ಆಗಸ್ಟ್ 12, ನಾಡು ಕಂಡ ಅಪರೂಪದ ನೀರಾವರಿತಜ್ಞ ಎಚ್.ಎನ್. ನಂಜೇಗೌಡರ ಜನ್ಮದಿನ. ದೇವರಾಜ ಅರಸು ಸಚಿವ ಸಂಪುಟದಲ್ಲಿ ನೀರಾವರಿ ಮಂತ್ರಿಯಾಗಿದ್ದು, ಜನಪರ ಕೆಲಸಕ್ಕೆ ಪಣತೊಟ್ಟು ಅಭಿವೃದ್ಧಿ ಕಾರ್ಯಗಳ ನನಸಾಗಿಸಿಕೊಂಡ ಕಾಲದಲ್ಲಿ ಹೇಮಾವತಿ, ಹಾರಂಗಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಶ್ರಮಿಸಿದರು. ಕಾನೂನು ಮತ್ತು ಸಂಸದೀಯ ನಡವಳಿಕೆಗಳಿಂದ ದೇಶದ ಗಮನ ಸೆಳೆದವರು. ಗೌಡರ ಕುರಿತಾದ ಕೃತಿ ಆ. 11ರಂದು, ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಬಿಡುಗಡೆ…
ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆ ಹೊಂದಿದ್ದ, ನಿಜವಾದ ಜಾತ್ಯತೀತ ನಿಲುವುಳ್ಳ, ಅಸಮಾನ್ಯ ಧೈರ್ಯಶಾಲಿ, ಜಂಗಮ ಸ್ವರೂಪಿ, ಹರಿತ ವಾಕ್ ಪಟು, ನೀರಾವರಿ ತಜ್ಞ ಎಂದರೆ ಹಾಸನ ಜಿಲ್ಲೆಯ ಹೆಚ್. ಎನ್. ನಂಜೇಗೌಡರು. ಕೆಚ್ಚೆದೆಯ ಕಲಿಯಾಗಿ ಒಂಟಿ ಸಲಗದಂತೆ ಸಂಸತ್ತಿನಲ್ಲಿ ಹೋರಾಟ ನಡೆಸುತ್ತಿದ್ದರು. ಪ್ರಜಾಪ್ರಭುತ್ವವನ್ನು ಬುಡದಿಂದ ನೆಲೆಯೂರಿಸುವ ಧೈರ್ಯವನ್ನು ಹೊಂದಿದ್ದರು. ಇವೆಲ್ಲದಕ್ಕೂ ಗಾಂಧಿ ವಿಚಾರಧಾರೆಗಳು ಅವರನ್ನು ಪ್ರಭಾವಿತರನ್ನಾಗಿಸಿತ್ತು. ಇವರ ದೃಢ ನಿಲುವುಗಳು ಇವರನ್ನು ಎಷ್ಟೋ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿಸಿದ್ದುಂಟು. ಆದರೂ ತಮ್ಮ ನಿಲುವುಗಳನ್ನು ಸಡಿಲಿಸಿಕೊಳ್ಳದ ನಿಷ್ಠುರವಾದಿ, ಪ್ರಜಾಪ್ರಭುತ್ವವಾದಿ, ಅಪರೂಪದ ಅಸಮಾನ್ಯ ರಾಜಕಾರಣಿಯಾಗಿದ್ದರು.
