ಮಕ್ಕಳು ಮತ್ತು ಯುವಜನರನ್ನು ಆನ್ಲೈನ್ ಹಾನಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಬ್ರಿಟಿಷ್ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 16 ಮತ್ತು 17 ವರ್ಷದ ಹದಿಹರೆಯದವರಿಗಾಗಿ ‘ ರಾತ್ರಿವೇಳೆ ಸ್ವಯಂಪ್ರೇರಿತ ಸಾಮಾಜಿಕ ಮಾಧ್ಯಮ ಕರ್ಫ್ಯೂ’ (Voluntary overnight social media curfew) ಜಾರಿಗೆ ತರುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ.
ಈ ಹೊಸ ನಿಯಮಗಳಡಿಯಲ್ಲಿ, ಬಳಕೆದಾರರನ್ನು ದೀರ್ಘಕಾಲ ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ‘ಆಟೋ-ಪ್ಲೇ’ ವೀಡಿಯೊಗಳಂತಹ ಫೀಚರ್ಗಳನ್ನು ಹದಿಹರೆಯದವರ ಖಾತೆಗಳಲ್ಲಿ ಡೀಫಾಲ್ಟ್ ಆಗಿ ಸ್ಥಗಿತಗೊಳಿಸಲಾಗುತ್ತದೆ.
ಈ ನಿಯಮಗಳು ಸ್ವಯಂಪ್ರೇರಿತವಾಗಿರುವುದರಿಂದ, ಹದಿಹರೆಯದವರು ಇವುಗಳನ್ನು ಸುಲಭವಾಗಿ ಆಫ್ ಮಾಡಬಹುದು ಎಂಬ ಟೀಕೆಗಳು ಕೇಳಿಬಂದಿವೆ. ಆದರೆ, ಆನ್ಲೈನ್ ಸುರಕ್ಷತಾ ಸಚಿವ ಕನಿಷ್ಕ ನಾರಾಯಣ್ ಅವರು ಈ ಟೀಕೆಗಳನ್ನು ತಳ್ಳಿಹಾಕಿದ್ದಾರೆ. ಇಂತಹ ಫೀಚರ್ಗಳನ್ನು ನೀಡಿದಾಗ 90% ಕ್ಕಿಂತ ಹೆಚ್ಚು ಹದಿಹರೆಯದವರು ಅದನ್ನು ಬದಲಾಯಿಸದೆ ಹಾಗೆಯೇ ಮುಂದುವರಿಸಿದ್ದಾರೆ ಎಂದು ಅವರು ಉದಾಹರಣೆ ನೀಡಿದ್ದಾರೆ. ಇತ್ತೀಚೆಗೆ ನಡೆಸಲಾದ ಪ್ರಾಯೋಗಿಕ ಕಾರ್ಯಕ್ರಮದಲ್ಲಿ, ಈ ಕ್ರಮಗಳು ಹದಿಹರೆಯದವರ ನಿದ್ರೆ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡಿವೆ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯು ಕೀ ಸ್ಟಾರ್ಮರ್ ಅವರ ಸರ್ಕಾರದ ಅಂತಿಮ ಕ್ರಮಗಳಲ್ಲಿ ಒಂದಾಗಿದೆ. ಇದನ್ನು ಜಾರಿಗೆ ತರಲು ಶಾಸನಬದ್ಧ ಅನುಮೋದನೆ ಅಗತ್ಯವಿದ್ದು, ಮುಂದಿನ ಸರ್ಕಾರವೂ ಇದನ್ನು ಮುಂದುವರಿಸುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ, 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಸರ್ಕಾರ ಮಂಡಿಸಿತ್ತು, ಇದು ಮುಂದಿನ ವಸಂತಕಾಲದಿಂದ ಜಾರಿಗೆ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಿಡದಿ ಟೌನ್ಶಿಪ್ | ರೈತ ಹೋರಾಟಕ್ಕೆ ಜಯ: ಬಲವಂತದ ಭೂಸ್ವಾಧೀನವಿಲ್ಲ ಎಂದ ಸಿಎಂ ಡಿಕೆಶಿ
ಈ ನಡೆಯನ್ನು ಮಕ್ಕಳ ಹಕ್ಕುಗಳ ಪರವಾದ ಸಂಸ್ಥೆಗಳು ಸ್ವಾಗತಿಸಿವೆ. ಇದು ಯುವಜನರ ಅನುಭವವನ್ನು ಸುಧಾರಿಸುವತ್ತ ಒಂದು ಸಕಾರಾತ್ಮಕ ಹೆಜ್ಜೆ ಎಂದು ಇಂಗ್ಲೆಂಡ್ನ ಮಕ್ಕಳ ಆಯುಕ್ತರಾದ ರೇಚಲ್ ಡಿಸೌಜಾ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಎನ್ಎಸ್ಪಿಸಿಸಿ (NSPCC) ಸಂಸ್ಥೆಯು, “ಇದು ಕೇವಲ ಮೇಲ್ನೋಟದ ಕ್ರಮವಾಗಲಿದೆ. ಸಾಮಾಜಿಕ ಮಾಧ್ಯಮಗಳ ಚಟುವಟಿಕೆಯನ್ನು ಹೆಚ್ಚಿಸುವ ಮೂಲ ವಿನ್ಯಾಸಗಳನ್ನು ಬದಲಾಯಿಸುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಇದು ಮಕ್ಕಳ ಯೋಗಕ್ಷೇಮವನ್ನು ಸಂಪೂರ್ಣವಾಗಿ ರಕ್ಷಿಸಲು ಸಾಕಾಗುವುದಿಲ್ಲ” ಎಂದು ಎಚ್ಚರಿಸಿದೆ.




