ಬಶೀರ್ ಬದ್ರ್ ಜನಸಾಮಾನ್ಯರ ಕವಿ, ಮಾನವೀಯತೆಯ ಕವಿ, ಹೃದಯದ ಭಾಷೆಗೆ ಅಕ್ಷರ ಬರೆದ ಕವಿ, ರೂಪಕ ಪ್ರತಿಮೆಗಳ ಗಡಿ ದಾಟಿಸಿ ಉರ್ದುಕಾವ್ಯವನ್ನು ಸಾಮಾನ್ಯ ಜನರ ಹೃದಯ ಮಿಡಿತಕ್ಕೆ ತಂದು ನಿಲ್ಲಿಸಿದವರು. ಪ್ರೀತಿ ಪ್ರೇಮಗಳಿಂದ ಹಿಡಿದು ಆಳವಾದ ತತ್ವ ಚಿಂತನೆಯವರೆಗೆ ಅಪರೂಪದ ಸೌಂದರ್ಯ ಮತ್ತು ಕೋಮಲ ಅಭಿವ್ಯಕ್ತಿ ಅವರದಾಗಿತ್ತು.
ಉರ್ದು ಸಾಹಿತ್ಯದ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬರಾಗಿದ್ದ ಬಶೀರ್ ಬದ್ರ್ ನಿನ್ನೆ (28 ಮೇ) ತಮ್ಮ 92ನೇ ವಯಸ್ಸಿನಲ್ಲಿ ದೀರ್ಘ ಕಾಲದ ಅನಾರೋಗ್ಯದ ಬಳಿಕ ಇಹಲೋಕ ತ್ಯಜಿಸಿದರು. ಅವರ ಅಗಲಿಕೆಯಿಂದ ಆಧುನಿಕ ಉರ್ದು ಗಝಲ್ ಸಾಹಿತ್ಯದ ಒಂದು ಅದ್ಭುತ ಅಧ್ಯಾಯವೇ ಅಂತ್ಯಗೊಂಡಿದೆ. ಗಂಗಾ- ಜಮುನಿ ತೆಹಜೀಬ್ ನ (ಸಂಸ್ಕೃತಿ) ಕೊನೆಯ ಕೊಂಡಿಗಳು ಒಂದೊಂದಾಗಿ ಕಳಚುತ್ತಿವೆ. ಬಶೀರ್ ಬದ್ರ್ ಜನಸಾಮಾನ್ಯರ ಕವಿ, ಮಾನವೀಯತೆಯ ಕವಿ, ಹೃದಯದ ಭಾಷೆಗೆ ಅಕ್ಷರ ಬರೆದ ಕವಿ, ರೂಪಕ ಪ್ರತಿಮೆಗಳ ಗಡಿ ದಾಟಿಸಿ ಉರ್ದು ಕಾವ್ಯವನ್ನು ಸಾಮಾನ್ಯ ಜನರ ಹೃದಯ ಮಿಡಿತಕ್ಕೆ ತಂದು ನಿಲ್ಲಿಸಿದವರು. ಪ್ರೀತಿ ಪ್ರೇಮಗಳಿಂದ ಹಿಡಿದು ಆಳವಾದ ತತ್ವ ಚಿಂತನೆಯವರೆಗೆ ಅಪರೂಪದ ಸೌಂದರ್ಯ ಮತ್ತು ಕೋಮಲ ಅಭಿವ್ಯಕ್ತಿ ಅವರದಾಗಿತ್ತು.
