ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ಮತದಾರರೂ ಹೊರಗುಳಿಯದಂತೆ ನೋಡಿಕೊಳ್ಳಲು ಹಾಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಗತ್ಯ ಬದಲಾವಣೆಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ, ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕದ ವತಿಯಿಂದ ಶನಿವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುವಂತೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಕ್ರಮವಾಗಿದೆ ಎಂದು ಆರೋಪಿಸಿದರು. ಈ ಪ್ರಕ್ರಿಯೆಯು ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿ ಸಮುದಾಯಗಳು, ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಮತದಾನದ ಹಕ್ಕಿನಿಂದ ವಂಚಿಸುವ ಅಪಾಯವನ್ನು ಹೊಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವು ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆಯ ಪರಿಣಾಮವಾಗಿ ಕೋಟ್ಯಂತರ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟಿವೆ ಎಂದು ಉಲ್ಲೇಖಿಸಿದ ಪ್ರತಿಭಟನಾಕಾರರು, ಕರ್ನಾಟಕದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆಗೆ ತಮ್ಮ ಬೆಂಬಲವಿದ್ದರೂ, ದೋಷಪೂರಿತ ಮತ್ತು ಅಪಾರದರ್ಶಕ ವಿಧಾನಗಳನ್ನು ಅನುಸರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ನಾಲ್ಕು ಪ್ರಮುಖ ಆಗ್ರಹಗಳನ್ನು ಮುಂದಿಟ್ಟರು. ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಎಂಬ ಅವೈಜ್ಞಾನಿಕ ಮತ್ತು ಅಪಾರದರ್ಶಕ ವಿಧಾನವನ್ನು ರಾಜ್ಯದಲ್ಲಿ ಅಳವಡಿಸಬಾರದು. ಮತದಾರರ ಪಟ್ಟಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಪರಿಶೀಲಿಸಬಹುದಾದ ಕಂಪ್ಯೂಟರ್ ರೀಡಬಲ್ ರೂಪದಲ್ಲಿ ಪ್ರಕಟಿಸಬೇಕು. ಕರಡು ಮತದಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಬಹಿರಂಗವಾಗಿ ಪ್ರಕಟಿಸಿ ಸಾರ್ವಜನಿಕ ಪರಿಶೀಲನೆಗೆ ಅವಕಾಶ ಕಲ್ಪಿಸಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಗಡಿಬಿಡಿಯಲ್ಲಿ ನಡೆಸದೆ, ಕನಿಷ್ಠ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಇದಲ್ಲದೆ ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಅಲೆಮಾರಿಗಳು, ಆದಿವಾಸಿಗಳು, ದಲಿತರು ಹಾಗೂ ಬಡ ಅಲ್ಪಸಂಖ್ಯಾತರು ದಾಖಲೆಗಳ ಕೊರತೆಯಿಂದ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ವಿಶೇಷ ಮತ್ತು ಸರಳ ಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?ಕೊಡಗು | ಸಣ್ಣ ಭಾಷೆಗಳ ಉಳಿವೇ ಕನ್ನಡದ ಶ್ರೀಮಂತಿಕೆ: ಅಬ್ದುಲ್ ರಶೀದ್

ಪ್ರಜಾತಾಂತ್ರಿಕ ಮೌಲ್ಯಗಳಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಕರ್ನಾಟಕದ ಜನತೆ ಒಪ್ಪುವುದಿಲ್ಲ. ಚುನಾವಣಾ ಆಯೋಗವು ಈ ಆಗ್ರಹಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಬದಲಾವಣೆಗಳನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ರೂಪುಗೊಳ್ಳಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವಿಡಿಯೋ ವೀಕ್ಷಿಸಿ:https://youtu.be/AZ7t09oFqBM?si=zbu7mUsSm2Z7zX6L

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆ. ಕಾಳಚನ್ನೇಗೌಡ, ಡಾ. ಎಂ. ಪಿ. ಪೂರ್ಣಾನಂದ, ಡಾ. ಮಹೇಶ ದಳಪತಿ, ಸವಿತಾ ಪ. ಮಲ್ಲೇಶ್, ಪಂಡಿತರಾಧ್ಯ, ಎಂ.ಎಫ್. ಕಲಿಮ್, ಟಿ. ಗುರುರಾಜ್, ಪಿ. ಮರಂಕಯ್ಯ, ಕೆ. ಬಸವರಾಜ್, ಸಬಿಹಾ ಭೂಮಿಗೌಡ, ಭೂಮಿಗೌಡ, ಶ್ರೀನಿವಾಸ್ ಕಂದೆಗಾಲ, ಅಮ್ಜದ್ ಖಾನ್, ಎಸ್. ಸ್ವಾಮಿ, ಬಂಗವಾದಿ ನಾರಾಯಣಸ್ವಾಮಿ, ಸಾನಿಯ ಭಾನು, ಜರೀನಾ ಭಾನು, ಕೆ.ಆರ್. ಗೋಪಾಲಕೃಷ್ಣ, ಫೈರೋಜ್ ಉಲ್ಲಾ ಶರೀಫ್, ಬಸವರಾಜು, ಶಿವಣ್ಣ, ಕಮಲ್ ಗೋಪಿನಾಥ್, ಲಕ್ಷ್ಮಮ್ಮ, ಅನಂದೂರು ಪ್ರಭಾಕರ್, ನಾಗನಹಳ್ಳಿ ಚಂದ್ರಶೇಖರ್, ಮಂಡಕಳ್ಳಿ ಮಹೇಶ್ ಸೇರಿದಂತೆ ಹಲವರು ಇದ್ದರು.




