ರೈತರ ಜೀವನಾಧಾರವಾದ ಕೃಷಿಯು ಸುರಕ್ಷಿತವಾಗಿದ್ದರೆ ಮಾತ್ರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯ. ಈ ವರ್ಷದ ಮುಂಗಾರಿನ ಅನುಭವವನ್ನು ಪಾಠವಾಗಿಸಿಕೊಂಡು, ಭವಿಷ್ಯದಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಂತಹ ದೀರ್ಘಕಾಲಿಕ ಯೋಜನೆಗಳನ್ನು ರೂಪಿಸುವುದು ಅತ್ಯಂತ ಮುಖ್ಯವಾಗಿದೆ. ರೈತರು ಮತ್ತು ಸರ್ಕಾರ ಒಟ್ಟಾಗಿ ಕಾರ್ಯಪ್ರವೃತ್ತರಾದರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಅಸಮತೋಲನವನ್ನು ಸರಿಪಡಿಸಿ ಸಮೃದ್ಧ ಬೆಳೆಯನ್ನು ಕಾಣಬಹುದು.
ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಸಂಪೂರ್ಣ ಅಸಮತೋಲನದಿಂದ ಕೂಡಿದೆ. ಒಂದು ಕಡೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿದ ಭಾರೀ ಮಳೆಯಿಂದ ವೇದಗಂಗಾ, ದೂಧಗಂಗಾ ನದಿಗಳು ತುಂಬಿ ಚಿಕ್ಕೋಡಿ, ರಾಯಬಾಗ, ಕಾಗವಾಡ ಹಾಗೂ ನಿಪ್ಪಾಣಿ ಭಾಗದ ರೈತರಿಗೆ ನೀರಿನ ಆಸರೆಯಾದರೆ ಕೆಲವು ತಾಲೂಕುಗಳಲ್ಲಿ ಸಮರ್ಪಕ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೂನ್ ತಿಂಗಳಲ್ಲಿ ಆರಂಭಿಕ ಮಳೆ ನಂಬಿ ಬಿತ್ತನೆ ಮಾಡಿದ ಅನೇಕ ರೈತರು, ಮಳೆ ಕೈಕೊಟ್ಟ ಕಾರಣ ಬೆಳೆಗಳು ಒಣಗಿದ ಹಿನ್ನೆಲೆಯಲ್ಲಿ ಮರುಬಿತ್ತನೆ ಮಾಡಬೇಕಾಯಿತು. ಜುಲೈ ಮೊದಲ ವಾರದಲ್ಲಿ ಕೆಲವೆಡೆ ಮಳೆಯಾದರೂ ನಂತರ ಮತ್ತೆ ಮಳೆ ನಿಂತಿದ್ದು, ಮಳೆಯಾಶ್ರಿತ ಬೆಳೆಗಳು ಜೀವ ಉಳಿಸಿಕೊಳ್ಳಲು ಹೋರಾಡುವ ಸ್ಥಿತಿಗೆ ತಲುಪಿವೆ.
ತಾಲೂಕುವಾರು ಮಳೆಯಲ್ಲೇ ಸ್ಪಷ್ಟ ಅಸಮಾನತೆ
ಬೆಳಗಾವಿ ಜಿಲ್ಲೆಯ ಮಳೆ ಅಂಕಿಅಂಶಗಳು ಈ ಅಸಮಾನತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಖಾನಾಪುರ ತಾಲೂಕಿನಲ್ಲಿ 482 ಮಿ.ಮೀ. ಮಳೆಯಾಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ದಾಖಲಾಗಿದೆ. ಬೆಳಗಾವಿ ತಾಲೂಕಿನಲ್ಲಿ 277 ಮಿ.ಮೀ., ಕಿತ್ತೂರು ತಾಲೂಕಿನಲ್ಲಿ 259 ಮಿ.ಮೀ., ಹುಕ್ಕೇರಿ ತಾಲೂಕಿನಲ್ಲಿ 203 ಮಿ.ಮೀ., ಬೈಲಹೊಂಗಲ ತಾಲೂಕಿನಲ್ಲಿ 180 ಮಿ.ಮೀ. ಮಳೆಯಾಗಿದೆ. ಆದರೆ ರಾಮದುರ್ಗ ತಾಲೂಕಿನಲ್ಲಿ ಕೇವಲ 125.4 ಮಿ.ಮೀ. ಮಳೆಯಾಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
ಬಿತ್ತನೆ ಪ್ರಗತಿ ಉತ್ತಮ, ಆದರೆ ಸರಿಯಾಗಿ ಬೆಳೆ ಇಲ್ಲ
ಜಿಲ್ಲೆಯಲ್ಲಿ ಒಟ್ಟು 7.50 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ನಿಗದಿಯಾಗಿದ್ದು, ಈಗಾಗಲೇ 6.01 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ(ಶೇ.80) ಬಿತ್ತನೆ ಪೂರ್ಣಗೊಂಡಿದೆ. ಆದರೆ ಬಿತ್ತನೆ ಪ್ರಮಾಣ ಹೆಚ್ಚಿದ್ದರೂ, ಮಳೆಯ ಕೊರತೆಯಿಂದ ಬೆಳೆ ಉಳಿಯುತ್ತದೆಯೇ ಎಂಬ ಪ್ರಶ್ನೆ ಈಗ ರೈತರನ್ನು ಕಾಡುತ್ತಿದೆ.