ಬಶೀರ್ ಬದ್ರ್ ಬದುಕಿನ ಕೊನೆಯ ದಿನಗಳು ಖುದ್ದು ಅವರಿಗೆ ಮತ್ತು ಸಾಹಿತ್ಯಪ್ರೇಮಿಗಳಿಗೆ ಅತ್ಯಂತ ನೋವಿನವಾಗಿದ್ದವು. ಕೆಲವು ವರ್ಷಗಳಿಂದ ಅವರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ನಿಧಾನವಾಗಿ ನೆನಪುಗಳು ಮಂಕಾಗುತ್ತ ಹೂತು ಹೋಗುತ್ತಿದ್ದವು; ಮುಶಾಯಿರಾಗಳು ನಿಂತುಹೋದವು, ನಾಲ್ಕುಗೋಡೆಗಳ ನಡುವೆ ಬಂಧಿಯಾದರು. ಲೋಕ ಹಿಂದೆ ಸರಿಯಿತು. ಕಡೆ ಕಡೆಗೆ ಅವರಿಗೆ ತಮ್ಮದೇ ‘ಶೇರ್’ಗಳನ್ನೂ, ಪರಿಚಿತ ಮುಖಗಳನ್ನೂ ಗುರುತಿಸದೆ ಹೋದರು.
ಒಬ್ಬ ಕವಿ ತನ್ನ ನೆನಪುಗಳನ್ನು ಕಳೆದುಕೊಳ್ಳುವುದು ಎಂತಹ ದುರಂತದ ಸಂಗತಿ ಎಂಬುದನ್ನು ಸಾಹಿತ್ಯಲೋಕ ತೀವ್ರವಾಗಿ ಅನುಭವಿಸಿತು. ಬಶೀರ್ ಬದ್ರ್ ಅವರ ಸಂಪೂರ್ಣ ಕಾವ್ಯವೇ ನೆನಪು, ವಿರಹ, ಸದಾ ಕಾಲಕ್ಕೆ ಉಳಿದುಕೊಳ್ಳುವ ಪ್ರೀತಿ ಮತ್ತು ಮಾನವೀಯ ಭಾವನೆಗಳನ್ನು ರೇಶಿಮೆ ದಾರದಲ್ಲಿ ಪೋಣಿಸಿದ ಅಮೂಲ್ಯ ರತ್ನಗಳಾಗಿದ್ದವು. ಆ ಲೋಕವನ್ನು ಆವರಿಸಿದ “ಯಾದ್”, (ನೆನಪು) “ಖ್ವಾಬ್ (ಸ್ವಪ್ನ), ತನಹಾಯಿ (ಒಂಟಿತನ), ರಿಶ್ತೇ (ಸಂಬಂಧಗಳು) ಹೀಗೆ ನೆನಪುಗಳ ಕತ್ತಲಲ್ಲಿ ಕಳೆದುಹೋಗುವುದು ದುರಂತವಲ್ಲದೆ ಮತ್ತೇನು?
ಬಶೀರ್ ಬದ್ರ್ 15 ಫೆಬ್ರವರಿ 1935ರಂದು ಉತ್ತರಪ್ರದೇಶದ ಕಾನಪುರ್ ದಲ್ಲಿ ಜನಿಸಿದರು. ಅವರ ಮೂಲ ಹೆಸರು “ಸಯ್ಯಿದ್ ಮೊಹಮ್ಮದ್ ಬಶೀರ್”. ಅವರ ತಂದೆ ಸಯ್ಯಿದ್ ಮೊಹಮ್ಮದ್ ನಜೀರ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲೇ ಕುಟುಂಬದ ಪರಿಸ್ಥಿತಿಗಳು ಕಠಿಣವಾಗಿದ್ದವು.

ತಂದೆಯ ವರ್ಗಾವಣೆಯ ಕಾರಣ ಕುಟುಂಬ ಇಟಾವಾ ಭಾಗಕ್ಕೆ ಸ್ಥಳಾಂತರವಾಯಿತು. ಅಲ್ಲಿ ಅವರು ಶಿಕ್ಷಣ ಮುಂದುವರಿಸಿದರು. ಆದರೆ ಬಾಲ್ಯದಲ್ಲೇ ತಂದೆಯ ಅಗಲಿಕೆ ಅವರ ಬದುಕಿಗೆ ದೊಡ್ಡ ಹೊಡೆತವಾಯಿತು. ಕುಟುಂಬದ ಜವಾಬ್ದಾರಿಗಳು ಅವರ ಹೆಗಲ ಮೇಲೆ ಬಿದ್ದವು. ಕೆಲವು ವರದಿಗಳ ಪ್ರಕಾರ ಅವರು ತಿಂಗಳಿಗೆ 85 ರೂಪಾಯಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೂಡ ಮಾಡಿದ್ದರು.
