ಬಾಗಲಕೋಟೆ ಜಿಲ್ಲೆಯ ವಿಧಾನಸಭಾ ಉಪಚುನಾವಣೆಯ ಕಣ ರಂಗೇರಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಶ್ರೀರಕ್ಷೆಯೊಂದಿಗೆ ಮತಯಾಚಿಸಿದರೆ, ವೀರಣ್ಣ ಚರಂತಿಮಠ ನೇತೃತ್ವದ ಬಿಜೆಪಿ ಪಡೆ ಅಭಿವೃದ್ಧಿ ಮಂತ್ರದೊಂದಿಗೆ ತಿರುಗೇಟು ನೀಡುತ್ತಿದೆ.
ಸುತಗುಂಡಾರ ಗ್ರಾಮದಲ್ಲಿ ಪ್ರಚಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಪಂಚ ಗ್ಯಾರಂಟಿಗಳು ಬಡವರ ಬದುಕನ್ನು ಹಸನುಗೊಳಿಸಿವೆ. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಬೆಂಬಲಿಸಿ ಎಂದು ಕೋರಿದರು. ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ಎಂ.ಬಿ. ಪಾಟೀಲ ಅವರು ಈ ಭಾಗದ ಸಮಗ್ರ ಪ್ರಗತಿಗೆ ಕಾಂಗ್ರೆಸ್ ಗೆಲುವು ಅನಿವಾರ್ಯ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಟೀಕೆಗೆ ಟಾಂಗ್ ನೀಡಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, “ಬಾಗಲಕೋಟೆಯ ರಸ್ತೆ, ಸಭಾಂಗಣ ಹಾಗೂ ದೇವಸ್ಥಾನಗಳೇ ಬಿಜೆಪಿ ಮಾಡಿದ ಅಭಿವೃದ್ಧಿಗೆ ಸಾಕ್ಷಿ. ಕಾಂಗ್ರೆಸ್ ನಮ್ಮ ಕೆಲಸಗಳಿಗೆ ತಮ್ಮ ಲೇಬಲ್ ಹಚ್ಚಿಕೊಳ್ಳುತ್ತಿದೆ” ಎಂದು ವ್ಯಂಗ್ಯವಾಡಿದರು. ನಗರದ ನಾಗಪ್ಪನ ಕಟ್ಟೆಗೆ ಪೂಜೆ ಸಲ್ಲಿಸಿ ವಾರ್ಡ್ ನಂ. 3ರಲ್ಲಿ ಅಬ್ಬರದ ಮತಯಾಚನೆ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನವನಗರದಲ್ಲಿ ಮನೆಮನೆಗೆ ತೆರಳಿ ಪ್ರಚಾರ ಮಾಡಿದರು. “ಸೋಲಿನ ಭೀತಿಯಿಂದ ಮುಖ್ಯಮಂತ್ರಿಗಳು ಮಂತ್ರಿಗಳ ದಂಡಿನೊಂದಿಗೆ ಸೂಟ್‌ಕೇಸ್ ಹಿಡಿದು ಇಲ್ಲಿ ಠಿಕಾಣಿ ಹೂಡಿದ್ದಾರೆ. ಇತ್ತೀಚಿನ ಗಲಭೆಯಲ್ಲಿ ಬಂಧಿತರಾದ ಹಿಂದೂ ಕಾರ್ಯಕರ್ತರ ಪರವಾಗಿ ಬಿಜೆಪಿ ಸದಾ ಇರಲಿದೆ” ಎಂದರು.
ರಾಜ್ಯ ಸರ್ಕಾರ ಹದಿನೈದು ದಿನಗಳಲ್ಲಿ ಪತನಗೊಳ್ಳಲಿದೆ. ಬಾಗಲಕೋಟೆಯನ್ನು ವಿಶಾಲವಾಗಿ ಬೆಳೆಸಿದ ಕೀರ್ತಿ ಚರಂತಿಮಠರಿಗೆ ಸಲ್ಲುತ್ತದೆ ಎಂದು ಚಲವಾದಿ ನಾರಾಯಣಸ್ವಾಮಿ ಶ್ಲಾಘಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಮೋದಿಯವರ 12 ವರ್ಷಗಳ ಆಡಳಿತದಲ್ಲಿ ದೇಶ ನೆನಪಿಸಿಕೊಳ್ಳುವಂತಹ ಕೆಲಸವಾಗಿಲ್ಲ: ಎಂ ಬಿ ಪಾಟೀಲ
ಗ್ಯಾರಂಟಿ ಯೋಜನೆಗಳಿಂದಾಗಿ ಬಸ್ಸುಗಳ ರಿಪೇರಿಗೂ ಹಣವಿಲ್ಲದಂತಾಗಿದೆ. ಸಿದ್ದರಾಮಯ್ಯ ಅವರು ನೀಡುತ್ತಿರುವ ಅಕ್ಕಿ ವಾಜಪೇಯಿ ಕಾಲದ ಯೋಜನೆ. ಅಭಿವೃದ್ಧಿ ಬೇಕೆಂದರೆ ಬಿಜೆಪಿಗೆ ಮತ ನೀಡಿ ಎಂದು ಪ್ರತಾಪ ಸಿಂಹ ಮತಯಾಚಿಸಿದರು.
ಸಂಸದ ಪಿ.ಸಿ. ಗದ್ದಿಗೌಡರ್ ಗುಂಡುನಪಲ್ಲೆ ಹಾಗೂ ಬೇವಿನಮಟ್ಟಿ ಗ್ರಾಮಗಳಲ್ಲಿ ಮತಯಾಚಿಸಿದರು. ಮಹಿಳೆಯರ ಸುರಕ್ಷತೆಗಾಗಿ ಬಿಜೆಪಿ ಬೆಂಬಲಿಸಿ ಎಂದು ರಾಜೇಶ್ವರಿ ಚರಂತಿಮಠ ಮನವಿ ಮಾಡಿದರು.
ಮುರಗೇಶ ನಿರಾಣಿ ಹಾಗೂ ಹನುಮಂತ ನಿರಾಣಿ ಅವರು ಪಕ್ಷದ ಆಂತರಿಕ ಭಿನ್ನಮತ ಮರೆತು ಚರಂತಿಮಠ ಅವರ ಪರವಾಗಿ 25 ಸಾವಿರ ಮತಗಳ ಲೀಡ್ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.




