ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಶಾಸಕರ ವಾಸ್ತವ್ಯಕ್ಕಾಗಿ ಬೆಳಗಾವಿಯಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಸುವರ್ಣಸೌಧದ ಸಮೀಪದ ಸರ್ಕಾರಿ ಜಾಗದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಹೋಟೆಲ್ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ.
ಪ್ರತಿವರ್ಷ ಬೆಳಗಾವಿ ಅಧಿವೇಶನದ ವೇಳೆ ಶಾಸಕರ ವಾಸ್ತವ್ಯಕ್ಕಾಗಿ ಕೋಟಿಗಟ್ಟಲೆ ಹಣ ವೆಚ್ಚವಾಗುತ್ತದೆ. ಆ ವೆಚ್ಚವನ್ನು ತಗ್ಗಿಸಲು ಪಂಚತಾರಾ ಹೋಟೆಲ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ.
2018ರಿಂದ ಇಲ್ಲಿಯವರೆಗೆ ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನಕ್ಕೆ ನೂರಾರು ಕೋಟಿ ರೂ. ವೆಚ್ಚವಾಗಿದೆ. ಕಳೆದ ವರ್ಷ ಸುಮಾರು 37 ಕೋಟಿ ರೂ. ವೆಚ್ಚವಾಗಿತ್ತು. ಈ ವರ್ಷ 40 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದಿನ ಕಳೆದಂತೆ ಬೆಲೆ ಏರಿಕೆಯಿಂದಾಗಿ ಅಧಿವೇಶನದ ವೆಚ್ಚವೂ ಹೆಚ್ಚುತ್ತಿದೆ. ಹೀಗಾಗಿ, ಬೆಳಗಾವಿಯಲ್ಲಿ ಹೋಟೆಲ್ ನಿರ್ಮಿಸುವುದರಿಂದ ಶಾಸಕರ ವಾಸ್ತವ್ಯದ ವೆಚ್ಚವನ್ನು ತಗ್ಗಿಸಬಹುದು ಎಂದು ಸರ್ಕಾರ ಭಾವಿಸಿದೆ.
ಅಧಿವೇಶನದ ವೇಳೆ ಶಾಸಕರು, ಅದಿಕಾರಿಗಳು, ಸಿಬ್ಬದಿಗಳಿಗಾಗಿ ಸುಮಾರು 2,000 ಹೋಟೆಲ್ ಕೊಠಡಿಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ. ಅದಕ್ಕಾಗಿ, ಬೆಳಗಾವಿಯ ಎಲ್ಲ ಹೊಟೇಲ್ ಹಾಗೂ ರೆಸಾರ್ಟ್ಗಳನ್ನು ಶಾಸಕರು ಮತ್ತು ಅಧಿಕಾರಿಗಳ ವಾಸ್ತವ್ಯಕ್ಕಾಗಿ ಜಿಲ್ಲಾಡಳಿತ ವಶಕ್ಕೆ ಪಡೆಯುತ್ತದೆ. ಆ ಎಲ್ಲ ವಾಸ್ತವ್ಯಗಳಿಗೂ ಬಾಡಿಗೆ ಭರಿಸುತ್ತದೆ.
2022ರಲ್ಲಿ ಬೆಳಗಾವಿಯ ಸುಮಾರು 80 ಹೊಟೇಲ್ಗಳನ್ನು ವಾಸ್ತವ್ಯಕ್ಕಾಗಿ ಬಳಸಲಾಗಿತ್ತು. ಅವುಗಳಲ್ಲಿ 67 ಐಷಾರಾಮಿ ಹೊಟೇಲ್ಗಳಿದ್ದವು. ಸರ್ಕಾರವು ಅಧಿವೇಶನದ ವೇಳೆ ಒಬ್ಬ ಶಾಸಕನಿಗೆ ಸರಾಸರಿ ಸುಮಾರು 10-12 ಲಕ್ಷ ರೂ. ಖರ್ಚು ಮಾಡುತ್ತದೆ ಎಂದು ತಿಳಿದುಬಂದಿದೆ.
“ಸುವರ್ಣಸೌಧದ ಬಳಿಯ 10 ಎಕರೆ ಸರ್ಕಾರಿ ಭೂಮಿಯಲ್ಲಿ ಹೋಟೆಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಪಿಪಿಪಿ (ಖಾಸಗಿ-ಸರ್ಕಾರಿ ಸಹಭಾಗಿತ್ವ) ಮಾದರಿಯಲ್ಲ ಹೋಟೆಲ್ ನಿರ್ಮಾಣವಾಗಲಿದೆ. ಭೂಮಿ ಸರ್ಕಾರದ್ದಾಗಿದ್ದು, ಖಾಸಗಿ ಕಂಪನಿ ಹೋಟೆಲ್ ನಿರ್ಮಾಣ ಮಾಡಲಿದೆ. 30 ವರ್ಷಗಳ ಕಾಲ ಖಾಸಗಿಯವರಿಗೆ ಹೋಟೆಲ್‌ಅನ್ನು ಗುತ್ತಿಗೆ ನೀಡಲಾಗುತ್ತದೆ. ಅಧಿವೇಶನ ವೇಳೆ ಹೊಟೇಲ್‌ಅನ್ನು ಶಾಸಕರು, ಅಧಿಕಾರಿಗಳು, ಗಣ್ಯರ ವಾಸ್ತವ್ಯಕ್ಕಾಗಿ ಸೀಮಿತಗೊಳಿಸಲಾಗುತ್ತದೆ. ಉಳಿದ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಿರುತ್ತದೆ” ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.