ಸಾಹಿತ್ಯದ ಒಲವು
ಬಾಲ್ಯದಿಂದಲೇ ಅವರಿಗೆ ಶಾಯರಿಯ ಮೇಲೆ ಅಪಾರ ಆಸಕ್ತಿ. ಅವರು ಉರ್ದೂ ಮತ್ತು ಅರಬಿ, ಪಾರ್ಸಿ ಭಾಷೆಗಳ ಅಧ್ಯಯನ ಮಾಡಿದರು.
ಆ ಕಾಲದ ಉತ್ತರ ಭಾರತದ ಗಲ್ಲಿಗಳ ಜೀವನ ಚಹಾ ಅಂಗಡಿಗಳು, ಮುಶಾಯಿರಾಗಳು, ಮಸೀದಿಗಳ ಅಜಾನ್, ಹಳೆಯ ಬೀದಿಗಳ ಮೌನ, ಮಳೆಗಾಲದ ನೆನಪುಗಳು — ಇವೆಲ್ಲವೂ ನಂತರ ಅವರ ಶಾಯರಿಯಲ್ಲಿ ದೃಶ್ಯಕಾವ್ಯಗಳಾಗಿ ಕಾಣಿಸಿಕೊಳ್ಳುತ್ತವೆ. ಅವರ ಕವಿತೆಗಳಲ್ಲಿ “ಗಲಿ”, “ಮನೆ”, “ಯಾದ್”, “ರಾತ್”, “ಬಾರಿಶ್” ಎಂಬ ಪದಗಳು ಮತ್ತೆ ಮತ್ತೆ ಬರುತ್ತವೆ; ಅವು ಅವರನ್ನು ಪ್ರಭಾವಿಸಿದ ಬಾಲ್ಯ ಸಂವೇದನೆಗಳ ಛಾಪು ಎನ್ನಲಾಗುತ್ತದೆ.
ಕೇವಲ ಇಪ್ಪತ್ತರ ವಯಸ್ಸಿನಲ್ಲೇ ಅವರ ಗಜಲ್ಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರಸಿದ್ಧಿಯಾಗತೊಡಗಿದವು. ಅವರ ಶಾಯರಿಯ ವೈಶಿಷ್ಟ್ಯ ಎಂದರೆ ಅತಿ ಸರಳ ಪದಗಳಲ್ಲಿ ಆಳ ಮತ್ತು ಸಾಂದ್ರ ಭಾವನೆಗಳನ್ನು ಹೇಳುವುದು. ಪ್ರೀತಿಯನ್ನು ಅವರು ಕೇವಲ ರೋಮ್ಯಾಂಟಿಕ್ ಭಾವನೆಯಾಗಿ ಅಲ್ಲ, ಮನುಷ್ಯನ ಅಂತರಂಗದ ಅನುಭವವಾಗಿ ಬರೆದರು.
ಶಿಕ್ಷಣ ಮತ್ತು ವೃತ್ತಿ ಜೀವನ
ಬಶೀರ್ ಬದ್ರ್ ನಂತರ ಪಿಎಚ್ಡಿ ಪದವಿ ಪಡೆದರು. ಅಲೀಗಡ್ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿಯೂ ಕೆಲಸ ಮಾಡಿದರು. ಕೆಲಕಾಲ ಮೀರತ್ ವಿಶ್ವವಿದ್ಯಾಲಯದ ಹಿಂದಿ ವಿಭಾಗದಲ್ಲಿ ಆಧ್ಯಾಪಕರಾಗಿದ್ದರು. ಮುಶಾಯಿರಾಗಳಲ್ಲಿ ಅವರ ಉಪಸ್ಥಿತಿ ವಿಶೇಷವಾಗಿತ್ತು. ಭಾರತ ಮಾತ್ರವಲ್ಲ, ಅನೇಕ ದೇಶಗಳಲ್ಲಿ ಅವರ ಗಜಲ್ಗಳು ಜನಪ್ರಿಯವಾದವು. ನಂತರದ ದಿನಗಳಲ್ಲಿ ಭೋಪಾಲ್ ಅವರ ಸಾಹಿತ್ಯಿಕ ಜೀವನದ ಮುಖ್ಯ ಕೇಂದ್ರವಾಯಿತು.
