ಉಡುಪಿ ನಗರದ ಗುಂಡಿಬೈಲಿನ ಪೆಟ್ರೋಲ್ ಪಂಪ್‌ನಲ್ಲಿ ಮದ್ಯಪಾನ ಮಾಡದಂತೆ ಆಕ್ಷೇಪಿಸಿದ ವಿಚಾರಕ್ಕೆ ಸಂಬಂಧಿಸಿ ಪೆಟ್ರೋಲ್ ಪಂಪ್ ವ್ಯವಸ್ಥಾಪಕನ ಮೇಲೆ ಐವರ ತಂಡ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನ.7ರಂದು ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ಪೆಟ್ರೋಲ್ ಬಂಕ್ ಮಾಲಕ ಆಶೀಶ್ ಶೆಟ್ಟಿ (44) ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಪಲಿಮಾರಿನ ಪುನೀತ್, ರೋಷನ್, ಫೈಜಲ್ ಹಾಗೂ ಇತರ ಇಬ್ಬರು ಎಂದು ಗುರುತಿಸಲಾಗಿದೆ.
ಪೆಟ್ರೋಲ್ ಪಂಪ್‌ನ ಹಿಂಭಾಗದಲ್ಲಿ ವಿಶಾಲ್ ಬಸ್‌ನ ಆಕಾಶ್ ಎಂಬಾತ ಮದ್ಯಪಾನ ಮಾಡುತ್ತಿದ್ದುದನ್ನು ಗಮನಿಸಿದ ಆಶೀಶ್ ಶೆಟ್ಟಿ, ಪೆಟ್ರೋಲ್ ಪಂಪ್ ಆವರಣದಲ್ಲಿ ಮದ್ಯಪಾನ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಇದೇ ದ್ವೇಷದಿಂದ ರಾತ್ರಿ ವೇಳೆ ಓರ್ವ ಆರೋಪಿ ಲಾರಿಯಲ್ಲಿ ಹಾಗೂ ಇತರ ನಾಲ್ವರು ಕಾರಿನಲ್ಲಿ ಪೆಟ್ರೋಲ್ ಪಂಪ್‌ಗೆ ಬಂದಿದ್ದಾರೆ. ಬಳಿಕ ಎಲ್ಲರೂ ಸೇರಿ ಆಶೀಶ್ ಶೆಟ್ಟಿ ಅವರ ಮೇಲೆ ಕೈಗಳಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದಿದ್ದಾರೆ. ಈ ವೇಳೆ ಪುನೀತ್ ತನ್ನ ಕೈಯಲ್ಲಿದ್ದ ಕಡದಿಂದ ಆಶೀಶ್ ಶೆಟ್ಟಿ ಅವರ ತಲೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇಷ್ಟಕ್ಕೆ ನಿಲ್ಲದ ಆರೋಪಿಗಳು, ಲಾರಿಗೆ ಸುಮಾರು 3,000 ರೂ. ಮೌಲ್ಯದ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ವಾಹನ ಸಹಿತ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







