ಕೇವಲ ಕೆಲವು ಗಂಟೆಗಳ ಹಿಂದೆ ನ್ಯಾಯಾಲಯದ ಅನುಮತಿಯೊಂದಿಗೆ ಪುನರಾರಂಭಗೊಂಡ ಡಾಂಬರು ಮಿಶ್ರಣ ಘಟಕದಿಂದ ಹೊರಬಂದ ವಿಷಾನಿಲ ಹಾಗೂ ದಟ್ಟ ಹೊಗೆಯಿಂದಾಗಿ, ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಿಯಂನ ‘ಆಕ್ಸಿಲಿಯಂ ಐಎಸ್‌ಸಿ ಸ್ಕೂಲ್’ನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಘಟನೆ ಬುಧವಾರ ನಡೆದಿದೆ.
ಶಾಲೆ ಆರಂಭವಾದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಉಸಿರಾಟದ ತೀವ್ರ ತೊಂದರೆ, ವಾಕರಿಕೆ, ವಾಂತಿ, ಕಣ್ಣು ಹಾಗೂ ಚರ್ಮದಲ್ಲಿ ತುರಿಕೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಕೂಡಲೇ ಎಚ್ಚೆತ್ತ ಶಾಲಾ ಆಡಳಿತ ಮಂಡಳಿಯು ತರಗತಿಗಳನ್ನು ತುರ್ತಾಗಿ ತೆರವುಗೊಳಿಸಿ, ಸ್ಥಳೀಯರ ಸಹಕಾರದೊಂದಿಗೆ ಒಟ್ಟು 8 ಆಂಬುಲೆನ್ಸ್‌ಗಳನ್ನು ಬಳಸಿ ಮಕ್ಕಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಈ ಕೈಗಾರಿಕಾ ಘಟಕವು ಆರೋಗ್ಯಕ್ಕೆ ಮಾರಕವಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇದೇ ಘಟಕದ ಮಾಲಿನ್ಯದಿಂದಾಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಪೋಷಕರು ಮತ್ತು ಸ್ಥಳೀಯರ ತೀವ್ರ ಪ್ರತಿಭಟನೆ ಹಾಗೂ ಆಕ್ರೋಶದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಈ ಘಟಕದ ವಿರುದ್ಧ ಅಧಿಕೃತವಾಗಿ ಕಾರ್ಯಾಚರಣೆ ನಿಲ್ಲಿಸುವ ಆದೇಶ ಜಾರಿಗೊಳಿಸಿತ್ತು.
ಆದರೆ, ಘಟಕದವರು ಇತ್ತೀಚೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬುಧವಾರ ಬೆಳಿಗ್ಗೆ ಪುನಃ ಕಾರ್ಯಾಚರಣೆ ಆರಂಭಿಸಿದ್ದರು. ಯಂತ್ರಗಳು ಕೆಲಸ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡು ಮಕ್ಕಳು ಪ್ರಜ್ಞೆತಪ್ಪುವ ಹಂತಕ್ಕೆ ತಲುಪಿದ್ದಾರೆ.
ಇನ್ನು ಘಟನೆಯ ಬಳಿಕ ಸ್ಥಳದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ. “ಮಕ್ಕಳ ಪ್ರಾಣದೊಂದಿಗೆ ಆಟವಾಡಬೇಡಿ ಎಂದು ನಾವು ಮೊದಲೇ ಎಚ್ಚರಿಸಿದ್ದೆವು. ಮಕ್ಕಳ ಉಸಿರಾಡುವ ಮೂಲಭೂತ ಹಕ್ಕುಗಳಿಗಿಂತ ನ್ಯಾಯಾಲಯದ ಆದೇಶ ದೊಡ್ಡದಾ?” ಎಂದು ಆಕ್ರೋಶಗೊಂಡ ಪೋಷಕರೊಬ್ಬರು ಪ್ರಶ್ನಿಸಿದ್ದಾರೆ.
ಪಂಚಾಯತ್ ನಿಷೇಧವಿದ್ದರೂ ನ್ಯಾಯಾಲಯದ ಹೆಸರಿನಲ್ಲಿ ಜನವಸತಿ ಪ್ರದೇಶದ ಸಮೀಪ ಅಪಾಯಕಾರಿ ಘಟಕಗಳನ್ನು ಮರುಪ್ರಾರಂಭಿಸಲು ಅವಕಾಶ ನೀಡುವುದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂದು ಆಗ್ರಹಿಸಿದ್ದಾರೆ. ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಹಾಗೂ ಪಂಚಾಯತ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದು, ಮುಂದಿನ ಕಾನೂನು ಕ್ರಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.



