ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಗಮನಾರ್ಹ ಸೇವೆ ಸಲ್ಲಿಸಿರುವ ಸರ್ಕಾರಿ ನೌಕರರನ್ನು ಗುರುತಿಸಿ ನೀಡಲಾಗುವ ‘ಸರ್ಕಾರಿ ನೌಕರರ ಸೇವಾ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ 5.25 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರನ್ನು ಒಳಗೊಂಡಿರುವ ಸಂಘವು 105 ವರ್ಷಗಳ ಇತಿಹಾಸ ಹೊಂದಿದೆ. ಪ್ರತಿವರ್ಷ ನವೆಂಬರ್‌ನಲ್ಲಿ ಅರ್ಹ ನೌಕರರನ್ನು ಆಯ್ಕೆ ಮಾಡಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವ ನೌಕರರು ಸರ್ಕಾರಿ ಸೇವೆಗೆ ಸೇರ್ಪಡೆಗೊಂಡು ಕನಿಷ್ಠ ಐದು ವರ್ಷಗಳ ಸೇವೆ ಪೂರ್ಣಗೊಳಿಸಿರುವುದು ಕಡ್ಡಾಯ. ಸೇವಾವಧಿ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸರ್ಕಾರಿ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆ ಮತ್ತು ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಈ ಬಾರಿ ಒಟ್ಟು 271 ನೌಕರರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದ್ದು, ಪ್ರಶಸ್ತಿ ಪುರಸ್ಕೃತರಿಗೆ ₹20 ಸಾವಿರ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.
ಅರ್ಹ ಅಧಿಕಾರಿ ಅಥವಾ ನೌಕರರು ಸ್ವತಃ ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಿಲ್ಲ. ಇಲಾಖಾ ಮುಖ್ಯಸ್ಥರು, ಮೇಲಧಿಕಾರಿಗಳು, ಸಹೋದ್ಯೋಗಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಶಾಖೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅರ್ಹ ನೌಕರರನ್ನು ನಾಮನಿರ್ದೇಶನ ಮಾಡಬಹುದು.
ಇದಲ್ಲದೆ, ನಾಗರಿಕರು, ಬುದ್ಧಿಜೀವಿಗಳು, ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಸರ್ಕಾರಿ ನೌಕರರ ಪರವಾಗಿಯೂ ಅರ್ಹ ನೌಕರರನ್ನು ಆನ್‌ಲೈನ್ ಮೂಲಕ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸೂಚಿಸಿರುವ powermedia.info ಲಿಂಕ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ನಾಮನಿರ್ದೇಶನ ಸಲ್ಲಿಸಬೇಕು. ನೇರವಾಗಿ ಯಾವುದೇ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ. ನಾಮನಿರ್ದೇಶನದ ವೇಳೆ ಸರ್ಕಾರಿ ಇಲಾಖೆಯಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆ ಹಾಗೂ ಸಾಧನೆಗಳ ವಿವರಗಳಿಗೆ ಆದ್ಯತೆ ನೀಡಬೇಕು.
ನಾಮನಿರ್ದೇಶನದೊಂದಿಗೆ ಅಗತ್ಯ ಪೂರಕ ಮಾಹಿತಿ, ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅಪೂರ್ಣ ನಾಮನಿರ್ದೇಶನಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಹ ಹಾಗೂ ಗಮನಾರ್ಹ ಸೇವೆ ಸಲ್ಲಿಸಿರುವ ಸರ್ಕಾರಿ ನೌಕರರನ್ನು ಗುರುತಿಸಿ ನಾಮನಿರ್ದೇಶನ ಮಾಡುವಂತೆ ಮಲ್ಲಿಕಾರ್ಜುನ ಬಿ. ಬಳ್ಳಾರಿ ಮನವಿ ಮಾಡಿದ್ದಾರೆ. ಅ. 15 ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನವಾಗಿದೆ.




