ಘಟಪ್ರಭಾ ನದಿಯ ಪ್ರವಾಹಕ್ಕೆ ಮುಳುಗಡೆಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂಬ ಕೂಗು ಹೆಚ್ಚಾಗ ತೊಡಗಿದ್ದು, ಸರ್ಕಾರ ಹೋರಾಟಗಾರರಿಗೆ ಸ್ಪಂದಿಸದಿದ್ದರೆ ಆಗಸ್ಟ್ 12ರಂದು ಮುಧೋಳ ಬಂದ್ ನಡೆಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರವಾಹಕ್ಕೊಳಗಾದ ಸಂತ್ರಸ್ತರು , ರೈತರು ಒಮ್ಮತದ ನಿರ್ಧಾರ ಪ್ರಕಟಿಸಿದ್ದಾರೆ.
ಮುಧೋಳ ನಗರದ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಂತ್ರಸ್ತರು ಹಾಗೂ ರೈತರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಪರಿಹಾರಕ್ಕಾಗಿ ಒತ್ತಾಯಿಸಿ ಆ.7ರಂದು ಸುರಿವ ಮಳೆಯಲ್ಲಿಯೇ ಹೋರಾಟ ಮಾಡಿದರೂ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ನಮ್ಮ ಹೋರಾಟಕ್ಕೆ ಸ್ಪಂದಿಸುವ ಕಾರ್ಯ ಮಾಡಿಲ್ಲ. ಅದಾದ ಬಳಿಕ ಅ.10ರವೆಗೆ ನಾವು ಸರ್ಕಾರಕ್ಕೆ ಗಡುವು ನೀಡಿದ್ದೆವು. ಆದರೆ ರಾಜ್ಯ ಸರ್ಕಾರ ನಮ್ಮ ಸಮಸ್ಯೆಗೆ ಧ್ವನಿಯಾಗುತ್ತಿಲ್ಲ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಆ.11ರ ಮಧ್ಯಾಹ್ನದವರೆಗೂ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಅಷ್ಟರೊಳಗೆ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಸೋಮವಾರ (ಆ.12) ಮುಧೋಳ ನಗರ ಬಂದ್ ಮಾಡಿ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಸರ್ಕಾರ ಮುಂದಿನ ಅನಾಹುತಕ್ಕೆ ಅವಕಾಶ ಕೊಡದೆ ನಮ್ಮ ಬೇಡಿಕೆಗೆ ಸ್ಪಂದಿಸಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ದುಂಡಪ್ಪ ಯರಗಟ್ಟಿ, ಬಸವಂತ ಕಾಂಬಳೆ, ಮುತ್ತಪ್ಪ ಕೊಮಾರ, ಸುಭಾಸ ಶಿರಬೂರ, ಬಂಡು ಘಾಟಗೆ, ಸದಪ್ಪ ತೇಲಿ, ಮಹೇಶಗೌಡ ಪಾಟೀಲ, ಸುಗರಪ್ಪ ಅಕ್ಕಿಮರಡಿ, ತಿಮ್ಮಣ್ಣ ಬಟಕುರ್ಕಿ, ಸದಾಶಿವ ಇಟಗನ್ನವರ ಸೇರಿದಂತೆ ಇತರರಿದ್ದರು.