ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಎಂಬ ಆಹಾರ ಉತ್ಪನ್ನಗಳ ಉದ್ಯಮ ಘಟಕದಲ್ಲಿ ನಕಲಿ ಬ್ರ್ಯಾಂಡಿಂಗ್ ಹಾಗೂ ಲೇಬಲ್‌ಗೆ ಸಂಬಂಧಿಸಿದ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ.
ಬೋಲಾಸ್ ಸಂಸ್ಥೆಯ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, 10 ಕೆ.ಜಿಯ ಶೇಂಗಾ ಎಣ್ಣೆಯ 11 ಬಾಕ್ಸ್‌ಗಳು, 35 ಕೆ.ಜಿಯ 30 ಕ್ಯಾನ್‌ಗಳು ಹಾಗೂ 20 ಕೆ.ಜಿ. ತೂಕದ ತೆಂಗಿನ ಎಣ್ಣೆಯ 4 ಬಾಕ್ಸ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿತ್ರದುರ್ಗಾ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಶೇಂಗಾ ಎಣ್ಣೆಯನ್ನು ಖರೀದಿಸಿ, ಮರು ಪ್ಯಾಕಿಂಗ್ ಮಾಡಿ ʻಕೋಲ್ಡ್ ಪ್ರಸ್ಡ್ ಶೇಂಗಾ ಎಣ್ಣೆʼ ಎಂದು ಲೇಬಲ್ ಮಾಡಲಾಗುತ್ತಿತ್ತು. ಉತ್ಪನ್ನದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುತ್ತಿದ್ದರಿಂದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.




