ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶಾಸಕ ಅಭಯ್ ಪಾಟೀಲ್ ನಡುವಿನ ಜಟಾಪಟಿ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ, ಬೆಳಗಾವಿ ಮಹಾನಗರ ಪಾಲಿಕೆ ವಿಚಾರಕ್ಕೆ ಆರಂಭವಾದ ರಾಜಕೀಯ ಕದನ, ಇದೀಗ ಅಕ್ರಮ, ತನಿಖೆಗಳ ಮಟ್ಟಕ್ಕೆ ಹೋಗಿ ನಿಂತಿದೆ. ಅಭಯ್ ಪಾಟೀಲ್ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ತಿನಿಸು ಕಟ್ಟೆ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದ್ದು, ತನಿಖೆಗೆ ಸತೀಶ್ ಜಾರಕಿಹೊಳಿ ಆದೇಶಿಸಿದ್ದಾರೆ.
ಅಭಯ್ ಪಾಟೀಲ್ ಅವರು ತಮ್ಮ ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 13 ಗಂಟೆ ಜಾಗದಲ್ಲಿ 2019-20ರಲ್ಲಿ ತಿನಿಸು ಕಟ್ಟೆ ನಿರ್ಮಾಣ ಮಾಡಿದ್ದರು. ಅಲ್ಲಿನ ಮಳಿಗೆಗಳನ್ನು ಅಭಯ್ ಪಾಟೀಲ್ ಅವರು ತಮ್ಮ ಬೆಂಬಲಿಗರಿಗೆ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಮತ್ತು ನಾಲೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಆ ಕಟ್ಟೆ ನಿರ್ಮಾಣದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಪಾಲಿಕೆಯ ಮಾಜಿ ಸದಸ್ಯ ದೀಪಕ ಜಮಖಂಡಿ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರು.
ಮಳಿಗೆಗಳು ಒಬ್ಬರ ಹೆಸರಿನಲ್ಲಿ ಹರಾಜಾಗಿವೆ. ಆದರೆ, ಅವರು ಮತ್ತೊಬ್ಬರಿಗೆ ಬಾಡಿಗೆಗೆ ನೀಡಿದ್ದಾರೆ. ಅಲ್ಲದೆ, ಅವರು ಸರ್ಕಾರ ನಿಗದಿ ಮಾಡಿರುವ ಬಾಡಿಗೆ ಮೊತ್ತಕ್ಕಿಂತ ಹೆಚ್ಚು ಬಾಡಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಅಕ್ರಮಗಳ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ತನಿಖೆ ನಡೆಸಲು ಸತೀಶ್ ಜಾರಕಿಹೊಳಿ ಆದೇಶಿಸಿದ್ದಾರೆ. ಇಲಾಖೆಯ ಚೀಫ್ ಇಂಜಿನಿಯರ್ ದುರ್ಗಪ್ಪ ನೇತೃತ್ವದಲ್ಲಿ ಆರು ಮಂದಿ ಅಧಿಕಾರಿಗಳ ತಂಡ ಬೆಳಗಾವಿಗೆ ತೆರಳಿದ್ದು, ತನಿಖೆ ಆರಂಭಿಸಿದೆ. ಅಧಿಕಾರಿಗಳು ಎಲ್ಲ ಮಳಿಗೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.