ಶಿಕ್ಷಣ ಹಕ್ಕು ಕಾಯಿದೆಯನ್ನು ಸಮಗ್ರವಾಗಿ ಜಾರಿಗೊಳಿಸುವುದು ಹಾಗೂ ಸರ್ಕಾರಿ ಶಾಲೆಗಳ ಶಾಲಾ ದತ್ತು ಮತ್ತು ಮೆಂಟರ್ ಯೋಜನೆಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ ವತಿಯಿಂದ ನವೆಂಬರ್ 26ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಚಾಲಕಿ ವಿದ್ಯಾ ಪಾಟೀಲ್ ತಿಳಿಸಿದ್ದಾರೆ.
ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದ್ದು, ಅದು ಔದಾರ್ಯದ ಭಿಕ್ಷೆಯಲ್ಲ. ಸಂವಿಧಾನ ನೀಡಿರುವ ಈ ಹಕ್ಕನ್ನು ಸಾಕಾರಗೊಳಿಸುವುದು ಸರ್ಕಾರದ ಕಾನೂನುಬದ್ಧ ಕರ್ತವ್ಯವಾಗಿದೆ. ಎಲ್ಲ ಮಕ್ಕಳಿಗೂ ಸಮಾನ ಅವಕಾಶ, ಗುಣಮಟ್ಟದ ಶಿಕ್ಷಣ ಮತ್ತು ಗೌರವಯುತ ಬದುಕು ಕಲ್ಪಿಸುವುದು ಶಿಕ್ಷಣ ಹಕ್ಕು ಕಾಯಿದೆಯ ಮೂಲ ಆಶಯವಾಗಿದೆ ಎಂದರು.
2002ರಲ್ಲಿ 86 ನೇ ಸಂವಿಧಾನ ತಿದ್ದುಪಡಿ ಮೂಲಕ ಸಂವಿಧಾನದ ಅನುಚ್ಛೇದ 21ಎ ಸೇರ್ಪಡೆಗೊಳಿಸಿ, 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾನ್ಯ ಮಾಡಲಾಗಿದೆ. ಇದರ ಅನುಷ್ಠಾನಕ್ಕಾಗಿ ರೂಪಿಸಲಾದ ಶಿಕ್ಷಣ ಹಕ್ಕು ಕಾಯಿದೆ-2009, 2010ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಕಾಯಿದೆಯ ಆಶಯದಂತೆ ನಿಗದಿತ ಅವಧಿಯಲ್ಲಿ ಸಮಗ್ರ ಅನುಷ್ಠಾನವಾಗಬೇಕಿದ್ದರೂ, ಹಲವು ವರ್ಷಗಳು ಕಳೆದರೂ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರತಿಯೊಂದು ಮಗು ಶಾಲೆಗೆ ಸೇರಿ, ನಿರಂತರವಾಗಿ ಕಲಿತು ಶಾಲಾ ಶಿಕ್ಷಣ ಪೂರ್ಣಗೊಳಿಸುವುದನ್ನು ಖಚಿತಪಡಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಇದಕ್ಕಾಗಿ ಅಗತ್ಯ ಶಿಕ್ಷಕರು, ಮೂಲಸೌಕರ್ಯ, ಕಲಿಕಾ ಸಾಮಗ್ರಿ ಹಾಗೂ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಆದರೆ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಬದಲು ಖಾಸಗಿ ಸಂಸ್ಥೆಗಳ ದಾನ, ಧರ್ಮ ಮತ್ತು ದತ್ತು ಯೋಜನೆಗಳ ಮೇಲೆ ಅವಲಂಬಿತವಾಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಗಳನ್ನು ಖಾಸಗಿ ಆಡಳಿತ ಮಂಡಳಿ ಅಥವಾ ಕಾರ್ಪೊರೇಟ್ ಸಂಸ್ಥೆಗಳ ಸುಪರ್ದಿಗೆ ನೀಡುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸಾರ್ವಜನಿಕ ಶಿಕ್ಷಣದ ಸಂಪೂರ್ಣ ಹೊಣೆಗಾರಿಕೆಯನ್ನು ಸರ್ಕಾರವೇ ವಹಿಸಬೇಕು. ಸಾರ್ವಜನಿಕ ಹಣಕಾಸು ಮತ್ತು ಉತ್ತರದಾಯಿತ್ವದ ಆಡಳಿತದ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯಿದೆಯನ್ನು ಮೂರು ತಿಂಗಳೊಳಗೆ ಸಮಗ್ರವಾಗಿ ಜಾರಿಗೊಳಿಸಬೇಕು ಹಾಗೂ ಶಾಲಾ ದತ್ತು ಮತ್ತು ಮೆಂಟರ್ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ. ಈ ಬೇಡಿಕೆಗಳ ಕುರಿತು ಸರ್ಕಾರವೇ ಧರಣಿ ಸ್ಥಳಕ್ಕೆ ಆಗಮಿಸಿ, ಸ್ಪಷ್ಟ ಕಾಲಮಿತಿಯೊಂದಿಗೆ ಲಿಖಿತ ಭರವಸೆ ನೀಡುವವರೆಗೆ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅವ್ಯವಸ್ಥೆಯ ಆಗರವಾದ ವಸತಿ ನಿಲಯ: ಜೀವ ಭಯದಲ್ಲಿ ವಿದ್ಯಾರ್ಥಿಗಳು!
ನವೆಂಬರ್ 26ರ ಸಂವಿಧಾನ ದಿನದಂದು ಆರಂಭವಾಗಲಿರುವ ಈ ಹೋರಾಟಕ್ಕೆ ಪೋಷಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಕನ್ನಡಪರ ಸಂಘಟನೆಗಳು, ದಲಿತ ಮತ್ತು ಆದಿವಾಸಿ ಪರ ಸಂಘಟನೆಗಳು, ಯುವ ಹಾಗೂ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಪ್ರಜ್ಞಾವಂತ ನಾಗರಿಕರು ಬೆಂಬಲ ನೀಡುವಂತೆ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ ಮನವಿ ಮಾಡಿದೆ ಎಂದರು.



