ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ (ಡಿಸಿಸಿ ಬ್ಯಾಂಕ್) 104 ವಿವಿಧ ಹುದ್ದೆಗಳ ನೇಮಕಾತಿಗಾಗಿ ಜುಲೈ 27ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಲೋಪದೋಷಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಸಹಕಾರ ಇಲಾಖೆ ಸೂಚಿಸಿದೆ.
ಈ ಕುರಿತು ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದ ಪತ್ರ ರವಾನಿಸಲಾಗಿದೆ. ನೇಮಕಾತಿಯಲ್ಲಿ ವಯೋಮಿತಿ ವಿನಾಯಿತಿ, ಗುಮಾಸ್ತ ಹುದ್ದೆಗೆ ಪದವಿ ಕಡ್ಡಾಯಗೊಳಿಸಿರುವುದು ಸೇರಿದಂತೆ ಹಲವು ಅಂಶಗಳಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೇ, ನೇಮಕಾತಿ ಪ್ರಕ್ರಿಯೆಯಲ್ಲಿ ನಬಾರ್ಡ್ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸಿಲ್ಲ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಈಗಾಗಲೇ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸಿ, ಲೋಪದೋಷಗಳನ್ನು ಸರಿಪಡಿಸಬೇಕು.
ನಬಾರ್ಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ, ಅಗತ್ಯ ಅನುಮತಿ ಪಡೆದ ಬಳಿಕವೇ 104 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಸಹಕಾರ ಸಂಘಗಳ ನಿಬಂಧಕರ ಕಚೇರಿ ಸೂಚನೆ ನೀಡಿದೆ.