ಖಾನಾಪುರ ತಾಲೂಕಿನ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಜಿಲ್ಲೆಯಲ್ಲೇ ಅತಿಹೆಚ್ಚು 1,01,832 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬಿತ್ತನೆಯಾಗಿದೆ. ಪಶ್ಚಿಮ ಘಟ್ಟದ ಮಳೆಯ ನೆರವಿನಿಂದ ಭತ್ತದ ನಾಟಿಯೂ ವೇಗ ಪಡೆದಿದೆ.
ಬೆಳಗಾವಿ ತಾಲೂಕಿನಲ್ಲಿ ಜೂನ್ ಆರಂಭದಲ್ಲೇ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದವು. ಮೆಕ್ಕೆಜೋಳ, ಹೆಸರು ಹಾಗೂ ಕಬ್ಬು ಪ್ರಮುಖ ಬೆಳೆಗಳಾಗಿದ್ದು, ಬಿತ್ತನೆ ಪ್ರಮಾಣ ಶೇ.82 ದಾಟಿದೆ.
ರಾಮದುರ್ಗ ತಾಲೂಕಿನಲ್ಲಿ ಮಳೆಗಾಗಿ ಕಾಯುತ್ತಿರುವ ರೈತರು
ಅತಿ ಕಡಿಮೆ ಮಳೆಯಾಗಿರುವ ರಾಮದುರ್ಗ ತಾಲೂಕಿನಲ್ಲಿ ಮಳೆಯಾಶ್ರಿತ ಬೆಳೆಗಳ ಬಿತ್ತನೆ ಪ್ರಮಾಣ ಶೇ.88.7 ದಾಖಲಾಗಿದೆ. ಮೆಕ್ಕೆಜೋಳ ಬಿತ್ತನೆ ಗುರಿ 21,210 ಹೆಕ್ಟೇರ್ ಇದ್ದು, ಕೇವಲ 8,075 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಸಜ್ಜೆ 3,920 ಹೆಕ್ಟೇರ್ ಗುರಿಯಲ್ಲಿ 1,773 ಹೆಕ್ಟೇರ್, ಸೂರ್ಯಕಾಂತಿ 1,740 ಹೆಕ್ಟೇರ್ ಗುರಿಯಲ್ಲಿ 590 ಹೆಕ್ಟೇರ್, ಶೇಂಗಾ 200 ಹೆಕ್ಟೇರ್ ಗುರಿಯಲ್ಲಿ 115 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹೆಸರು ಮಾತ್ರ 22,483 ಹೆಕ್ಟೇರ್ ಗುರಿಗೆ ವಿರುದ್ಧವಾಗಿ 24,371 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಆದರೆ ಜುಲೈ ಮೊದಲ ವಾರದ ನಂತರ ಸಮರ್ಪಕ ಮಳೆಯಿಲ್ಲದ ಕಾರಣ ತಾಲೂಕಿನಲ್ಲಿ ಅತಿ ಹೆಚ್ಚು ಬಿತ್ತನೆಯಾಗಿರುವ ಹೆಸರು ಬೆಳೆ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದು, ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಕಾಯಿ ಕಟ್ಟದೆ ಇಳುವರಿ ಕುಸಿಯುವ ಭೀತಿ ಎದುರಾಗಿದೆ.
ಇನ್ನೊಂದು ವಾರ ಮಳೆ ಬರದಿದ್ದರೆ ಬೆಳೆ ಉಳಿಯುವುದಿಲ್ಲ
ರಾಮದುರ್ಗ ತಾಲೂಕಿನ ರೈತ ಕಲ್ಲಪ್ಪ ಪೂಜೇರ ಈ ದಿನ.ಕಾಮ್ ಜತೆಗೆ ಮಾತನಾಡಿ, “ಎರಡು ಎಕರೆ ಹೆಸರು ಬಿತ್ತಿದ್ದೇವೆ. ಆರಂಭದಲ್ಲಿ ಮಳೆಯಾದರೂ ನಂತರ ಮಳೆ ಬಂದಿಲ್ಲ. ಇನ್ನೊಂದು ವಾರದಲ್ಲಿ ಮಳೆ ಆಗದಿದ್ದರೆ ಹೆಸರು ಕಾಯಿ ಕಟ್ಟುವುದೇ ಇಲ್ಲ. ಸರ್ಕಾರ ರೈತರಿಗೆ ನೆರವು ನೀಡಬೇಕು” ಎಂದು ಮನವಿ ಮಾಡಿದರು.
