ಬೆಳಗಾವಿ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ತಡೆಯಲು ಬೆಳಗಾವಿ ನಗರ ಪೊಲೀಸ್ ಇಲಾಖೆ ಮತ್ತೊಮ್ಮೆ ಗಡಿಪಾರು ಅಸ್ತ್ರ ಪ್ರಯೋಗಿಸಿದೆ. ಕೊಲೆ, ಕೊಲೆ ಯತ್ನ, ಮಾರಕಾಸ್ತ್ರ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದು ಹಾಗೂ ಮಾದಕ ವಸ್ತುಗಳ ಅಕ್ರಮ ಮಾರಾಟದಂತಹ ಗಂಭೀರ ಪ್ರಕರಣಗಳಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಹಲಗಾ ಪಿರಾಜಿ ಯಸೂಚೆ, ಗಣೇಶ ಗವಳಿ, ಆದಿತ್ಯ ಗವಳಿ, ಸಂತೋಷ ದಿವಟಗಿ ಮತ್ತು ರಫಿಕ್ ಶೇಖ್ ಈ ಗಡಿಪಾರು ಶಿಕ್ಷೆಗೆ ಒಳಗಾದವರು. ಇವರ ಚಟುವಟಿಕೆಗಳು ಸಾರ್ವಜನಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55 ಹಾಗೂ 56ರಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಮುಂದಿನ ನಿರ್ದಿಷ್ಟ ಅವಧಿಯವರೆಗೆ ಈ ಐವರಿಗೆ ಬೆಳಗಾವಿ ಜಿಲ್ಲೆ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಆದೇಶವನ್ನು ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಪೊಲೀಸರ ಈ ಕ್ರಮದಿಂದ ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದ್ದು, ಸಾರ್ವಜನಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಗಡಿಪಾರು ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಗಮನಾರ್ಹವಾಗಿ, ಕಳೆದ 20 ದಿನಗಳಲ್ಲಿ ಇದು ಎರಡನೇ ಗಡಿಪಾರು ಕ್ರಮವಾಗಿದ್ದು, ಮಾರ್ಚ್ 21ರಂದು ಸರ್ಫರಾಜ್ ಶೇಖ್, ವಿನಾಯಕ ಕೊಲ್ಲಾಪುರಿ ಹಾಗೂ ಸಾಗರ ಸಾಲಗುಡೆ ಅವರನ್ನು ಕಾರವಾರಕ್ಕೆ ಗಡಿಪಾರು ಮಾಡುವ ಆದೇಶ ಹೊರಡಿಸಲಾಗಿತ್ತು.