ವಿದ್ಯಾರ್ಥಿಯಾಗಿದ್ದಾಗಲೇ ಗೋವಾ ವಿಮೋಚನಾ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿ ರಾಜಕೀಯ ಕಿಚ್ಚು ಹತ್ತಿಸಿಕೊಂಡ ನಂಜೇಗೌಡರು, ಬಹುಮುಖ ವ್ಯಕ್ತಿತ್ವವನ್ನು ರೂಪಿಸಿಕೊಂಡು ಗಮನ ಸೆಳೆದವರು. ರಾಜಕಾರಣಿಯಾಗಿದ್ದರೂ ಅಪ್ಪಟ ದೇಶಪ್ರೇಮಿ. ದೇಶ ಸೇವೆಯ ಪಣ ತೊಟ್ಟಿದ್ದ ಅವರ ರಕ್ತದ ಕಣಕಣದಲ್ಲಿ ದೇಶಪ್ರೇಮವೇ ಹರಿಯುತ್ತಿತ್ತು. ಎರಡು ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯವಾಗಿದ್ದರೂ ಸಹ ತಮಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ರೈತರ ಹಿತಚಿಂತಕರಾಗಿ ಸಾಮಾಜಿಕ ಸೇವೆಗಾಗಿಯೇ ತಮ್ಮ ಬದುಕನ್ನು ಮುಡುಪಿಟ್ಟವರು. ಜನಸಾಮಾನ್ಯರ ಮೇಲೆ ಅತ್ಯಂತ ಕಳಕಳಿ ಮತ್ತು ಪ್ರೀತಿಯನ್ನು ಹೊಂದಿದ್ದರು. ಉತ್ತಮ ಸಂಸದೀಯ ಪಟುವಾಗಿ ಕೆಲಸ ನಿರ್ವಹಿಸಿ ಸಂಸದೀಯ ಇತಿಹಾಸಕ್ಕೆ ರಾಜಕಾರಣಕ್ಕೆ ನಿಜ ಅರ್ಥವನ್ನು ತಿಳಿಸಿ ಕೊಟ್ಟವರು.
1962ರಲ್ಲಿ ಮೊದಲ ಬಾರಿಗೆ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ನಂತರ 1967ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡಿನಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 1972ರಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಮತ್ತೊಮ್ಮೆ ಗೆದ್ದು ಡಿ. ದೇವರಾಜ ಅರಸು ಅವರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು.
ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ
ಅವರು ನೀರಾವರಿ ಖಾತೆ ಸಚಿವರಾಗಿ ಜನಪರ ಕೆಲಸಕ್ಕೆ ಪಣತೊಟ್ಟು ಅಭಿವೃದ್ಧಿ ಕಾರ್ಯಗಳ ನನಸಾಗಿಸಿಕೊಂಡ ಕಾಲದಲ್ಲಿ ಹೇಮಾವತಿ, ಹಾರಂಗಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಶ್ರಮಿಸಿದರು.
ರಸ್ತೆ, ಸೇತುವೆಗಳನ್ನೇ ಕಾಣದ ಅರಕಲಗೂಡು ತಾಲೂಕಿನ ಹತ್ತಾರು ಹಳ್ಳಿಗಳು ಹೊಸ ರಸ್ತೆಗಳನ್ನು ಕಂಡವು. ಕೃಷಿ ಚಟುವಟಿಕೆ ಚುರುಕುಗೊಂಡು ರೈತರ ಕೃಷಿ ಬದುಕು ಹಸನಾಗಲು ಕಾರಣರಾದರು. ಜೊತೆಗೆ ಆರ್ಥಿಕವಾಗಿ ಸಬಲರಾಗಲು ಬ್ಯಾಂಕ್ ಸೇವೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಹಳ್ಳಿ ಹಳ್ಳಿಗಳಲ್ಲಿ ಯಶಸ್ವಿಯಾಗಿ ಬ್ಯಾಂಕುಗಳು ತಲೆ ಎತ್ತುವಂತೆ ಮಾಡಿದರು.