ವೈಯಕ್ತಿಕ ಜೀವನ ಮತ್ತು ದುಃಖಗಳು
ಒಂದು ಕಾಲಕ್ಕೆ ಅವರ ಶಾಯರಿಯ ಅಭಿಮಾನಿ, ಪ್ರೇಮಿಯಾಗಿದ್ದ ಮೀರತ್ ಶಹರಿನಲ್ಲಿ ಕೋಮುವಾದ ಹೆಡೆ ಎತ್ತಿತ್ತು. 1987ರ ಮೀರತ್ತಿನಲ್ಲಿ ನಡೆದ ಕೋಮು ಗಲಭೆಗಳಲ್ಲಿ ಎರಡು ಕೋಣೆಗಳ ಅವರ ಮನೆ ಮತ್ತು ಪುಸ್ತಕ ಸಂಗ್ರಹ ಸುಟ್ಟುಹೋದ ಘಟನೆ ಅವರ ಮನಸಿನ ಮೇಲೆ ಆಳವಾದ ಗಾಯ ಮೂಡಿಸಿತು. ಮನೆ ತನ್ನದೆನ್ನುವ ಎಲ್ಲವನ್ನೂ ಕಳೆದುಕೊಂಡ ಅವರು ಗೆಳೆಯರ ಮನೆಯಲ್ಲಿ ವಾಸಿಸುತ್ತಾರೆ. ಮನೆ ಮಾತ್ರವಲ್ಲ ಅನೇಕ ಅಮೂಲ್ಯ ಕೈಬರಹದ ಪ್ರತಿಗಳು, ಪ್ರಕಟವಾಗದ ಗಝಲ್ಗಳು ಇದ್ದವು. ಕೊನೆಗೆ ಅವರು ಮೀರತ್ನ್ನು ತೊರೆಯಬೇಕಾಗುತ್ತದೆ. ಆ ನೋವಿನಿಂದಲೇ ಅವರು ಈ ಪ್ರಸಿದ್ಧ ಸಾಲುಗಳನ್ನು ಬರೆದರು:
“लोग टूट जाते हैं एक घर बनाने में,
तुम तरस नहीं खाते बस्तियाँ जलाने में।”
“ಒಂದು ಮನೆ ಕಟ್ಟಲು ಜನ ಜೀವ ತೇಯುತ್ತಾರೆ
ಕೇರಿಗಳನ್ನು ಸುಡುವಾಗ ನಿಮಗೆ ಕರುಣೆಯೂ ಹುಟ್ಟುವುದಿಲ್ಲ.”
ಅವರ ಮೊದಲ ಪತ್ನಿಯ ನಿಧನದಿಂದ ತೀವ್ರ ಮಾನಸಿಕ ಆಘಾತ ಎದುರಿಸಿ ಕಾಲಾನುಕ್ರಮದಲ್ಲಿ ಡಾ. ರಾಹತ್ ಸುಲ್ತಾನಾ ಅವರನ್ನು ವಿವಾಹವಾದರು.
