ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕು ಕೇಂದ್ರವಾಗಿರುವ ಗುಳೇದಗುಡ್ಡದಲ್ಲಿ ತುರ್ತು ಚಿಕಿತ್ಸೆಗೆ ಪ್ರಮುಖ ಆಧಾರವಾಗಿದ್ದ 108 ಆಂಬುಲೆನ್ಸ್ ಸೇವೆ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದರೂ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗುಳೇದಗುಡ್ಡ ಭಾಗದಲ್ಲಿ ರಸ್ತೆ ಅಪಘಾತ, ಹೃದಯಾಘಾತ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು 108 ಆಂಬುಲೆನ್ಸ್ ಸೇವೆಯನ್ನೇ ಜನರು ಅವಲಂಬಿಸಿದ್ದರು. ಆದರೆ ಇಲ್ಲಿದ್ದ ಆಂಬುಲೆನ್ಸ್ ದುರಸ್ತಿಗೊಳಗಾಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಸೇವೆ ಲಭ್ಯವಾಗುತ್ತಿಲ್ಲ.
108ಕ್ಕೆ ಕರೆ ಮಾಡಿದ ಸಂದರ್ಭದಲ್ಲಿ ಬದಾಮಿ, ಪಟ್ಟದಕಲ್, ಹುನಗುಂದ ಅಥವಾ ಬಾಗಲಕೋಟೆಯಿಂದ ಆಂಬುಲೆನ್ಸ್ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಪ್ರದೇಶಗಳಿಂದ ವಾಹನ ಬರುವಷ್ಟರಲ್ಲಿ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ದೊರೆಯದ ಆತಂಕ ಎದುರಾಗಿದೆ.
ತುರ್ತು ಆರೋಗ್ಯ ಸೇವೆಯಲ್ಲಿ ಕೆಲವೇ ನಿಮಿಷಗಳ ವಿಳಂಬವೂ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಎರಡು ತಿಂಗಳಿನಿಂದ ಆಂಬುಲೆನ್ಸ್ ಸೇವೆ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
This video cannot be played in your browser. Open the video directly
ದುರಸ್ತಿಯಲ್ಲಿರುವ 108 ಆಂಬುಲೆನ್ಸ್ ಅನ್ನು ಸರಿಪಡಿಸುವವರೆಗೆ ಗುಳೇದಗುಡ್ಡ ಭಾಗಕ್ಕೆ ಪರ್ಯಾಯ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ತುರ್ತು ಸಂದರ್ಭದಲ್ಲಿ ರೋಗಿಗಳು ದೂರದ ಊರುಗಳಿಂದ ವಾಹನ ಬರುವುದನ್ನು ಕಾಯುವ ಪರಿಸ್ಥಿತಿ ತಪ್ಪಿಸಿ, ಸ್ಥಳೀಯವಾಗಿಯೇ 108 ಸೇವೆ ಲಭ್ಯವಾಗುವಂತೆ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