ಹೇಮಾವತಿ ಜಲಾಶಯ ಯೋಜನೆ ಜಾರಿಯಾದದ್ದು ಅದೇ ಕಾಲಘಟ್ಟದಲ್ಲಿ. ರೈತರಿಗಾಗಿ ಏನನ್ನಾದರೂ ಮಾಡಬೇಕೆಂದು ಹಿನ್ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಚೆಕ್ ಡ್ಯಾಮ್ ನಿರ್ಮಿಸಿ ಸಾವಿರಾರು ಎಕರೆ ಕೃಷಿಗೆ ನೀರುಣಿಸಿ ರೈತರ ಬೆನ್ನೆಲುಬಾಗಿ ಅನ್ನದಾತನ ಬದುಕು ಅರಳಿಸಿದ ಕೀರ್ತಿಯನ್ನು ಗಳಿಸಿದರು. ಬಡತನದ ಕುಲುಮೆಯಲ್ಲಿ ಬೆಂದಿದ್ದ ನಂಜೇಗೌಡರು, ಶ್ರಮಿಕ ವರ್ಗದ ಏಳಿಗೆಗಾಗಿ ಹಲವು ಜನಪರ ಯೋಜನೆಗಳನ್ನು ರೂಪಿಸಿದ್ದರು.
ಇವರ ನೀರಾವರಿ ಬಗೆಗಿನ ಆಸ್ಥೆಗೆ ಹೆಚ್.ಎಂ. ಚನ್ನಬಸಪ್ಪ, ಎಸ್. ನಿಜಲಿಂಗಪ್ಪನವರ ಮಾರ್ಗದರ್ಶನವಿತ್ತು. ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು. ಅಪಾರ ಜ್ಞಾನ, ಸಜ್ಜನಿಕೆ ಕಾರಣದಿಂದಾಗಿಯೇ ಎಲ್ಲಾ ಪಕ್ಷಗಳ ನಾಯಕರೊಂದಿಗೂ ಸ್ನೇಹ ಸಂಪಾದಿಸಿದ್ದರು. ಆದರೆ, ಇವರ ಮಕ್ಕಳು ಯಾರೂ ಇವರಂತೆ ರಾಜಕಾರಣಕ್ಕೂ ಬರಲಿಲ್ಲ, ಗುರುತಿಸುವಂತಹ ನಾಯಕರೂ ಆಗಲಿಲ್ಲ.
ಉತ್ತಮ ಗಾಯಕರು
ನಂಜೇಗೌಡರು ರಾಜಕೀಯ ವಿಚಾರ ಕುರಿತು ಮಾತಿಗಿಳಿದರೆ, ಅತಿರಥ ಮಹಾರಥರ ನಡುವೆಯೂ ಇವರ ವಿಚಾರಪ್ರದ ಭಾಷಣ ಸಾರ್ವಜನಿಕರ ಗಮನ ಸೆಳೆದು ಕೇಂದ್ರಬಿಂದುವಾಗಿ ಬಿಡುತ್ತಿದ್ದರು. ಅವರು ಉತ್ತಮ ಗಾಯಕರು ಎಂಬುದು ಹೆಚ್ಚು ಮಂದಿಗೆ ತಿಳಿದಿರಲಿಕ್ಕಿಲ್ಲ. ಭಾಷಣ, ಸಂಭಾಷಣೆಗಳ ಮಧ್ಯೆ ಡಿವಿಜಿ ಅವರ “ಮಂಕುತಿಮ್ಮನ ಕಗ್ಗ”ವನ್ನು ಹಾಡುತ್ತಾ ಗಮನ ಸೆಳೆಯುತ್ತಿದ್ದರು.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ರಾಜೀವ್ ಗಾಂಧಿ ಮಂತ್ರಿಮಂಡಲದಲ್ಲಿ ಹಣಕಾಸು ಸಚಿವರಾಗಿ ನಂತರ ಭಾರತದ 7ನೇ ಪ್ರಧಾನ ಮಂತ್ರಿಯೂ ಆಗಿದ್ದ ವಿಶ್ವನಾಥ ಪ್ರತಾಪ್ ಸಿಂಗ್ ರವರು, ಉತ್ತರ ಭಾರತದಲ್ಲಿ ಲೋಕಸಭಾ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವುದಾಗಿ ಗೌಡರಿಗೆ ಹೇಳಿದ್ದರು. ಆದರೆ ನಂಜೇಗೌಡರು ಒಪ್ಪಲಿಲ್ಲ.