ಡಿಮೆನ್ಷಿಯಾ ಮತ್ತು ಮೌನ
ಜೀವನದ ಕೊನೆಯ ವರ್ಷಗಳಲ್ಲಿ ಅವರು ಡಿಮೆನ್ಷಿಯಾ ರೋಗಕ್ಕೆ ತುತ್ತಾಗಿ ಆಳವಾದ ಮೌನಕಣಿವೆಗೆ ಜಾರಿದರು. ಆದರೆ ಸಾಹಿತ್ಯಪ್ರೇಮಿಗಳು ಅವರನ್ನು ಮರೆತಿಲ್ಲ. ಮುಂದೆಯೂ ಮರೆಯುವುದಿಲ್ಲ. ಅವರ ಶೇರ್ಗಳು ಎಂದೆಂದಿಗೂ ಜನಮನದಲ್ಲಿ,ಮಾತುಗಳಲ್ಲಿ ಬದುಕುತ್ತವೆ. ಅವರ ಕೆಲವು ಪ್ರಸಿದ್ಧ ಶೇರ್ಗಳು ನಿಮ್ಮ ಓದಿಗಾಗಿ ಮತ್ತು ಕವಿಯ ಮೇಲಿನ ಪ್ರೀತಿಗಾಗಿ ಇಲ್ಲಿವೆ.
“कुछ तो मजबूरियाँ रही होंगी,
यूँ कोई बेवफ़ा नहीं होता।”
“ ಏನೋ ಅನಿವಾರ್ಯತೆಗಳಿದ್ದಿರಬೇಕು,
ಹೀಗೆ ಯಾರೂ ಸುಮ್ಮನೆ ದ್ರೋಹ ಬಗೆಯುವುದಿಲ್ಲ.”
“न जी भर के देखा, न बात की,
बड़ी आरज़ू थी मुलाक़ात की।”
“ಮನದಣಿಯೆ ನೋಡಲಾಗಲಿಲ್ಲ, ಮಾತಾಡುವುದೂ ಆಗಲಿಲ್ಲ,
ಭೇಟಿಯಾಗಬೇಕೆಂಬ ಆಸೆ ಮಾತ್ರ ಅದಮ್ಯವಾಗಿತ್ತು.”
“सात संदूकों में भर कर दफ़्न कर दो नफ़रतें,
आज इंसां को मोहब्बत की ज़रूरत है।”
“ದ್ವೇಷವನ್ನು ಏಳು ಸಂದೂಕಗಳಲ್ಲಿ ತುಂಬಿ ಹೂತುಬಿಡಿ,
ಇಂದು ಮನುಷ್ಯನಿಗೆ ಬೇಕಿರುವುದು ಪ್ರೀತಿಯಷ್ಟೇ.”
“बग़दाद दिल्ली मास्को लंदन के दरमियाँ
बारूद भी बिछाएगी इक्कीसवीं सदी”
“ಬಗ್ದಾದ್ನಿಂದ ದೆಹಲಿ, ಮಾಸ್ಕೋದಿಂದ ಲಂಡನ್ವರೆಗೆ
ಸಿಡಿಮದ್ದನ್ನೂ ಹಾಸುತ್ತದೆ ಈ ಶತಮಾನ”
’ಇಪ್ಪತ್ತೊಂದನೇ ಶತಮಾನ’ ಹೆಸರಿನ ಕವಿತೆ ಓದಿದರೆ, ಭವಿಷ್ಯದ ಬಗೆಗಿನ ಅವರ ದೂರದೃಷ್ಟಿ ಅಚ್ಚರಿ ಹುಟ್ಟಿಸುತ್ತದೆ. ಈ ಕವಿತೆ ಅಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. ಈ ಸಾಲುಗಳಲ್ಲಿ ಜಾಗತಿಕ ಯುದ್ಧ, ಭಯೋತ್ಪಾದನೆ, ರಾಜಕೀಯ ದ್ವೇಷಗಳ ಭವಿಷ್ಯ ಕಾಣುತ್ತದೆ. ಇಂದು ಮಧ್ಯಪೂರ್ವ ಯುದ್ಧಗಳು, ಧಾರ್ಮಿಕ ಸಂಘರ್ಷಗಳು, ಅಣುಭೀತಿ ಇವೆಲ್ಲವನ್ನು ನೋಡಿದರೆ ಈ ಸಾಲುಗಳು ಭಯಾನಕವಾಗಿ ನಿಜವಾಗಿವೆ. ಧಾರ್ಮಿಕ ರಾಜಕೀಯ, ಡಾಲರ್ ಆಧಾರಿತ ಜಗತ್ತು, ಕಂಪ್ಯೂಟರ್ ಯುಗ ಇವೆಲ್ಲವನ್ನು ಅವರು ದಶಕಗಳ ಹಿಂದೆಯೇ ಊಹಿಸಿದ್ದರು. ಬಹುಶಃ ಇದು ಕವಿಯೊಬ್ಬನಿಗಿರಬೇಕಾದ ಸಾಮಾಜಿಕ ಬದ್ಧತೆ ಮತ್ತು ಸಂವೇದನಶೀಲತೆ, ಅಂತಃಶಕ್ತಿ.
