ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿಶೇಷ ತಪಾಸಣಾ ತಂಡಗಳು ಮಾರಾಟ ಮಳಿಗೆಗಳ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಬಾಗಲಕೋಟೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ವಿಶೇಷ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಕೃಷಿ, ತೋಟಗಾರಿಕೆ, ಸಹಕಾರ, ಕಾನೂನು ಮಾಪನ ಶಾಸ್ತ್ರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಪರವಾನಗಿ, ದಾಸ್ತಾನು ಹಾಗೂ ಮಾರಾಟ ದಾಖಲೆಗಳನ್ನು ಪರಿಶೀಲಿಸಬೇಕು” ಎಂದು ಸೂಚನೆ ನೀಡಿದರು.
“ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳು ಸಮರ್ಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದರ ಜೊತೆಗೆ ನಕಲಿ ಕೃಷಿ ಪರಿಕರಗಳ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ” ಎಂದು ತಿಳಿಸಿದರು.
“ರೈತರಿಗೆ ಗುಣಮಟ್ಟ ಕೃಷಿ ಪರಿಕರಗಳ ದೊರೆಯುವಂತೆ ಮಾಡುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ನಕಲಿ ಬಿತ್ತನೆ ಬೀಜ, ಕಳಪೆ ಗುಣಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟದಿಂದ ರೈತರು ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು” ಎಂದು ಸೂಚಿಸಿದರು.
“ಕಳೆದ ಸಾಲಿನಲ್ಲಿ ನಿಯಮಗಳನ್ನು ಉಲ್ಲಂಘಿಸಿ ಮಾರಾಟ, ದಾಸ್ತಾನು ಮತ್ತು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ 15 ಪ್ರಕರಣ ಮತ್ತು ಕಳಪೆ ಮಟ್ಟದ ಬೀಜದ ಮಾರುತಿದ್ದವರ ವಿರುದ್ಧ ಆರು ಪ್ರಕರಣ ದಾಖಲಿಸಲಾಗಿದೆ. ಕಳಪೆ ಮಟ್ಟದ ರಸ ಗೊಬ್ಬರ ಮಾರಾಟ ಮಾಡುತ್ತಿದ್ದವರ ಮೇಲೆ 11 ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಮೂರು ಪ್ರಕರಣಗಳಲ್ಲಿ ಎಫ್ಐಆರ್ ಕೂಡ ಮಾಡಲಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ ಎಸ್ ರುದ್ರೇಶಪ್ಪ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಸಿದ್ದಾರ್ಥ್ ಗೋಯಲ್, ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್ಎಂ ಕೋರೆ, ಸಹಕಾರ ಇಲಾಖೆ ಉಪ ನಿಬಂಧಕ ದಾನಯ್ಯ ಹಿರೇಮಠ, ಪಶು ಇಲಾಖೆ ಉಪನಿರ್ದೇಶಕ ಎಸ್ ಹೆಚ್ ಕರಡಿಗುಡ್ಡ, ಕೃಷಿ ಇಲಾಖೆಯ ಉಪನಿರ್ದೇಶಕ ಕಾಶೀನಾಥ್ ಗಸನಾಳ, ಜಮಖಂಡಿ ವಿಭಾಗದ ಉಪನಿರ್ದೇಶಕಿ ಮಂಜುಳ ಬಸರೆಡ್ಡಿ ಇದ್ದರು.