ನಂತರದ ದಿನಗಳಲ್ಲಿ ಒಮ್ಮೆ ಬೆಂಗಳೂರಿನ ಬಸವನಗುಡಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರೂ ಮೌಲ್ಯರಹಿತ ರಾಜಕಾರಣಿಗಳೊಂದಿಗೆ ರಾಜಿ ಮಾಡಿಕೊಳ್ಳದ ಗೌಡರು, “ಬಿಜೆಪಿಯದ್ದು ಗರ್ಭಗುಡಿ” ಸಂಸ್ಕೃತಿ ಎಂದು ತಾನಿದ್ದ ಪಕ್ಷದ ವಿರುದ್ಧವೇ ಅಸೆಂಬ್ಲಿಯೊಳಗೆ ಗುಡುಗಿ ಹೊರ ನಡೆದರು. ಸ್ವಾಭಿಮಾನಕ್ಕೆ ಧಕ್ಕೆಯಾದಾಗಲೆಲ್ಲ ಪಕ್ಷ ಬದಲಾಯಿಸುತ್ತಿದ್ದ ಕಾರಣ ಅವರ ಅನುಯಾಯಿಗಳಿಗೆ ತೊಂದರೆಯಾಗುತ್ತಿತ್ತು. ಆದರೂ ಅವರೆಂದೂ ಶಿಷ್ಯರನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುತ್ತಿರಲಿಲ್ಲ. ಒಬ್ಬಂಟಿಯಾಗಿ ಹೋಗಿ, ಹೋದ ಪಕ್ಷದಲ್ಲೇ ಹೊಸ ಶಿಷ್ಯ ವೃಂದವನ್ನು ಸಂಪಾದಿಸಿಕೊಳ್ಳುವಷ್ಟು ಚತುರತೆ ಅವರಲ್ಲಿತ್ತು. ಬೆರಗಾಗುವಂತಹ ವಿಚಾರ ಶಕ್ತಿ, ಜ್ಞಾನದ ಗಣಿಯನ್ನು ಹೊಂದಿದ್ದ ನಂಜೇಗೌಡರದ್ದು ಹಠವಾದಿ, ಛಲವಾದಿ ವ್ಯಕ್ತಿತ್ವ. ಆರೋಗ್ಯಕರ ಜಗಳ ಕಾಯುವ ವಾಚಾಳಿತನವೂ ಇವರ ಬೆನ್ನಿಗಂಟಿತ್ತು.
ಸೋನಿಯಾ ವಿರುದ್ಧವೂ ಸಿಡಿಗುಂಡು
1980ರ ದಶಕದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅದೇ ಪಕ್ಷದ ಲೋಕಸಭೆ ಸದಸ್ಯರಾಗಿದ್ದುಕೊಂಡು ಬೋಫೋರ್ಸ್ ಹಗರಣದ ಆರೋಪವು ಆಡಳಿತ ಪಕ್ಷದ ಮೇಲೆ ಕೇಳಿ ಬಂದಾಗ ತಮ್ಮ ಪಕ್ಷದ ವಿರುದ್ಧವಾಗಿಯೇ ಸಂಸತ್ತಿನಲ್ಲಿ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ರಾಜೀವ್ ಗಾಂಧಿ ವಿರುದ್ಧವೇ ಕಟು ಆರೋಪ ಮಾಡಿ ದೇಶವೇ ತಲ್ಲಣಗೊಳ್ಳುವಂತೆ ಮಾಡಿದ ಎದೆಗಾರಿಕೆ ಸಣ್ಣದಲ್ಲ.
ಶಾಸಕಾಂಗ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ತಾನೇ ಸರ್ಕಾರದಂತೆ ವರ್ತಿಸಬಾರದು ಎಂದು ಸುಪ್ರೀಂ ಕೋರ್ಟ್ ಅನ್ನೇ ದಿಟ್ಟತನದಿಂದ ಪ್ರಶ್ನಿಸಿದ್ದರು. ಇದೆಲ್ಲಾ ಇವರ ಪ್ರಾಮಾಣಿಕತೆಗೆ ಸಾಕ್ಷಿಗಲ್ಲಾಗಿರುವ ಘಟನೆಗಳಾಗಿವೆ. ಇಂತಹ ಸಾಕಷ್ಟು ಘಟನೆಗಳು ಅವರ ರಾಜಕೀಯ ಬದುಕಿನುದ್ದಕ್ಕೂ ತೆರೆದುಕೊಳ್ಳುತ್ತವೆ.
