ಸಾಹಿತಿಗಳು ಮೊದಲು ಕನ್ನಡ ಭಾಷೆ ಅರ್ಥ ಮಾಡಿಕೊಂಡು ಜನರಿಗೆ ಓದುವ ರುಚಿ ಹಚ್ಚುವಂತಹ ಸಾಹಿತ್ಯ ಕೃತಿ ರಚಿಸಬೇಕು ಎಂದು ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪೂರ ಸಲಹೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜೀರಗಾಳದಲ್ಲಿ ಸಾಹಿತಿ ಡಾ. ಶಿವಾನಂದ ಕುಬಸದ ಅವರ ಪರ್ಣಕುಟಿ ಆವರಣದಲ್ಲಿ ಕಸಾಪ ಆಯೋಜಿಸಿದ ಜಿಲ್ಲಾ ಮಟ್ಟದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
“ಕಸಾಪ ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡ ಸೇವೆ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಲೇಖಕರನ್ನು ಗುರುತಿಸಿ ದತ್ತಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಶ್ಲಾಘನೀಯ” ಎಂದು ಚಿಂತನಸಿರಿ ಅಧ್ಯಕ್ಷ ಶಿವಾನಂದ ಕುಬಸದ ಹೇಳಿದರು.
ದತ್ತಿನಿಧಿ ಸ್ಥಾಪನೆ: ಕಸಾಪ ತಾಲೂಕು ಅಧ್ಯಕ್ಷ ಆನಂದ ಪೂಜಾರಿ ತಮ್ಮ ತಂದೆ ಸವಿನೆನಪಿಗೆ ದಿ.ಸತ್ಯಪ್ಪ ಪೂಜಾರಿ ಹಾಗೂ ರಮೇಶ ನಿಡೋಣಿ ಅವರ ಮಾವ ಗೋವಿಂದಪ್ಪ ಸುರಮಂಜಿ ಅವರ ಸ್ಮರಣಾರ್ಥ ಕಸಾಪಗೆ 25 ಸಾವಿರ ದತ್ತಿನಿಧಿ ತೋಟಗಾರಿಕೆ ಸ್ಥಾಪಿಸಿದರು ಎಂದು ಜಿಲ್ಲಾ ವಿಶ್ವವಿದ್ಯಾಲಯ ಹಣಕಾಸು ನಿಯಂತ್ರಣಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅಭಿನಂದನಾ ನುಡಿಗಳನ್ನು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಕಾರ್ಮಿಕರಿಗೆ 36 ಸಾವಿರ ರೂ. ಕನಿಷ್ಠ ವೇತನ ನೀಡುವಂತೆ ಸಿಐಟಿಯು ಆಗ್ರಹ: ಮೇ 30ರಂದು ಪ್ರತಿಭಟನೆ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೇನವರ, ಎಸ್ ಎಸ್ ಪುರವಾರ, ತುಕಾರಾಮ ಲಮಾಣಿ ಹಾಗೂ ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಯಲ್ಲಿ ದೇಶಕ್ಕೆ 114ನೇ ಸ್ಥಾನ ಪಡೆದಿರುವ ಲೋಕಾಪುರದ ಸಂಜಯ ಬಗಲಿ ಅವರನ್ನು ಸನ್ಮಾನಿಸಲಾಯಿತು.
ರನ್ನ ಪ್ರತಿಷ್ಠಾನ ಸದಸ್ಯ ಡಾ. ಕೆ ಎಲ್ ಉದುಪುಡಿ, ಗಿರೀಶ ಮಂಗಳೂರ, ಪ್ರಕಾಶ ವಸ್ತ್ರದ, ಕಲಾದಗಿಯ ಹಿರಿಯ ಪತ್ರಕರ್ತ ದ. ರಾ. ಪುರೋಹಿತ, ರಮೇಶ ನಿಡೋಣಿ, ಸಂಚಾಲಕ ಚಂದ್ರಶೇಖರ ದೇಸಾಯಿ, ಕಸಾಪ ಅಧ್ಯಕ್ಷ ಆನಂದ ಪೂಜಾರಿ ಸೇರಿದಂತೆ ಇತರರು ಇದ್ದರು.




