ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬದಲಾವಣೆಗಳ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಮಂತ್ರಿಗಿರಿ ಲೆಕ್ಕಾಚಾರ ಭಾರೀ ಜೋರಾಗಿದ್ದು, ಬೆಳಗಾವಿ ಜಿಲ್ಲೆಗೆ ಈ ಸಲ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎನ್ನವ ಕೂಗು ಕೇಳಿಬರುತ್ತಿದೆ. ಅಶೋಕ ಪಟ್ಟಣ, ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ಹಲವು ನಾಯಕರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಅಭಿಪ್ರಾಯ ಜನರಲ್ಲೂ ವ್ಯಕ್ತವಾಗುತ್ತಿದೆ. ಇದೀಗ ಕಾಂಗ್ರೆಸ್ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳತ್ತದೆ ಎನ್ನುವುದರ ಮೇಲೆ ಜಿಲ್ಲೆಯ ರಾಜಕೀಯ ಭವಿಷ್ಯ ನಿಂತಿದೆ.
ರಾಜ್ಯ ರಾಜಕಾರಣದಲ್ಲಿ ದೊಡ್ಡ ದೊಡ್ಡ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಜಾಗಕ್ಕೆ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದು, ಇದರ ಬೆನ್ನಲ್ಲೇ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಮಂತ್ರಿಗಿರಿ ಸಿಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈ ನಡುವೆ ಬೆಳಗಾವಿ ಜಿಲ್ಲೆಯಿಂದ ಹಲವಾರು ಕಾಂಗ್ರೆಸ್ ಶಾಸಕರು ಮಂತ್ರಿಗಿರಿಯ ಆಕಾಂಕ್ಷಿಗಳಾಗಿದ್ದು, ಮುಖ್ಯವಾಗಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಸಿದ್ದರಾಮಯ್ಯ ಅವರ ಆಪ್ತ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ರಾಜಕೀಯ ಕುಟುಂಬದಿಂದ ಬಂದಿರುವ ಅವರು ಇತ್ತೀಚಿಗಷ್ಟೇ ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದಾರೆ. ಜತೆಗೆ ರಾಮದುರ್ಗ ಭಾಗಕ್ಕೆ ಹಲವಾರು ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕೂ ಈ ಬಾರಿ ಅವಕಾಶ ಸಿಗಬಹುದು ಎನ್ನುವ ಮಾತು ಜೋರಾಗಿದೆ. ರೈತರಿಗಾಗಿ ನೀರಾವರಿ ಯೋಜನೆ, ಗ್ರಾಮೀಣ ರಸ್ತೆ, ಶಿಕ್ಷಣ ವಿಷಯದಲ್ಲಿ ಅಶೋಕ ಪಟ್ಟಣ ಅವರು ಕೆಲಸ ಮಾಡಿದ್ದಾರೆ ಎನ್ನುವ ಅಭಿಪ್ರಾಯವೂ ಜನರಲ್ಲಿ ಇದೆ.
ಇನ್ನೊಂದೆಡೆ ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕ ಎನಿಸಿಕೊಂಡಿರುವ ಅವರು ಕುಡಚಿ, ಕಾಗವಾಡ ಹಾಗೂ ಅಥಣಿ ಭಾಗದ ಚುನಾವಣಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸತೀಶ ಜಾರಕಿಹೊಳಿ ಅವರಿಂದ ಇವರಿಗೆ ಅಡ್ಡಿಯಾಗಬಹುದು ಎನ್ನುವ ಚರ್ಚೆಗಳಿದ್ದರೂ, ಸವದಿ ಅವರ ರಾಜಕೀಯ ಪ್ರಭಾವದಿಂದ ಮಂತ್ರಿಗಿರಿ ಸಿಗುವ ಸಾಧ್ಯತೆ ಇದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿವೆ.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ಕೂಡ ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದಾರೆ. ಮೂರು ಸಲ ಶಾಸಕರಾಗಿರುವ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಈ ಸಲ ಅವಕಾಶ ಕೊಡಬೇಕೆಂದು ಅವರ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ. ಅದೇ ರೀತಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇರ್ ಅವರು ಅಲ್ಪಸಂಖ್ಯಾತ ಕೋಟಾದಲ್ಲಿ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸಚಿವ ಸ್ಥಾನ ಉಳಿಯುತ್ತದೆಯೇ ಎನ್ನುವ ಪ್ರಶ್ನೆಯೂ ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ ಅವರು ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಸ್ಥಾನ ಉಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿ ಮಹಿಳಾ ನಾಯಕಿಯಾಗಿ ಬೆಳೆದಿರುವ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮತ್ತೆ ಪ್ರಮುಖ ಖಾತೆ ಸಿಗಬಹುದು ಎನ್ನುವ ಚರ್ಚೆಯೂ ಇದೆ.