ಯಾವುದೇ ಪಕ್ಷದ ವಿಷಯವಾಗಲಿ ತಪ್ಪು ಎಂಬುದು ಕಂಡಾಗ ತನ್ನನ್ನು ಅಧಿಕಾರದಿಂದ ಕಿತ್ತೊಗೆಯಬಹುದೆಂಬ ಭಯವನ್ನು ಇಟ್ಟುಕೊಳ್ಳದೆ ತಪ್ಪು ಅನಿಸಿದ್ದನ್ನೆಲ್ಲಾ ವಿರೋಧಿಸಿ ಪಕ್ಷ ಬದಲಾಯಿಸುತ್ತಾ ರಾಜಕಾರಣ ಮಾಡಿದ್ದರಿಂದಾಗಿ ಎಲ್ಲಿಯೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಅವರ ವೃತ್ತಿ ಬದುಕಿಗೂ ಮಾರಕವಾಯಿತು.
ನಮ್ಮ ರಾಜ್ಯದ ಜೀವನದಿ ಕಾವೇರಿ ನದಿ ನೀರಿನ ಸಮರ್ಪಕ ಪ್ರಯೋಜನ ಪಡೆದುಕೊಳ್ಳುವಲ್ಲಿ ತಮಿಳುನಾಡಿನ ಪ್ರಾಬಲ್ಯದಿಂದ ಅಸಹಾಯಕವಾಗಿದ್ದ ಸರ್ಕಾರಕ್ಕೆ ಬೆನ್ನೆಲುಬಾಗಿ, ನೀರಾವರಿ ಕುರಿತು ಉಂಟಾದ ಸಂಕಟ ಸಮಯದಲ್ಲೆಲ್ಲ ಆಪದ್ಬಾಂಧವರಾಗಿ ಪ್ರತ್ಯೇಕ ಪ್ರಾಧಿಕಾರದ ಮುಂದೆ ವಾದ ಮಂಡಿಸಲು ಅಪಾರವಾದ ನೆರವನ್ನು ಒದಗಿಸಲು ಶ್ರಮಿಸಿದವರು ನಂಜೇಗೌಡರು.
ನದಿ ನೀರು ವಿವಾದ ಕುರಿತ ಚಳವಳಿಗಳ, ವಿವಿಧ ಸಂಘಟನೆಗಳ ಹೋರಾಟಕ್ಕೆ ಪ್ರೇರಕ ಶಕ್ತಿಯಾಗಿ ನಿಂತವರು ಇದೇ ನಂಜೇಗೌಡರು. ತಮ್ಮ ಬದುಕಿನುದ್ದಕ್ಕೂ ಸಾರ್ವಜನಿಕ ಹಿತಾಸಕ್ತಿಗಾಗಿ ರೈತರ ಒಳಿತಿಗಾಗಿ ವಿದ್ವತ್ತನ್ನು ಸವೆಸಿದರೂ ಸಹ ಬೀಗದೆ ಅದರಿಂದ ತೃಪ್ತಿ ಕಂಡವರು. ಮೈಸೂರು ಭಾಗದ ಜನರು, ಬೆಂಗಳೂರಿನ ನಾಗರಿಕರು ನಂಜೇಗೌಡರಿಗೆ ಕೃತಜ್ಞತೆ ಹೇಳಲೇಬೇಕು. ಏಕೆಂದರೆ ಈ ಭಾಗದ ಜನರೆಲ್ಲರೂ ಅವರ ಯೋಜನೆಯ ಫಲಾನುಭವಿಗಳು.