ರೈತ ಮಂಜುನಾಥ ಬಸರಗಿ ಈ ದಿನ.ಕಾಮ್ ಜತೆ ಮಾತನಾಡಿ, “ಎಂಟು ಎಕರೆ ಹೆಸರು ಬಿತ್ತನೆಗೆ ಸುಮಾರು ₹30 ಸಾವಿರ ಖರ್ಚು ಮಾಡಿದ್ದೇವೆ. ಮಳೆ ಬರದಿದ್ದರೆ ಎಲ್ಲವೂ ನಷ್ಟವಾಗಲಿದೆ. ಸರ್ಕಾರ ಬೆಳೆವಿಮೆ ಹಾಗೂ ಬೆಳೆಹಾನಿ ಪರಿಹಾರವನ್ನು ತಕ್ಷಣ ನೀಡಬೇಕು” ಎಂದು ಹೇಳಿದರು.
ಈ ಕುರಿತು ಈ ದಿನ.ಕಾಮ್ ಜತೆಗೆ ಬೈಲಹೊಂಗಲ ತಾಲೂಕಿನ ರೈತ ಸಂಘಟನೆಯ ಬಸವರಾಜ ಮೊಕಾಶಿ ಮಾತನಾಡಿ, “ಬೈಲಹೊಂಗಲ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಬಿತ್ತನೆ ಮಾಡಲಾಗುತ್ತದೆ. ಜೂನ್ ತಿಂಗಳಲ್ಲಿ ಸ್ವಲ್ಪ ಮಳೆಯಾದ ಕಾರಣ ರೈತರು ಬಿತ್ತನೆ ಮಾಡಿದ್ದರು. ಆದರೆ ನಂತರ ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗಿತು. ಜುಲೈನಲ್ಲಿ ಮತ್ತೆ ಮಳೆಯಾದ ಬಳಿಕ ಮೊದಲೇ ಬಿತ್ತಿದ್ದ ಬೆಳೆಯನ್ನು ಹರಗಿ ಮರುಬಿತ್ತನೆ ಮಾಡಬೇಕಾಯಿತು. ಒಂದು ಎಕರೆ ಸೋಯಾಬೀನ್ ಬೆಳೆಯಲು ಸುಮಾರು ₹10 ಸಾವಿರ ವೆಚ್ಚವಾಗುತ್ತದೆ. ಮರುಬಿತ್ತನೆಯಿಂದ ರೈತರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ” ಎಂದು ಹೇಳಿದರು.
ಹುಕ್ಕೇರಿ ತಾಲೂಕಿನ ರೈತ ಸಂಘಟನೆಯ ಮಲ್ಲಿಕಾರ್ಜುನ ಜಕಾತಿ ಈ ದಿನ.ಕಾಮ್ ಜತೆ ಮಾತನಾಡಿ, “ಹುಕ್ಕೇರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಜಲಾಶಯಗಳಿಗೆ ನೀರು ಬಂದಿರುವುದು ರೈತರಿಗೆ ಅನುಕೂಲವಾಗಿದೆ. ಆದರೆ ಬೆಳೆಗಳ ಇಳುವರಿ ಹೇಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ” ಎಂದರು.
ಅಥಣಿ ತಾಲೂಕಿನ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ಸಿದ್ದಾರ್ಥ ಸಿಂಗೆ ಈ ದಿನ.ಕಾಮ್ ಜತೆ ಮಾತನಾಡಿ, “ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಕಾರಣ ಕೆಲವು ಪ್ರದೇಶಗಳಲ್ಲಿ ಬಿತ್ತನೆ ವಿಳಂಬವಾಗಿದೆ. ಇನ್ನೂ ಕೆಲ ರೈತರು ಬಿತ್ತನೆ ಕಾರ್ಯ ಆರಂಭಿಸಿಲ್ಲ” ಎಂದು ತಿಳಿಸಿದರು.
