ್ಯಾಯ ದೊರೆತಿದೆಯೇ, ದೊರಯುತ್ತದೆಯೇ ಎಂಬ ಗಂಭೀರ ಪ್ರಶ್ನೆಯೂ ಇದೆ.