ಅಂತಾರಾಷ್ಟ್ರೀಯ ಜಲತಜ್ಞ
ನೀರಾವರಿ ತಜ್ಞರೆಂದೇ ಬಿಂಬಿಸಲಾಗುತ್ತಿದ್ದ ನಂಜೇಗೌಡರಿಗೆ ಕಡೆಯವರೆಗೂ ನೀರಾವರಿ ವಿಚಾರಗಳ ಬಗ್ಗೆ ಆಸಕ್ತಿ ಬತ್ತಿರಲಿಲ್ಲ. ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಕೃಷ್ಣ, ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಆ ಕ್ಷಣವೇ ಬ್ರಹ್ಮಾಂಡ ಅಂಕಿ ಅಂಶಗಳೊಂದಿಗೆ ವಿವರ ನೀಡುತ್ತಿದ್ದರು. ನಿದ್ದೆಯಿಂದ ಎಬ್ಬಿಸಿ ಕೇಳಿದರೂ ತಡವರಿಸದೆ ಸಮರ್ಥ, ಸ್ಪಷ್ಟ ವಿವರಣೆ ನೀಡುವಷ್ಟು ವಿಷಯ ಪರಿಣಿತರಾಗಿದ್ದರು.
ಅಂತಾರಾಷ್ಟ್ರೀಯ ಜಲವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಕಾವೇರಿ, ಕೃಷ್ಣ ಕೊಳ್ಳದ ಬಗ್ಗೆ ಅಧಿಕೃತವಾಗಿ ಮಾತನಾಡ ಬಲ್ಲವರಾಗಿದ್ದರು. ಯಾವುದೇ ಪಕ್ಷದವರೂ, ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳು ಸಹ ಇವರ ಸಲಹೆ ಪಡೆದುಕೊಳ್ಳುತ್ತಿದ್ದರೆಂದರೆ ಅದೆಷ್ಟು ವಿಷಯ ಜ್ಞಾನಿಯಾಗಿದ್ದರು ಎಂಬುದು ತಿಳಿಯುತ್ತದೆ.
ಕರ್ನಾಟಕದ ಅತ್ಯಂತ ಬುದ್ಧಿವಂತ, ಅಧ್ಯಯನಶೀಲ ರಾಜಕಾರಣಿ, ಪ್ರಾಮಾಣಿಕ, ಸಮರ್ಥ ನಾಯಕ ಇತ್ಯಾದಿಗಳೆಲ್ಲ ನಂಜೇಗೌಡರಿಗೆ ಅನ್ವರ್ಥ ಪದಗಳು. ಅಪರೂಪದ ರಾಜಕಾರಣಿ ಎಂದೇ ಗುರುತಿಸಬಲ್ಲ ಗುಣವನ್ನು ಹೊಂದಿದ್ದ ನಂಜೇಗೌಡರು ಕ್ರಿಯಾತ್ಮಕವಾಗಿ ರಾಜಕೀಯ ಕೆಲಸಗಳನ್ನು ಮಾಡುವ ಸ್ವಭಾವದವರು.
ಪತ್ರಕರ್ತರೊಂದಿಗೂ ನಿಕಟ ಸಂಪರ್ಕ ಹೊಂದಿದ್ದ ಗೌಡರು, ನೀರಾವರಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಅಪಾರ ಎಚ್ಚರಿಕೆ ವಹಿಸುತ್ತಿದ್ದರು. ಯಾವುದೇ ವಿಷಯ ಕುರಿತಾಗಿ ಮಾಧ್ಯಮದವರ ಮುಂದೆ ನಿಲ್ಲುವಾಗ ಆ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಿಸಿ ಯಾವುದೇ ದಾಖಲೆಗಳನ್ನು ಕೈಯಲ್ಲಿ ಹಿಡಿಯದೆ ಅಂಕಿ ಅಂಶಗಳ ಸಮೇತ ನಿಖರವಾದ ಮಾಹಿತಿಯನ್ನು ನೀಡುತ್ತಿದ್ದರು.
