ಮಾರನಹಳ್ಳಿ ಸಮೀಪ 100 ಅಡಿ ಆಳದ ಕಂದಕಕ್ಕೆ ಶವ ಎಸೆದಿದ್ದ ಆರೋಪಿ ಇಂದುಶೇಖರ್; ನಂದಿನಿ, ಶಂಕರ್ ಮೃತದೇಹಗಳ ಹೊರತೆಗೆಯುವಿಕೆ ಸಕಲೇಶಪುರ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರ ಮೃತದೇಹಗಳನ್ನು ತಾಲೂಕಿನ ಶಿರಾಡಿ ಘಾಟ್ನ ಮಾರನಹಳ್ಳಿ ಸಮೀಪದ ಕಂದಕಕ್ಕೆ ಎಸೆದಿರುವುದು ಪತ್ತೆಯಾಗಿದೆ.
ಆರೋಪಿ ಇಂದುಶೇಖರ್ನನ್ನು ಸ್ಥಳಕ್ಕೆ ಕರೆತಂದ ಪೊಲೀಸರು, ಆತನಿಂದ ಮಾಹಿತಿ ಪಡೆದು ಸುಮಾರು 100 ಅಡಿ ಆಳದ ಕಂದಕದಿಂದ ನಂದಿನಿ ಮತ್ತು ಶಂಕರ್ ಅವರ ಮೃತದೇಹಗಳನ್ನು ಹೊರತೆಗೆದರು. ಮಲ್ಲೇಶ್ವರಂ ಎಸಿಪಿ ಪ್ರಭಾ ರಮೇಶ್ ಅವರ ನೇತೃತ್ವದ ರಾಜಾಜಿನಗರ ಪೊಲೀಸ್ ಠಾಣೆಯ ತಂಡ ಸೋಮವಾರ ಬೆಳಿಗ್ಗೆ ಆರೋಪಿ ಇಂದುಶೇಖರ್ನನ್ನು ಶಿರಾಡಿ ಘಾಟ್ಗೆ ಕರೆತಂದು ಶವಗಳಿಗಾಗಿ ಹುಡುಕಾಟ ಆರಂಭಿಸಿತು. ಆರಂಭದಲ್ಲಿ ಮೃತದೇಹಗಳನ್ನು ಎಸೆದ ನಿಖರ ಸ್ಥಳವನ್ನು ತೋರಿಸದೆ ಆರೋಪಿ ಪೊಲೀಸರನ್ನು ವಿವಿಧ ಕಡೆ ಅಲೆದಾಡಿಸಿದ ಎನ್ನಲಾಗಿದೆ. ಐದಾರು ಸ್ಥಳಗಳನ್ನು ತೋರಿಸಿ ಗೊಂದಲ ಸೃಷ್ಟಿಸಲು ಯತ್ನಿಸಿದ ಬಳಿಕ ಕೊನೆಗೆ ಮೃತದೇಹಗಳನ್ನು ಎಸೆದಿದ್ದ ಜಾಗವನ್ನು ತೋರಿಸಿದನು.
ಮೃತದೇಹಗಳನ್ನು ಪ್ಲಾಸ್ಟಿಕ್, ಗೋಣಿಚೀಲ ಹಾಗೂ ಹಗ್ಗದಿಂದ ಸುತ್ತಿ ಕಾರಿನಲ್ಲಿ ತಂದು ಕಂದಕಕ್ಕೆ ಎಸೆದಿರುವುದು ತಿಳಿದುಬಂದಿದೆ. ಸುಮಾರು 100 ಅಡಿ ಆಳದ ಕಂದಕಕ್ಕೆ ಹಗ್ಗದ ಸಹಾಯದಿಂದ ಇಳಿದ ಪೊಲೀಸರು ಹಾಗೂ ಸ್ಥಳೀಯರು, ಆಂಬ್ಯುಲೆನ್ಸ್ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲಕ್ಕೆತ್ತಿದರು. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳದಲ್ಲೇ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.
ಮಗಳ ಕೊನೆಯ ಕರೆ ಶುಕ್ರವಾರ ಬಂದಿತ್ತು: ತಾಯಿ ತುಂಗಾ
ಮೃತ ನಂದಿನಿ ಅವರ ತಾಯಿ ತುಂಗಾ ಮಾತನಾಡಿ, ಶುಕ್ರವಾರ ಮಗಳು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದೂರವಾಣಿ ಕರೆ ಮಾಡಿ ಮಾತನಾಡಿದ್ದಳು. ಆಗ ಸ್ವಲ್ಪ ಕೆಲಸವಿದೆ, ಮನೆಗೆ ಹೋದ ಬಳಿಕ ಮತ್ತೆ ಕರೆ ಮಾಡುತ್ತೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಳು. ಆದರೆ ಅದೇ ಕೊನೆಯ ಮಾತಾಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ನೋವು ವ್ಯಕ್ತಪಡಿಸಿದರು.