ಇದರ ಜತೆಗೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಗಳ ಕುರಿತೂ ಮಾತುಗಳು ಜೋರಾಗಿವೆ. ಕಾಂಗ್ರೆಸ್ ಪಕ್ಷದ “ಒಬ್ಬರಿಗೆ ಒಂದೇ ಹುದ್ದೆ” ನಿಯಮದ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಚಿವ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಆದರೂ ಅವರು ಪ್ರಭಾವಿ ನಾಯಕರು ಹಾಗೂ ಸಿದ್ದರಾಮಯ್ಯ ಅವರ ಆಪ್ತರಾಗಿರುವುದರಿಂದ ಎರಡೂ ಹುದ್ದೆ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂತಲೂ ಹೇಳಲಾಗುತ್ತಿದೆ.
ಬೆಳಗಾವಿ ಜಿಲ್ಲೆಗೆ ಈ ಸಲ ಹೆಚ್ಚು ಪ್ರಾತಿನಿಧ್ಯ ಕೊಡಬೇಕು ಎನ್ನುವ ಒತ್ತಾಯ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲೂ ಜೋರಾಗಿದೆ. ವಿಶೇಷವಾಗಿ ಬೆಳಗಾವಿ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪಾತ್ರ ವಹಿಸುತ್ತಿರುವುದರಿಂದ ಈ ಭಾಗದ ನಾಲ್ಕರಿಂದ ಐದು ಶಾಸಕರಿಗೆ ಮಂತ್ರಿಗಿರಿ ಸಿಗಬೇಕು ಎನ್ನುವ ಮಾತು ಕೇಳಿಬರುತ್ತಿವೆ.
ಈ ಕುರಿತು ಈ ದಿನ.ಕಾಮ್ ಜತೆ ರೈತ ಶಿವಪ್ಪ ಮಾತನಾಡಿ, “ರಾಮದುರ್ಗ ಕ್ಷೇತ್ರಕ್ಕೆ ತುಂಬಾ ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ ರೀ. ಅಶೋಕ ಪಟ್ಟಣ ಅವರು ಕ್ಷೇತ್ರದ ಜನರ ಸಮಸ್ಯೆಗಾಗಿ ಸದಾ ಹೋರಾಟ ಮಾಡ್ತಾರ. ತಾಲೂಕಿಗೆ ಎರಡು ದೊಡ್ಡ ನೀರಾವರಿ ಯೋಜನೆ ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಾರ. ಬಡವರು, ರೈತರ ಪರ ಧ್ವನಿ ಎತ್ತಾಕತ್ತಾರ. ಈ ಸಲ ನಮ್ಮ ರಾಮದುರ್ಗ ಭಾಗಕ್ಕೆ ನ್ಯಾಯ ಸಿಗಬೇಕಂದ್ರ ಅಶೋಕ ಪಟ್ಟಣ ಅವರಿಗೆ ಮಂತ್ರಿಗಿರಿ ಕೊಡಬೇಕು” ಎಂದು ಹೇಳಿದರು.
ಈ ಕುರಿತು ಅಥಣಿಯ ವ್ಯಾಪಾರಿ ಸಿದ್ದಾರ್ಥ ಅಂಗಡಿ ಈ ದಿನ.ಕಾಮ್ ಜತೆ ಮಾತನಾಡಿ, “ಲಕ್ಷ್ಮಣ ಸವದಿ ಅವರು ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ರೀ. ಬಿಜೆಪಿಯಲ್ಲಿ ಇದ್ದಾಗ ಉಪಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರ. ಇಷ್ಟು ದೊಡ್ಡ ನಾಯಕ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ರಿಂದ ಪಕ್ಷಕ್ಕೂ ತುಂಬಾ ಅನುಕೂಲ ಆಗಿದೆ. ಅಥಣಿ ಭಾಗದ ಅಭಿವೃದ್ಧಿಗೆ ಅವರು ಸಾಕಷ್ಟು ಕೆಲಸ ಮಾಡ್ತಾರ. ಈ ಸಲ ಲಕ್ಷ್ಮಣ ಸವದಿ ಅವರಿಗೆ ಮಂತ್ರಿಗಿರಿ ಕೊಟ್ಟರೆ ಉತ್ತರ ಕರ್ನಾಟಕಕ್ಕೂ ಶಕ್ತಿ ಬರುತ್ತೆ” ಎಂದರು.
ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬದಲಾವಣೆಗಳ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಮಂತ್ರಿಗಿರಿ ಲೆಕ್ಕಾಚಾರ ಭಾರೀ ಜೋರಾಗಿದ್ದು, ಬೆಳಗಾವಿ ಜಿಲ್ಲೆಗೆ ಈ ಸಲ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎನ್ನವ ಕೂಗು ಕೇಳಿಬರುತ್ತಿದೆ. ಅಶೋಕ ಪಟ್ಟಣ, ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ಹಲವು ನಾಯಕರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಅಭಿಪ್ರಾಯ ಜನರಲ್ಲೂ ವ್ಯಕ್ತವಾಗುತ್ತಿದೆ. ಇದೀಗ ಕಾಂಗ್ರೆಸ್ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳತ್ತದೆ ಎನ್ನುವುದರ ಮೇಲೆ ಜಿಲ್ಲೆಯ ರಾಜಕೀಯ ಭವಿಷ್ಯ ನಿಂತಿದೆ.




