ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ರಾಣಮ್ಮಾ ದೇವಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಹಾರೂಗೇರಿ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ₹25.89 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಕಂಚಿನ ವಸ್ತುಗಳು, ನಗದು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಹಂದಿಗುಂದ ಗ್ರಾಮದ ನಿವಾಸಿ ಮಹಾದೇವ ಉದ್ದಪ್ಪ ಬಿರಾಜ ಅವರು ನೀಡಿದ ದೂರಿನ ಮೇರೆಗೆ, ನವೆಂಬರ್ 6ರ ಸಂಜೆದಿಂದ ನವೆಂಬರ್ 7ರ ಬೆಳಗಿನ ಅವಧಿಯಲ್ಲಿ ದೇವಸ್ಥಾನದಲ್ಲಿದ್ದ ಸುಮಾರು ಅರ್ಧ ತೊಲೆಯ ಬಂಗಾರದ ಮಂಗಳಸೂತ್ರ ಹಾಗೂ ಒಂದು ತೊಲೆಯ ಬೆಳ್ಳಿಯ ಗುಂಡುಗಡಿಗೆಯನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ, ಅಥಣಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ ಮುನ್ನೋಳಿ ಹಾಗೂ ಹಾರೂಗೇರಿ ವೃತ್ತದ ಸಿಪಿಐ ರತನಕುಮಾರ ಜೀರಗ್ಯಾಳ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ವಿಜಯ ಭೀಮಪ್ಪ ಗುಡದಿನ್ನಿ, ಕಲ್ಮೀಶ ಅಲ್ಲಪ್ಪ ಮೂರಾಬಟ್ಟಿ, ಶಿವಾನಂದ ವಿಠಲ ಚಿಕ್ಕಟ್ಟಿ ಹಾಗೂ ಸಂಗಮೇಶ ಶಂಕರ ಐನಾಪೂರ ಎಂಬ ನಾಲ್ವರನ್ನು ಬಂಧಿಸಲಾಯಿತು.
ಆರೋಪಿತರಿಂದ 1 ತೊಲೆ 5 ಮಿಲಿ ಚಿನ್ನದ ಆಭರಣಗಳು, 7 ಕೆಜಿ 760 ಗ್ರಾಂ ಬೆಳ್ಳಿಯ ಆಭರಣಗಳು, 29 ಕೆಜಿ 500 ಗ್ರಾಂ ಕಂಚಿನ ವಸ್ತುಗಳು, ಮಹೀಂದ್ರಾ ಪಿಕಪ್ ವಾಹನ (ಕೆಎ-48/ಎ-1556) ಹಾಗೂ ₹6 ಲಕ್ಷ ನಗದು ಸೇರಿದಂತೆ ಒಟ್ಟು ₹25,89,295 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿತರು ಹಾರೂಗೇರಿ ಮಾತ್ರವಲ್ಲದೆ ಅಥಣಿ, ಕಾಗವಾಡ ಹಾಗೂ ಬಾಗಲಕೋಟೆ ಜಿಲ್ಲೆಯ ಲೋಕಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ದೇವಾಲಯ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಪಿಎಸ್ಐ ಮಾಳಪ್ಪ ಪೂಜಾರಿ, ಪ್ರೊಬೆಷನರಿ ಪಿಎಸ್ಐ ಕಿಟ್ಟಪ್ಪ ಅಳಗುಂಡಿ ಹಾಗೂ ಹಾರೂಗೇರಿ, ಕುಡಚಿ ಠಾಣೆ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ನಡೆಸಿದ್ದು, ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.




