ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ನಾಗನೂರ ಗ್ರಾಮದ ನಿವಾಸಿಗಳಾದ ಮುತ್ತಪ್ಪ ಶ್ರೀಶೈಲ ಮುಗೋಳಖೋಡ (42) ಹಾಗೂ ಅವರ ಪತ್ನಿ ರಾಜಶ್ರೀ ಮುಗೋಳಖೋಡ (36) ಮೃತ ದುರ್ದೈವಿಗಳಾಗಿದ್ದಾರೆ.
ಸೋಮವಾರ ಹೊಲದಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕಕ್ಕೆ ಬಂದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ,
ಅಷ್ಟರಲ್ಲೇ ಇಬ್ಬರೂ ಮೃತಪಟ್ಟಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ಮೂಡಲಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ದಂಪತಿಯ ಅಕಾಲಿಕ ಸಾವಿನಿಂದ ನಾಗನೂರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಕುಟುಂಬದ ಆಧಾರಸ್ತಂಭಗಳಾಗಿದ್ದ ಇಬ್ಬರನ್ನೂ ಒಂದೇ ಕ್ಷಣದಲ್ಲಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಗ್ರಾಮದಲ್ಲಿ ದುಃಖದ ವಾತಾವರಣ ನೆಲೆಸಿದೆ.



