ಸುಮಾರು 50 ದಿನಗಳ ಕಾಲ ನಿಗೂಢವಾಗಿದ್ದ ಅನಾಮಧೇಯ ಮಹಿಳೆಯ ಕೊಲೆ ಪ್ರಕರಣವನ್ನು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪೊಲೀಸರು ಭೇದಿಸಿದ್ದು, ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣಕಾಸಿನ ವ್ಯವಹಾರವೇ ಈ ಕೊಲೆಗೆ ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೇ 29ರಂದು ಹುಕ್ಕೇರಿ ತಾಲೂಕಿನ ಸೊಲ್ಲಾಪೂರ ಗ್ರಾಮದ ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಬದಿಯ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಸುಮಾರು 50-55 ವರ್ಷದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆ ನಡೆಯುತ್ತಿದ್ದ ವೇಳೆ ಜೂನ್ 1ರಂದು ಇನ್ಸ್ಟಾಗ್ರಾಂನಲ್ಲಿ ಪೊಲೀಸರು ಪ್ರಕಟಿಸಿದ್ದ ಮೃತಳ ವಿಡಿಯೊವನ್ನು ನೋಡಿ ಸಾಂಗಲಿ ಜಿಲ್ಲೆಯ ಶಬಾನಾ ಬಾದಶಾಹ ಮುಲ್ಲಾ ಅವರು ಠಾಣೆಗೆ ಆಗಮಿಸಿ, ಮೃತಳು ತಮ್ಮ ತಾಯಿ ಬೇಬಿ ಬಾದಶಾಹ ಶೇಖ್ (59), ಮೂಲತಃ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಟೆಂಬಳಾಯಿವಾಡಿ ನಿವಾಸಿ ಎಂದು ಗುರುತಿಸಿದರು. ಇದರಿಂದ ಪ್ರಕರಣಕ್ಕೆ ಮಹತ್ವದ ತಿರುವು ದೊರೆಯಿತು.
ನಂತರ ಜುಲೈ 15ರಂದು ಶಬಾನಾ ಮುಲ್ಲಾ ಅವರು ನೀಡಿದ ದೂರಿನ ಮೇರೆಗೆ, ತಾಯಿಯೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದ ಹಾಜಿಮಸ್ತಾನ ಮೈನುದ್ದೀನ್ ಭಾಗವಾನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಐಪಿಎಸ್, ಹೆಚ್ಚುವರಿ ಎಸ್ಪಿ ಆರ್.ಬಿ. ಬಸರಗಿ ಹಾಗೂ ಗೋಕಾಕ ಡಿವೈಎಸ್ಪಿ ರವಿ ಡಿ. ನಾಯ್ಕ ಅವರ ಮಾರ್ಗದರ್ಶನದಲ್ಲಿ, ಸಂಕೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಜಿ.ಬಿ. ಕೊಂಗನೊಳ್ಳಿ ನೇತೃತ್ವದ ವಿಶೇಷ ತಂಡ ಕೊಲ್ಲಾಪುರಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಆರೋಪಿಯು ಮೃತಳಿಂದ ₹1.50 ಲಕ್ಷ ಸಾಲ ಪಡೆದಿದ್ದಾಗಿ, ಹಣವನ್ನು ಮರಳಿ ನೀಡುವಂತೆ ಆಕೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಕಾರಣ ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೇ 25ರಂದು ಲೋಕಾಪುರಕ್ಕೆ ಹಣ ತರಬೇಕೆಂದು ನೆಪವೊಡ್ಡಿ ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ, ನೀರಿನ ಬಾಟಲಿಯಲ್ಲಿ ವಿಷ ಬೆರೆಸಿ ಕುಡಿಸಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ರೊಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಪೊಲೀಸ್ ಇನ್ಸ್ಪೆಕ್ಟರ್ ಜಿ.ಬಿ. ಕೊಂಗನೊಳ್ಳಿ, ಪಿಎಸ್ಐ ವಿಠಲ ಈ. ನಾಯಿಕ, ಎಎಸ್ಐ ಎಲ್.ಎಸ್. ಖೋತ, ಸಿ.ಜೆ. ಸಾರಾಪೂರೆ, ಸಿಬ್ಬಂದಿ ಹಾಗೂ ಟೆಕ್ನಿಕಲ್ ಸೆಲ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.




