ನರೇಂದ್ರ ಮೋದಿಯವರ 12 ವರ್ಷಗಳ ಆಡಳಿತದಲ್ಲಿ ದೇಶ ನೆನಪಿಡುವಂತಹ ಯಾವುದೇ ಕೆಲಸ ಮಾಡಿಲ್ಲ. ಬರೀ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ವಾರ್ಷಿಕ ಎರಡು ಕೋಟಿ ಉದ್ಯೋಗ, ಎಲ್ಲರ ಖಾತೆಗೆ 15 ಲಕ್ಷ ಜಮಾ, ಅಚ್ಚೇ ದಿನ್ ಯಾವುದನ್ನೂ ಮಾಡಲಿಲ್ಲ. ಪೆಟ್ರೋಲ್ ದರ ₹60 ಗಡಿ ದಾಟಿಸಿದರು, ₹400 ಇದ್ದ ಗ್ಯಾಸ್ ಬೆಲೆ ₹1000 ಗಡಿಗೆ ಬಂತು. ನೋಟ್ ಬ್ಯಾನ್ ಮಾಡಿ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದರು” ಎಂದು ಬೃಹತ್ ಕೈಗಾರಿಕೋದ್ಯಮ ಸಚಿವ ಎಂ ಬಿ ಪಾಟೀಲ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ಇರಾನ್ ಜತೆ ಭಾರತ ಒಳ್ಳೆಯ ಸಂಬಂಧ ಹೊಂದಿತ್ತು. ಮೋದಿಯವರು ಇಸ್ರೇಲಿಗೆ ಹೋಗಿ ಭಾರತ ಜಗತ್ತಿನ ತಾಯಿ ಎಂದಿದ್ದು ಸರಿ. ಆದರೆ, ಇಸ್ರೇಲ್ ಜಗತ್ತಿನ ತಂದೆ ಅಂದುಬಿಟ್ಟರು. ಮರು ದಿನವೇ ಯುದ್ಧ ಆರಂಭವಾಯಿತು ಎಂದು ಬೃಹತ್ ಕೈಗಾರಿಕೋದ್ಯಮ ಸಚಿವ ಎಂ ಬಿ ಪಾಟೀಲ ನರೇಂದ್ರ ಮೋದಿ ಅವರನ್ನು ಟೀಕಿಸಿದರು.
“ಇರಾನ್‌ನಿಂದ ಇಂದು ಇಂಧನ ಸಿಗುತ್ತಿದೆ. ಒಂದು ವೇಳೆ ಮೋದಿ ಮೇಲಿನ ಸಿಟ್ಟಿಗೆ ಇರಾನ್ ಇಂಧನ ಕೊಡದಿದ್ದರೆ ನಮ್ಮ ದೇಶದ ಪರಿಸ್ಥಿತಿ ಏನಾಗುತ್ತಿತ್ತು? ಮೋದಿಯವರು ತಮ್ಮ ಆಡಳಿತದಲ್ಲಿ ಬರೀ ಇಂಥದ್ದೆ ಅದ್ವಾನಗಳನ್ನು ಮಾಡಿದ್ದಾರೆ” ಎಂದು ದೂರಿದರು.
“ಸ್ವಾತಂತ್ರ್ಯ ಸಿಕ್ಕಾಗ ನಮ್ಮ ದೇಶಕ್ಕೆ ಅಮೆರಿಕದಿಂದ ಗೋಧಿ ಬರುತ್ತಿತ್ತು. ಜವಹರಲಾಲ್ ನೆಹರೂ, ಲಾಲ್ ಬಹುದ್ದೂರ್ ಶಾಸ್ತ್ರಿ ಸೇರಿದಂತೆ ಕಾಂಗ್ರೆಸ್ ಸರ್ಕಾರ ದೂರ ದೃಷ್ಟಿಯ ಯೋಜನೆಗಳಿಂದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಗರೀಬಿ ಹಠಾವೋಗಳಂತಹ 20 ಅಂಶಗಳುಳ್ಳ ಕಾರ್ಯಕ್ರಮಗಳು, ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಸಮೃದ್ಧಿಗೊಳಿಸಿದ ಕೀರ್ತಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ ಉಪಚುನಾವಣೆ: ಏಕತೆಯಿಂದ ಕಾಂಗ್ರೆಸ್ ಗೆಲ್ಲಿಸೋಣ ಎಂದ ಮಲ್ಲಿಕಾರ್ಜುನ ಮೇಟಿ
“ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೆಚ್ಎ ಲ್, ಬಿಎಚ್‌ಎಲ್‌ಬಿಇ, ಎಂಎನ್‌ಟಿ ಸೇರಿದಂತ ಅನೇಕ ಸಂಸ್ಥೆಗಳು ಕಾಂಗ್ರೆಸ್ ಕೊಡುಗೆ. ಮನರೇಗಾ, ಆಧಾರ್ ಕಾರ್ಡ್ ಯೋಜನೆಗೂ ಕಾಂಗ್ರೆಸ್ ಕೊಡುಗೆ ನೀಡಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ, ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ, ಅಜಯ್ ಕುಮಾರ ಸರನಾಯಕ, ಆನಂದ ನ್ಯಾಮಗೌಡ, ನಾಗರಾಜ ಹದ್ಲಿ ಇದ್ದರು.




