ನದಿಯಲ್ಲಿ ಈಜಲು ಹೋಗಿ ಪಂಪ್‌ಸೆಟ್‌ಗೆ ಸಿಲುಕಿ ಬಾಲಕನೋರ್ವ ಮೃತಪಟ್ಟ ಘಟನೆ ಮಾನ್ವಿ ತಾಲೂಕಿನ ಚಿಕ್ಕಲ ಪರ್ವಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ವೀರೇಶ್ (14) ಮೃತ ಬಾಲಕ. ಗೆಳೆಯರ ಜೊತೆ ನದಿಗೆ ಹೋಗಿ ಈಜಾಡಲು ನೀರಿಗೆ ಇಳಿದಿದ್ದ, ಈ ವೇಳೆ ನದಿಯಲ್ಲಿ ರೈತರು ಹೊಲಗಳಿಗೆ ನೀರು ಹರಿಸಲು ಹಾಕಿದ ಪಂಪ್‌ಸೆಟ್ ಕೇಬಲ್ ತಂತಿಗೆ ಬಾಲಕನ ಕಾಲು ಸಿಲುಕಿ ಹೊರಬರಲಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಚಿಕ್ಕಲ ಪರ್ವಿ ಗ್ರಾಮದಲ್ಲಿ ನಡೆದ ಜಾತ್ರೆ ನೋಡಲು ಆಗಮಿಸಿದ್ದ ಬಾಲಕ ಊರಿನ ಗೆಳೆಯರೊಂದಿಗೆ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಸ್ಥಳೀಯರ ನೆರವಿನಿಂದ ಬಾಲಕನ ಮೃತ ದೇಹ ಹೊರತೆಗೆಯಲಾಗಿದೆ, ಮರಣೋತ್ತರ ಪರೀಕ್ಷೆಗೆ ಮಾನ್ವಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.