ಒಟ್ಟಾರೆ ಈ ಬಾರಿಯ ಮುಂಗಾರು ಬೆಳಗಾವಿ ಜಿಲ್ಲೆಯಲ್ಲಿ ಎರಡು ರೀತಿಯಲ್ಲಿ ಇದೆ. ಕೆಲವು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿ ನದಿಗಳು, ಜಲಾಶಯಗಳು ತುಂಬಿ ರೈತರಲ್ಲಿ ಆಶಾಭಾವನೆ ಮೂಡಿಸಿದ್ದರೆ, ಕೆಲವು ತಾಲೂಕುಗಳಲ್ಲಿ ಮಳೆಯ ಕೊರತೆ ರೈತರ ಕನಸುಗಳನ್ನು ನುಚ್ಚುನೂರು ಮಾಡುವಂತಾಗಿದೆ. ಸಾಲ ಮಾಡಿ, ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳು ಕಣ್ಣೆದುರೇ ಒಣಗುತ್ತಿರುವ ದೃಶ್ಯ ರೈತರನ್ನು ಕಂಗಾಲಾಗಿಸಿದೆ. ಕೆಲವರು ಒಂದೇ ಬೆಳೆಯನ್ನು ಎರಡು ಬಾರಿ ಬಿತ್ತನೆ ಮಾಡಿ ದುಪ್ಪಟ್ಟು ಹಣ ಖರ್ಚು ಮಾಡಿದ್ದರೆ, ಇನ್ನೂ ಕೆಲವು ತಾಲೂಕುಗಳಲ್ಲಿ ಮಳೆಯ ನಿರೀಕ್ಷೆಯಲ್ಲೇ ಹೊಲಗಳನ್ನು ಖಾಲಿ ಬಿಟ್ಟಿದ್ದಾರೆ.
ಇದನ್ನೂ ಓದಿದ್ದೀರಾ? ತೋತಾಪುರಿ ಬೆಲೆ 3 ರೂ.ಗೆ ಕುಸಿತ: ಮಾವು ಬೆಳೆಗಾರರಿಗೆ ಮತ್ತಷ್ಟು ಸಂಕಷ್ಟ
ಮುಂಗಾರು ಮಳೆ ವೈಪರೀತ್ಯದಿಂದ ರೈತರು ಅಸಹಾಯಕರಾಗಿದ್ದು, ರಾಮದುರ್ಗ ತಾಲೂಕಿನ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮುಂದಿನ ಒಂದು ವಾರದಲ್ಲಿ ಉತ್ತಮ ಮಳೆಯಾದರೆ ಮಾತ್ರ ಹೆಸರು, ಉದ್ದು, ತೊಗರಿ ಸೇರಿದಂತೆ ಮಳೆಯಾಶ್ರಿತ ಬೆಳೆಗಳು ಚೇತರಿಸಿಕೊಂಡು ಇಳುವರಿ ನೀಡುವ ಸಾಧ್ಯತೆ ಇದೆ. ಇಲ್ಲದಿದ್ದರೆ ಸಾವಿರಾರು ರೈತ ಕುಟುಂಬಗಳ ಶ್ರಮ, ಹಣ ಮತ್ತು ನಿರೀಕ್ಷೆಗಳು ಮಣ್ಣಿನಲ್ಲಿ ಮಣ್ಣಾಗುವ ಆತಂಕ ಎದುರಾಗಿದೆ. ಇಂತಹ ಅಸಮತೋಲನವು ಜಿಲ್ಲೆಯ ಕೃಷಿ ಆರ್ಥಿಕತೆಗೆ ದೊಡ್ಡ ಸವಾಲನ್ನು ಒಡ್ಡಿದೆ.
ಸರ್ಕಾರವು ಕೂಡಲೇ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಮಳೆಯ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸುವುದು, ಬರ ಪ್ರದೇಶಗಳಲ್ಲಿ ಕೃಷಿ ವಿಮೆ, ಬೀಜ-ಗೊಬ್ಬರ ಸಹಾಯ, ಮತ್ತು ಜಲ ಸಂರಕ್ಷಣೆ ಸೇರಿದಂತೆ ಇತರೆ ನೆರವು ಕ್ರಮಗಳನ್ನು ಕೈಗೊಳ್ಳುವಂತಹ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸುವ ಅಗತ್ಯವಿದ್ದು, ಸರ್ಕಾರದ ಕರ್ತವ್ಯವಾಗಿದೆ.
ರೈತರ ಜೀವನಾಧಾರವಾದ ಕೃಷಿಯು ಸುರಕ್ಷಿತವಾಗಿದ್ದರೆ ಮಾತ್ರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯ. ಈ ವರ್ಷದ ಮುಂಗಾರಿನ ಅನುಭವವನ್ನು ಪಾಠವಾಗಿಸಿಕೊಂಡು, ಭವಿಷ್ಯದಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಂತಹ ದೀರ್ಘಕಾಲಿಕ ಯೋಜನೆಗಳನ್ನು ರೂಪಿಸುವುದು ಅತ್ಯಂತ ಮುಖ್ಯವಾಗಿದೆ. ರೈತರು ಮತ್ತು ಸರ್ಕಾರ ಒಟ್ಟಾಗಿ ಕಾರ್ಯಪ್ರವೃತ್ತರಾದರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಅಸಮತೋಲನವನ್ನು ಸರಿಪಡಿಸಿ ಸಮೃದ್ಧ ಬೆಳೆಯನ್ನು ಕಾಣಬಹುದು.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