ಇಂದಿನ ಬಹುತೇಕ ರಾಜಕಾರಣಿಗಳು ಯಾವುದೇ ಅಧ್ಯಯನ ಮಾಡದೆ ಅಸಂಬದ್ಧವಾಗಿ ಮಾತನಾಡುತ್ತಾರೆ. ತಮ್ಮ ಹೇಳಿಕೆಗಳಿಗೂ ತಮಗೂ ಅರಿವಿಲ್ಲವೆಂಬಂತೆ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಗೊಂದಲ ಸೃಷ್ಟಿಸುತ್ತಾರೆ. ವಿಚಾರಗಳನ್ನು, ವಿಷಯಗಳನ್ನು ವಿವಾದಗಳಾಗಿ ಪರಿವರ್ತಿಸುತ್ತಾರೆ. ಇಂದಿನ ಮೌಲ್ಯರಹಿತ ಮುಸುಕು ದಾರಿ ರಾಜಕಾರಣಿಗಳಿಗೆ ಹೆಚ್. ಎನ್. ನಂಜೇಗೌಡರು ಮಾದರಿ.
ರಾಜಕೀಯ ಪಂಡಿತರನ್ನೂ ಮೀರಿಸುವಷ್ಟು ವಿದ್ವತ್ತುಳ್ಳ ಹೆಚ್.ಎನ್. ನಂಜೇಗೌಡರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದರೂ ಸಾಧ್ಯವಾಗಲಿಲ್ಲ. ಕಡೆ ಪಕ್ಷ ಸಮಾಜವಾದಿ ನಾಯಕರಾಗಿ ಚಾಪು ಒತ್ತಿದ ಶಾಂತವೇರಿ ಗೋಪಾಲಗೌಡರ ಮಟ್ಟಕ್ಕಾದರೂ ಏರಲು ಸಾಧ್ಯವಾಗದೇ ಇದ್ದದ್ದು ಮಾತ್ರ ದುರದೃಷ್ಟಕರ.
ಮುನ್ನೆಲೆಗೆ ಬಾರದ ವಿದ್ವತ್ ಪೂರ್ಣ ರಾಜಕಾರಣಿ
ಅಸಂಬದ್ಧ ಹೇಳಿಕೆಗಳನ್ನು, ಸುಳ್ಳುಗಳನ್ನು ಹೇಳಿ ಸಮರ್ಥಿಸಿಕೊಳ್ಳಲು ಒಪ್ಪದ ನಂಜೇಗೌಡರ ಸ್ವಾಭಿಮಾನಿ ಮನಸ್ಸು, ಸಂಕಷ್ಟಗಳನ್ನು ಮೇಲೇರಿಕೊಂಡದ್ದೇ ಹೆಚ್ಚು. ಇವರ ರಾಜಕೀಯ ಜೀವನ, ಮುಸ್ಸದ್ಧಿತನದ ಬಗ್ಗೆ ಹೇಳುತ್ತಾ ಹೋದರೆ ಬಾವಿ ನೀರನ್ನು ಹೊರ ತೆಗೆದಂತೆ ಅಪಾರ ವಿಷಯಗಳು ಉಕ್ಕುತ್ತವೆ, ತೆರೆದುಕೊಳ್ಳುತ್ತವೆ. ಅದರಲ್ಲೂ ಅವರ ಸಮಕಾಲೀನರ ಬಾಯಿಂದ ಕೇಳಿದರಂತೂ ರಾಜಕೀಯ ವ್ಯವಸ್ಥೆಯನ್ನು ನಾಚಿಸುವಂತಹ ವ್ಯಕ್ತಿತ್ವ. ಇಂತಹ ವ್ಯಕ್ತಿ ನಾಡಿನ ಶಕ್ತಿ ನಮ್ಮ ನಡುವೆ ಇದ್ದಾಗಲೂ ಗಮನಿಸದೇ ಇದ್ದದ್ದು, ಅವರ ಅನರ್ಘ್ಯ ಗಣಿಯನ್ನು ಬಳಸಿಕೊಳ್ಳದೆ ಇದ್ದದ್ದು ಖೇದಕರ.