ಶನಿವಾರ ಬೆಳಿಗ್ಗೆ ಎಂದಿನಂತೆ ಮಗಳಿಗೆ ಕರೆ ಮಾಡಿದಾಗ ಫೋನ್ ಸ್ವೀಕರಿಸಲಿಲ್ಲ. ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿರಬಹುದು ಎಂದು ಭಾವಿಸಿ ಒಂದು ಗಂಟೆಯ ಬಳಿಕ ಮತ್ತೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ಅಳಿಯ ಶಂಕರ್ ಅವರಿಗೂ ಕರೆ ಮಾಡಿದಾಗ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಸಾಮಾನ್ಯವಾಗಿ ಅವರ ಫೋನ್ ಸ್ವಿಚ್ ಆಫ್ ಆಗುತ್ತಿರಲಿಲ್ಲ ಎಂದು ತುಂಗಾ ತಿಳಿಸಿದರು.
ನಂತರ ಮನೆ ಮಾಲೀಕರನ್ನು ಸಂಪರ್ಕಿಸಿ ವಿಚಾರಿಸಿದಾಗ, ಶುಕ್ರವಾರ ತಡವಾಗಿ ಬರುವುದಾಗಿ ಹಾಗೂ ಗೇಟ್ಗೆ ಬೀಗ ಹಾಕಬಾರದೆಂದು ಅಳಿಯ ತಿಳಿಸಿದ್ದಾಗಿ ಅವರು ಮಾಹಿತಿ ನೀಡಿದ್ದರು. ಆದರೆ ಬಳಿಕ ಇಬ್ಬರೂ ಮನೆಗೆ ಬಂದಿರಲಿಲ್ಲ. ಸಂಬಂಧಿಕರ ಮನೆಗೆ ತೆರಳಿ ವಿಚಾರಿಸಿದಾಗ, ಅವರೂ ಸುಮಾರು 15 ದಿನಗಳಿಂದ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು. ಇದರಿಂದ ಆತಂಕಗೊಂಡ ಕುಟುಂಬದವರು ಹುಡುಕಾಟ ನಡೆಸಿದ್ದರು ಎಂದು ವಿವರಿಸಿದರು.
ಘಟನೆಗೂ ಮುನ್ನ ನಂದಿನಿಯ ಕಚೇರಿಯಲ್ಲಿದ್ದ ಮಹಿಳೆಯೊಬ್ಬರು ಕರೆ ಮಾಡಿ, ಇಂದುಶೇಖರ್ ಅವರ ಮಗಳು ಊಟಕ್ಕೆ ಮನೆಗೆ ಬರುವಂತೆ ಪದೇಪದೇ ಆಹ್ವಾನಿಸುತ್ತಿದ್ದ ವಿಚಾರವನ್ನೂ ತುಂಗಾ ಪ್ರಸ್ತಾಪಿಸಿದರು. ಇದರಿಂದ ನಂದಿನಿ ಮನೆಯಲ್ಲಿ ಏನೋ ಸಮಸ್ಯೆ ಇದೆ ಎಂದು ಅಳಿಯನೊಂದಿಗೆ ಮಾತನಾಡಿದ್ದಳು ಎನ್ನಲಾಗಿದೆ. ಬಳಿಕ ಕೆಲಸ ಮುಗಿಸಿ ಸಂಜೆ ಮನೆಗೆ ಬರುವುದಾಗಿ ಶಂಕರ್ ಹೇಳಿದ್ದರೆಂದು ತುಂಗಾ ತಿಳಿಸಿದರು.
ತಾಯಿ ತುಂಗಾ ಅವರ ಹೇಳಿಕೆಯ ಪ್ರಕಾರ, ಅಂದು ಇಂದುಶೇಖರ್ ಮತ್ತು ಆತನ ಮಗಳು ಮಗುವಿನೊಂದಿಗೆ ಮನೆಗೆ ತೆರಳಿ ಚಿಕನ್ ತಂದು ಅಡುಗೆ ಮಾಡಿದ್ದರು. ಊಟದ ಬಳಿಕ ಶಂಕರ್ ಹಾಲ್ನಲ್ಲಿ ಮಲಗಿದ್ದರೆ, ನಂದಿನಿ, ಇಂದುಶೇಖರ್ ಅವರ ಮಗಳು ಹಾಗೂ ಮೊಮ್ಮಗ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ಮರುದಿನ ಬೆಳಿಗ್ಗೆ ಶಂಕರ್ ಅಲ್ಲಿರಲಿಲ್ಲ. ನಂದಿನಿ ಕೋಣೆಯಿಂದ ಹೊರಬರಲು ಯತ್ನಿಸಿದಾಗ ಮೊಮ್ಮಗನನ್ನೂ ಒಳಗೆ ಎಳೆದುಕೊಂಡು ಬಾಗಿಲು ಹಾಕಲಾಗಿತ್ತು ಎಂಬ ಮಾಹಿತಿಯನ್ನು ಕುಟುಂಬದವರು ಹಂಚಿಕೊಂಡಿದ್ದಾರೆ. ಈ ವೇಳೆ ನಂದಿನಿ ಕಿರುಚುತ್ತಿದ್ದ ಶಬ್ದ ಕೇಳಿದ್ದಾಗಿ ಮೊಮ್ಮಗ ಹೇಳಿರುವುದಾಗಿ ತುಂಗಾ ತಿಳಿಸಿದ್ದಾರೆ. ಬಳಿಕ ತಂದೆ ಕೋಣೆಗೆ ಬಂದಾಗ ತಾಯಿ-ತಂದೆ ಎಲ್ಲಿ ಎಂದು ಮಗು ಕೇಳಿದಾಗ, ಅವರು ಕೆಲಸಕ್ಕೆ ಹೋಗಿದ್ದಾರೆ ಎಂದು ಹೇಳಿದ್ದಾಗಿ ತಿಳಿಸಿದರು.
