2015ರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬಳಿಕ ಖುಲಾಸೆಗೊಂಡಿದ್ದ ವ್ಯಕ್ತಿಯೊಬ್ಬರನ್ನು ಹುಬ್ಬಳ್ಳಿಯಲ್ಲಿ ಶುಕ್ರವಾರ (ಆ.28) ಮಧ್ಯಾಹ್ನ ಸಾರ್ವಜನಿಕವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಹಳೆಯ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತರನ್ನು ದಾದಾಪೀರ್ ಉದಯಕರ್ ಎಂದು ಗುರುತಿಸಲಾಗಿದೆ. ವಿದ್ಯಾನಗರದ ಬನಶಂಕರಿ ಲೇಔಟ್ನ ಸಿದ್ದೇಶ್ವರ ಪಾರ್ಕ್ ಬಳಿ ಶುಕ್ರವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ದಾದಾಪೀರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಇಬ್ಬರು ಅಪರಿಚಿತರು ಅವರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಹರಿತವಾದ ಆಯುಧಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ದಾದಾಪೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ದಾಳಿ ನಡೆಸಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ದಾದಾಪೀರ್ 2015ರಲ್ಲಿ ಮಾರುತಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಆದರೆ 2017ರಲ್ಲಿ ನ್ಯಾಯಾಲಯ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದೀಗ ನಡೆದಿರುವ ಹತ್ಯೆಗೂ ಆ ಹಳೆಯ ಕೊಲೆ ಪ್ರಕರಣಕ್ಕೂ ಸಂಬಂಧವಿದೆಯೇ ಅಥವಾ ಬೇರೆ ಯಾವುದಾದರೂ ವೈಯಕ್ತಿಕ ದ್ವೇಷ ಕಾರಣವೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಇದನ್ನೂ ಓದಿ: ದೇಶಕ್ಕೆ ಆರ್ಎಸ್ಎಸ್ನಿಂದಲ್ಲ, ಕಾಂಗ್ರೆಸ್ನಿಂದ ಅಪಾಯ: ಎಚ್.ಡಿ. ಕುಮಾರಸ್ವಾಮಿ
ಘಟನೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ದಾಳಿ ನಡೆಸಿದವರ ಚಲನವಲನ ಹಾಗೂ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. “ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಗುರುತಿಸಿ ಪ್ರಕರಣ ದಾಖಲಿಸಲಾಗುವುದು” ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.




