ಸಾಲದ ಭಾರ ಮತ್ತು ಕೃಷಿ ಸಂಕಷ್ಟದಿಂದ ಕಂಗೆಟ್ಟ ಕನಕಪುರ ಗ್ರಾಮದ ರೈತ ಅನಿಲಕುಮಾರ ತಂದೆ ಶಿವುರಾಯ (38) ಆತ್ಮಹತ್ಯೆಗೆ ಶರಣಾಗಿರುವ ಘಟನೆ ರೈತಾಪಿ ವಲಯದಲ್ಲಿ ಕಳವಳ ಮೂಡಿಸಿದೆ. ಮೃತ ರೈತನ ಕುಟುಂಬದ ಸಂಪೂರ್ಣ ಸಾಲ ಮನ್ನಾ ಮಾಡಿ, ತಕ್ಷಣ ಸೂಕ್ತ ಪರಿಹಾರ ನೀಡಬೇಕು ಹಾಗೂ ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮದ ನಿವಾಸಿಯಾಗಿದ್ದ ಅನಿಲಕುಮಾರ ಅವರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಸರ್ವೆ ನಂ.194/4ರಲ್ಲಿ 3 ಎಕರೆ 20 ಗುಂಟೆ ಜಮೀನು ಹೊಂದಿದ್ದರು. ಕನಕಪುರ ವಿವಿಎಸ್‌ಎನ್ ಬ್ಯಾಂಕಿನಲ್ಲಿ ₹30 ಸಾವಿರ ಬೆಳೆ ಸಾಲ ಪಡೆದಿದ್ದರೆ, ಖಾಸಗಿಯಾಗಿ ಸುಮಾರು ₹3.50 ಲಕ್ಷ ಸಾಲ ಮಾಡಿಕೊಂಡಿದ್ದರು. ತಮ್ಮ ಜಮೀನಿನಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಿದ್ದರೂ, ತೀವ್ರ ಬಿಸಿಲಿನ ತಾಪಕ್ಕೆ ಬೆಳೆ ಒಣಗತೊಡಗಿತ್ತು. ಬೆಳೆ ನಷ್ಟದ ಆತಂಕದ ನಡುವೆ ಸಾಲದ ಹೊರೆ ಹೆಚ್ಚಾಗಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.
ಅನಿಲಕುಮಾರ ಅವರ ನಿಧನದಿಂದ ಪತ್ನಿ ಸವಿತಾ (35) ಹಾಗೂ ಐವರು ಮಕ್ಕಳು ಅನಾಥ ಸ್ಥಿತಿಗೆ ತಲುಪಿದ್ದಾರೆ. ಮಕ್ಕಳಾದ ಕಾಂಚನಾ (19), ಸಂಚನಾ (15), ಅರ್ಚನಾ (14), ಶಾಂತಾ (11) ಮತ್ತು ಶಿವುರಾಯ (8) ಅವರ ಭವಿಷ್ಯ ಅತಂತ್ರವಾಗಿದೆ.
ಇದನ್ನು ಓದಿದ್ದೀರಾ? ಕರ್ನಾಟಕ SIR | ಒಬ್ಬರಿಗೇ ಹಲವು ‘ವೋಟರ್ ಐಡಿ’ಗಳ ಸೃಷ್ಟಿ: ಲೋಪ ಒಪ್ಪಿಕೊಂಡ ಚುನಾವಣಾ ಕಚೇರಿ!
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಮೃತ ರೈತನ ಕುಟುಂಬದ ಬ್ಯಾಂಕ್ ಹಾಗೂ ಖಾಸಗಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರಧನ ನೀಡುವುದರ ಜತೆಗೆ ಮಕ್ಕಳ ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ವಿಶೇಷ ನೆರವು ಕಲ್ಪಿಸಬೇಕು. ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕದಂತೆ ಬೆಳೆ ವಿಮೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಅರ್ಹ ರೈತರಿಗೆ ವಿಮೆ ಪರಿಹಾರ ತಲುಪಿಸಬೇಕು ಎಂದು ಒತ್ತಾಯಿಸಲಾಗಿದೆ.





