ಸುಧಾರಿತ ಸಂಪರ್ಕ ವ್ಯವಸ್ಥೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಯಿಂದಾಗಿ ದೇಶದ ಆರ್ಥಿಕತೆ ಸದೃಢಗೊಳ್ಳುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಇಂದು ಬೆಂಗಳೂರಿನಲ್ಲಿ ನಡೆದ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸಿಲಿಕಾನ್ ವ್ಯಾಲಿಯಾಗಿರುವ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಮೆಟ್ರೋ ವಿಸ್ತರಣೆಯು ಜನರ ದೈನಂದಿನ ಪ್ರಯಾಣವನ್ನು ಅನುಕೂಲಕರವಾಗಿಸುತ್ತದೆ. ಅಲ್ಲದೆ, ಮಧ್ಯಮ ವರ್ಗದ ಕುಟುಂಬಗಳಿಗೆ ಇದರಿಂದ ಅನುಕೂಲವಾಗುತ್ತದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆಯು ಕೈಗಾರಿಕಾ ಪ್ರಗತಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಇದರಿಂದಾಗಿ ಅಭಿವೃದ್ಧಿಯ ಅವಕಾಶಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪುತ್ತವೆ. ಇದು ಬಡತನ ನಿರ್ಮೂಲನೆ ಪ್ರಯತ್ನಗಳನ್ನು ಬಲಪಡಿಸುತ್ತವೆ ಎಂದರು.
ಕರ್ನಾಟಕದಲ್ಲಿ ಆರಂಭಿಸಲಾದ ಮೂಲಸೌಕರ್ಯ ಯೋಜನೆಗಳು ಬೆಂಗಳೂರಿನ ತಂತ್ರಜ್ಞಾನ ಕೇಂದ್ರ ಎಂಬ ಗುರುತನ್ನು ಮತ್ತಷ್ಟು ಬಲಪಡಿಸಲಿವೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ಕೊಡುಗೆ ನೀಡಲಿವೆ ಎಂದು ಪ್ರಧಾನಿ ಹೇಳಿದರು.
ಪಿಂಕ್ ಲೈನ್‌ನಲ್ಲಿ ಮೋದಿ ಪ್ರಯಾಣ
ಪಿಂಕ್ ಲೈನಿನ್ನ ಎತ್ತರಿಸಿದ ಮಾರ್ಗಕ್ಕೆ ಮೋದಿಯವರು ಎಸ್.ಜಿ ಪಾಳ್ಯದ ಮೆಟ್ರೋ ನಿಲ್ದಾಣದಲ್ಲಿ ಚಾಲನೆ ನೀಡಿದ ಬಳಿಕ ಎಸ್.ಜಿ. ಪಾಳ್ಯದಿಂದ ಬಿಳೇಕಹಳ್ಳಿ ಐಐಎಂಬಿ ಮೆಟ್ರೋ ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣ ಬೈರೇಗೌಡ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರೂ ಜೊತೆಗಿದ್ದರು.
ಪ್ಲಾಟ್‌ಫಾರ್ಮ್ ಪ್ರವೇಶಿಸುವ ಮುನ್ನ ಪ್ರಧಾನಿ ಟಿಕೆಟ್ ಖರೀದಿಸಿದರು. ಬಳಿಕ ಬಿಎಂಆರ್‌ಸಿಎಲ್ ಅಧಿಕಾರಿಗಳು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣಬೈರೇಗೌಡ ಅವರು ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಮಾದರಿಯನ್ನು ಅನುಷ್ಠಾನಗೊಳಿಸುವುದರಿಂದ ಆಗುವ ಅನುಕೂಲಗಳು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಅದರ ಸಾಮರ್ಥ್ಯದ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.
ಪಿಂಕ್ ಲೈನ್ ಮಾರ್ಗ
ನಮ್ಮ ಮೆಟ್ರೋದ ಎರಡನೇ ಹಂತದ ಭಾಗವಾಗಿರುವ ಪಿಂಕ್ ಲೈನ್, ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಉತ್ತರ ಬೆಂಗಳೂರಿನ ನಾಗವಾರದವರೆಗೆ ಸಂಪರ್ಕ ಕಲ್ಪಿಸಲಿದೆ.
ಒಟ್ಟು 21.25 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ 7.5 ಕಿಲೋಮೀಟರ್ ಎತ್ತರಿಸಿದ ಮಾರ್ಗ ಹಾಗೂ 13.76 ಕಿಲೋಮೀಟರ್ ಭೂಗತ ಮಾರ್ಗವಿದೆ. ವಿವರವಾದ ಯೋಜನಾ ವರದಿ (DPR) ಪ್ರಕಾರ, ಈ ಸಂಪೂರ್ಣ ಮಾರ್ಗ ಕಾರ್ಯಾರಂಭ ಮಾಡಿದ ಬಳಿಕ ಪ್ರತಿದಿನ ಸುಮಾರು 3.76 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ.
ಭಾರತವು ಶತಕದ ಮೇಲೆ ಶತಕ ದಾಖಲಿಸುತ್ತಿದೆ
ಇತ್ತೀಚೆಗೆ ಭಾರತದಲ್ಲಿ 100 ಚೆಸ್ ಗ್ರ್ಯಾಂಡ್ ಮಾಸ್ಟರ್‌ಗಳು ಇರುವುದನ್ನು ಮೆಟ್ರೋದ ಜಾಲಕ್ಕೆ ಹೋಲಿಸುತ್ತಾ, ಭಾರತವು ಶತಕದ ಮೇಲೆ ಶತಕ ದಾಖಲಿಸುತ್ತಿದೆ. ದೇಶದಲ್ಲಿ 100 ಚೆಸ್ ಗ್ರ್ಯಾಂಡ್ ಮಾಸ್ಟರ್‌ಗಳಿದ್ದಾರೆ ಹಾಗೆಯೇ ಬೆಂಗಳೂರಿನ ಮೆಟ್ರೋ ಜಾಲವು 100 ಕಿ.ಮೀ ಗೂ ಹೆಚ್ಚು ವಿಸ್ತರಣೆಯಾಗಿದೆ. ಈ ಮೂಲಕ 100 ಕಿ.ಮೀ ಗಡಿ ದಾಟಿಸ ದೇಶದ ಮೂರನೇ ಮಹಾನಗರ ಪ್ರದೇಶವಾಗಿ ಬೆಂಗಳೂರು ಹೊರಹೊಮ್ಮಿದೆ ಎಂದರು.