ಆಸ್ತಿಯ ವಿಚಾರವೇ ಈ ಘಟನೆಗೆ ಕಾರಣವಾಗಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ ತುಂಗಾ, ತಮ್ಮ ಮಗಳು ಹಾಗೂ ಅಳಿಯನ ಕುಟುಂಬಕ್ಕೆ ಸೇರಿದ ಆಸ್ತಿಯ ವಿಚಾರವಾಗಿ ಈ ಕೃತ್ಯ ನಡೆದಿರಬಹುದು ಎಂದು ಆರೋಪಿಸಿದರು. ಈ ಎಲ್ಲ ಅಂಶಗಳ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರಬೇಕು ಎಂದು ಒತ್ತಾಯಿಸಿದರು.
ಬಾಲಕಿಯ ಪಾತ್ರದ ಬಗ್ಗೆಯೂ ತನಿಖೆಯಾಗಲಿ: ಕುಟುಂಬದ ಆಪ್ತ ಸಂತೋಷ್ ಆಗ್ರಹ
ಕುಟುಂಬದ ಆಪ್ತ ಸಂತೋಷ್ ಮಾತನಾಡಿ, ಪ್ರಕರಣದಲ್ಲಿ 17 ವರ್ಷದ ಬಾಲಕಿಯ ಪಾತ್ರದ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ತಾಯಿಯ ಕೊಲೆ ನಡೆದ ಸಂದರ್ಭದಲ್ಲಿ ಬಾಲಕಿಗೆ ಈ ವಿಚಾರ ತಿಳಿದಿದ್ದರೂ ಇತರರಿಗೆ ಮಾಹಿತಿ ನೀಡದಿರುವುದರಿಂದ ಉಳಿದವರ ಜೀವಕ್ಕೂ ಅಪಾಯ ಎದುರಾಯಿತು ಎಂಬುದು ಕುಟುಂಬದವರ ಅನುಮಾನವಾಗಿದೆ. ಈ ಕುರಿತು ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ, ಆಕೆಯ ಪಾತ್ರ ಸಾಬೀತಾದಲ್ಲಿ ಅಪ್ರಾಪ್ತರಿಗೆ ಅನ್ವಯಿಸುವ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಕರಣದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆ ವರ್ಷಗಟ್ಟಲೆ ವಿಳಂಬವಾಗಬಾರದು. ಸಾಕ್ಷ್ಯಾಧಾರಗಳನ್ನು ತ್ವರಿತವಾಗಿ ಪರಿಶೀಲಿಸಿ, ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಪ್ರಕರಣದ ತನಿಖೆಯಲ್ಲಿ ತೊಡಗಿರುವ ಶ್ರೀರಾಂಪುರ, ರಾಜಾಜಿನಗರ ಹಾಗೂ ಸಕಲೇಶಪುರದ ಪೊಲೀಸರ ಕಾರ್ಯವೈಖರಿಯನ್ನು ಸಂತೋಷ್ ಶ್ಲಾಘಿಸಿದರು. ಪೊಲೀಸರ ಬಗ್ಗೆ ಪ್ರಕರಣದ ಪೂರ್ಣ ಮಾಹಿತಿ ತಿಳಿಯದೆ ಆರೋಪಗಳನ್ನು ಮಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಹಾಗೂ ನೋವುಂಟುಮಾಡುವ ಹೇಳಿಕೆಗಳನ್ನು ಪ್ರಕಟಿಸಬಾರದು ಎಂದು ಮನವಿ ಮಾಡಿದರು. ಆರೋಪಿ ಪತ್ರಕರ್ತನಲ್ಲದಿದ್ದರೂ ವಾಹನ ಮತ್ತು ಮನೆಯಲ್ಲಿ ಪತ್ರಿಕಾ ಗುರುತಿನ ಚಿಹ್ನೆಗಳನ್ನು ಬಳಸಿರುವ ವಿಚಾರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಜಿಲ್ಲಾಡಳಿತದಲ್ಲಿ ಅವ್ಯವಹಾರ ಆರೋಪ; ಲೋಕಾಯುಕ್ತಕ್ಕೆ ದೂರು
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದು, ಮೃತರ ಕುಟುಂಬಸ್ಥರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.




