ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಚುನಾವಣಾ ಆಯೋಗ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರ ಹಾಕುವ ಕೆಲಸ ಮಾಡುತ್ತಿರುವುದನ್ನು ಖಂಡನೀಯ. ಚುನಾವಣಾ ಆಯೋಗದ ಕ್ರಮ ಖಂಡಿಸಿ ತಾಲ್ಲೂಕು ಕಛೇರಿಯ ಮುಂದೆ ತಾಲ್ಲೂಕು ಸಿಪಿಐಎಂ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿ ತಹಶಿಲ್ದಾರ್ ಮುಖಾಂತರ ಸಿ.ಎಂ ಗೆ ಮನವಿ ಸಲ್ಲಿಸಿದರು.
ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನ ಸಿಪಿಐಎಂ ಪಕ್ಷದ ಕಛೇರಿ ಯಿಂದ ಹೊರಟು ಪ್ರತಿಭಟನಾಕಾರರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಮನೀಷಾ ಎನ್ ಪತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತದನಂತರ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಘನಘೋರ ಅಪರಾಧ. ದೇಶದ ವ್ಯವಸ್ಥೆಯೇ ದೇಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಟ್ಟ ಕಡೆಯ ಮನುಷ್ಯನೂ ಮತದಾನದ ಹಕ್ಕು ಚಲಾಯಿಸುವಂತೆ ನ್ಯಾಯ ಕೊಡಿಸುವುದು ಆಳುವ ಸರ್ಕಾರಗಳ ಧ್ಯೇಯವಾಗಬೇಕು. ರಾಜ್ಯದಲ್ಲಿ ಕೂಡ ಎಸ್‌ಐಆರ್ ಆರಂಭವಾಗಿದ್ದು ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಟ್ಟರೆ ರಾಜ್ಯದಾದ್ಯಂತ ಹೋರಾಟಗಳು ನಡೆಯಲಿವೆ’ ಎಂದು ಎಚ್ಚರಿಸಿದರು.
ಎಸ್‌ಐಆರ್ ಎಂಬುದು ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯಾಗಿದೆ. ಸಾಮಾನ್ಯ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಬಡವರು, ಕಾರ್ಮಿಕರು, ಗ್ರಾಮೀಣ ಪ್ರದೇಶದ ಜನರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ. ಸರ್ಕಾರ ಹಾಗೂ ಚುನಾವಣಾ ಆಯೋಗವು ಜನರಲ್ಲಿ ಗೊಂದಲ ಸೃಷ್ಟಿಸುವ ಬದಲು ಪಾರದರ್ಶಕ ಮತ್ತು ಸಂವಿಧಾನಬದ್ಧ ವಿಧಾನಗಳನ್ನು ಅನುಸರಿಸಬೇಕು” ಎಂದು ಆಗ್ರಹಿಸಿದರು.
ನುಸುಳುಕೋರರನ್ನು ಪತ್ತೆಹಚ್ಚಲು ಎಸ್‌ಐಆರ್ ಜಾರಿಗೆ ಹೊರಟಿರುವ ಚುನಾವಣಾ ಆಯೋಗದ ನೀತಿಯಿಂದ ಬಿಹಾರದಲ್ಲಿ 61 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅರ್ಹತೆಯಿದ್ದರೂ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟಿರುವುದನ್ನು ವಿರೋಧಿಸಿ 34 ಲಕ್ಷ ಜನ ನ್ಯಾಯಾಲಯದ ಮೋರೆ ಹೋಗಿದ್ದಾರೆ. ಚುನಾವಣಾ ಆಯೋಗದ ಆದೇಶ ಪಾಲಿಸಲು ಸಾಧ್ಯವಾಗದ ಬಿಎಲ್‍ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 13 ರಾಜ್ಯಗಳಿಂದ 6.5 ಕೋಟಿ ಹೆಸರು ಮತದಾರರ ಪಟ್ಟಿಯಿಂದ ರದ್ದಾಗಿದೆ. ಇದು ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೂ ದೊಡ್ಡ ಗಂಡಾಂತರವಾಗಲಿದೆ. ಸರ್ಕಾರ ಇಲ್ಲಿ ಯಾಕೆ ಅಷ್ಟೊಂದು ತರಾತುರಿಯಲ್ಲಿ ಜಾರಿಗೊಳಿಸಲು ಮುಂದಾಗಿದೆ. ಪರಿಷ್ಕರಣೆಯ ಉದ್ದೇಶವೇನು ಎಂದು ಹೇಳಿದರು.
ಸಿಪಿಐಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮ ರೆಡ್ಡಿ ಮಾತನಾಡಿ ದೊಡ್ಡ ಪ್ರಮಾಣದಲ್ಲಿ ಮತದಾರರು ಮ್ಯಾಪಿಂಗ್ ಆಗದೆ ಹೊರಗುಳಿಯುತ್ತಿದ್ದಾರೆ. ರಾಜ್ಯದಲ್ಲಿ ಜೂನ್ 30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಸಮಸ್ಯೆಗಳು ಅಲ್ಲಿಂದಲೇ ಹೆಚ್ಚಾಗಲಿವೆ. ಮೃತಪಟ್ಟವರು, ನಕಲಿ ಮತದಾರರು, ಶಾಶ್ವತವಾಗಿ ಸ್ಥಳಾಂತರ ಆದವರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಪ್ರಕ್ರಿಯೆ ಪ್ರತಿವರ್ಷ ನಡೆಯುತ್ತದೆ. ಆದರೆ, ಅದರ ನೆಪದಲ್ಲಿ ತಳ ಸಮುದಾಯದ ಜನರ ಮತದಾನದ ಹಕ್ಕನ್ನೇ ಕಸಿಯುವ ಅಪಾಯ ಉಂಟು ಮಾಡುತ್ತಿದೆ’ ಎಂದು ತಿಳಿಸಿದರು.
‘ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯನ್ನೂ ಒದಗಿಸಲು ಸಾಧ್ಯವಿಲ್ಲದವರಿಗೆ ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಕಾಯಂ ವಾಸಸ್ಥಳ ದೃಢೀಕರಣ ಪತ್ರ ಪಡೆದುಕೊಳ್ಳಲು ಸಾಧ್ಯವಾಗುವಂತೆ ನಿಯಮ ಸರಳಗೊಳಿಸಿ, ಮತ್ತು ಶೀಘ್ರವಾಗಿ ದಾಖಲೆಗಳನ್ನು ರಾಜ್ಯ ಸರ್ಕಾರವೇ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..? ದಲಿತರ ಭೂಮಿ ವಿವಾದ: ಜೂನ್ 29ರಂದು ಜಿಲ್ಲಾವ್ಯಾಪಿ ಹೋರಾಟದ ಎಚ್ಚರಿಕೆ
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ವಾಲ್ಮೀಕಿ ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ಬಿಳ್ಳೂರು ನಾಗರಾಜು,ಡಿ.ಟಿ.ಮುನಿಸ್ವಾಮಿ, ಎಸ್.ಎಫ್.ಐ ಸೋಮಶೇಖರ್,ಕೆ.ಮುನಿಯಪ್ಪ ,ರಾಮಚಂದ್ರಪ್ಪ, ನರಸಿಂಹ ರೆಡ್ಡಿ,ಶ್ರೀನಿವಾಸ್ ರೆಡ್ಡಿ,ಇಮ್ರಾನ್ ಹಾಗೂ ಸಾರ್ವಜನಿಕರು ಹಾಜರಿದ್ದರು.




