ತುಮಕೂರು ಜಿಲ್ಲಾ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋವೀಡ್ ಗಾಂಜಾ (Hydroweed) ಸೇರಿದಂತೆ ಮಾದಕ ವಸ್ತುಗಳ ಮಾರಾಟ ಜಾಲವನ್ನು ಭೇದಿಸಿ, ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದು, ಅವರಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯ ಪುತ್ರನಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಭಾಗವಾಗಿ, ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಶೇಷಾದ್ರಿಪುರಂ ಕಾಲೇಜು ಸಮೀಪದ ರಸ್ತೆಯಲ್ಲಿ ಕಾರಿನಲ್ಲಿ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸ್ ಕಂಟ್ರೋಲ್ ರೂಂಗೆ ಲಭ್ಯವಾಗಿತ್ತು. ಮಾಹಿತಿ ಆಧರಿಸಿ ತಿಲಕ್ ಪಾರ್ಕ್ ಪೊಲೀಸರು ದಾಳಿ ನಡೆಸಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ. ವೆಂಕಟ್ ತಿಳಿಸಿದ್ದಾರೆ.
ಬಂಧಿತರನ್ನು ಕುವೆಂಪು ನಗರದ ಹಾಲು ವ್ಯಾಪಾರಿ ಸತೀಶ್ ಸಿ. (37), ಪ್ಯಾಕಿಂಗ್ ಮೆಟೀರಿಯಲ್ ಉದ್ಯೋಗಿ ಪ್ರಮೋದ್ ಕುಮಾರ್ (28), ಡಿಎಆರ್ ಪೊಲೀಸ್ ಸಿಬ್ಬಂದಿಯ ಪುತ್ರ ಹಾಗೂ ವಿದ್ಯಾರ್ಥಿ ದಿಶಾಂತ್ ಆರ್. (21), ಶೋರೂಮ್ ಉದ್ಯೋಗಿ ದರ್ಶನ್ (28), ಡಿಪ್ಲೊಮಾ ಸಿವಿಲ್ ವಿದ್ಯಾರ್ಥಿ ಅಮೋಘ ನಾಗಭೂಷಣ್ (31) ಹಾಗೂ ಬೆಂಗಳೂರಿನ ಮಾರತ್ತಹಳ್ಳಿಯ ಮಂಜುನಾಥ್ (35) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಬೆಂಗಳೂರಿನ ಮಂಜುನಾಥ್ ಹೈಡ್ರೋವೀಡ್ ಹಾಗೂ ಇತರೆ ಮಾದಕ ವಸ್ತುಗಳನ್ನು ತುಮಕೂರಿಗೆ ತಂದು, ಉಳಿದ ಆರೋಪಿಗಳ ಮೂಲಕ ಶಾಲೆ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಮಾರಾಟ ಮಾಡಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆತ ಈ ಮಾದಕ ವಸ್ತುಗಳನ್ನು ಯಾರಿಂದ ಖರೀದಿಸುತ್ತಿದ್ದ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಂಧಿತರಿಂದ ಸುಮಾರು 1.655 ಕೆಜಿ ಗಾಂಜಾ ಸೊಪ್ಪು (ಅಂದಾಜು ಮೌಲ್ಯ ₹2 ಲಕ್ಷ), 23 ಗ್ರಾಂ ಹೈಡ್ರೋವೀಡ್ (ಅಂದಾಜು ಮೌಲ್ಯ ₹2.30 ಲಕ್ಷ) ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ₹40 ಲಕ್ಷ ಮೌಲ್ಯದ ಫಾರ್ಚೂನರ್ ಕಾರು ಸೇರಿದಂತೆ ಒಟ್ಟು ₹44.30 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್ ವಿರುದ್ಧ ಸಾರ್ವಜನಿಕರ ಸಹಕಾರ ಪಡೆಯುವ ಉದ್ದೇಶದಿಂದ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಅದನ್ನು ಸ್ಕ್ಯಾನ್ ಮಾಡಿ ಸಾರ್ವಜನಿಕರು ಗೌಪ್ಯವಾಗಿ ಮಾಹಿತಿ ನೀಡುವ ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿಯಾಗಿ ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯ ಆಧಾರದಲ್ಲೇ ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಸ್ಪಿ ಅಶೋಕ್ ಕೆ. ವೆಂಕಟ್ ತಿಳಿಸಿದರು.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತುಮಕೂರು ನಗರ ಡಿವೈಎಸ್ಪಿ ಚಂದ್ರಶೇಖರ್, ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸಿಪಿಐ ನಧಾಫ್ ಹಾಗೂ ತನಿಖಾ ತಂಡದ ಕಾರ್ಯವನ್ನು ಎಸ್ಪಿ ಪ್ರಶಂಸಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು.