“कम्पयूटरों से ग़ज़लें लिखेंगे ‘बशीर-बद्र’
‘ग़ालिब’ को भूल जाएगी इक्कीसवीं सदी।”
ಕಂಪ್ಯೂಟರಿನಿಂದ ಕವಿತೆ ಬರೆಯುತ್ತಾನೆ ಬಶೀರ್ ಬದ್ರ್
ಗಾಲಿಬನನ್ನು ಮರೆಯುತ್ತದೆ ಇಪ್ಪತ್ತೊಂದನೇ ಶತಮಾನ
ಈ ಸಾಲುಗಳು ಇಂದಿನ AI ಮತ್ತು ಡಿಜಿಟಲ್ ಯುಗದಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಕೇಳಿಸುತ್ತವೆ. ಬಶೀರ್ ಬದ್ರ್ ಕೇವಲ ಪ್ರೇಮದ ಶಾಯರ್ ಅಲ್ಲ. ಅವರು ಮಾನವ ಸಂಬಂಧಗಳ ಕವಿ, ನೆನಪುಗಳ ಕವಿ, ನೋವಿನ ಕವಿ, ಮತ್ತು ತಮ್ಮ ಕಾಲದ ಸಾಮಾಜಿಕ-ರಾಜಕೀಯ ತಲ್ಲಣಗಳನ್ನು ಕೋಮಲ ಭಾಷೆಯಲ್ಲಿ ದಾಖಲಿಸಿದ ಕವಿ.

ಆಧುನಿಕ ಉರ್ದು ಸಾಹಿತ್ಯವನ್ನು ರೂಪಿಸಿದ ಮತ್ತು ಬೆಳೆಸಿದ ಕವಿ ಲೇಖಕರ ದೊಡ್ದ ಪರಂಪರೆಯೇ ಇದೆ. ಫೈಜ್ ಅಹ್ಮದ್ ಫೈಜ್, ಕೈಫಿ ಆಜ್ಮಿ, ಮಜರೂಹ್ ಸುಲ್ತಾನ್ಪುರಿ, ಅಲಿ ಸರ್ದಾರ್ ಜಾಫ್ರಿ ಇವರು ಪ್ರಗತಿಶೀಲ ಚಳವಳಿಯ ಸಶಕ್ತ ದನಿಗಳಾದರೆ, ಸಾಹಿರ್ ಲೂಧಿಯಾನ್ವಿ, ಗುಲ್ಜಾರ್ ಮತ್ತು ಜಾವೇದ್ ಅಖ್ತರ್ ಉರ್ದು ಸಾಹಿತ್ಯವನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಆದರೆ ಬಶೀರ್ ಬದ್ರ್ , ರಾಹತ್ ಇಂದೋರಿ, ಮುನವ್ವರ್ ರಾಣಾ, ದುಷ್ಯಂತ್ ಕುಮಾರ್, ನಿದಾ ಫಾಜ್ಲಿ, ಅಹ್ಮದ್ ಫರಾಜ್ ಇವರುಗಳು ಅರಮನೆಯ ಭಾಷೆಯೆಂದು ಕಿರೀಟತೊಟ್ಟು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದ ಉರ್ದು ಗಜಲ್ ಅನ್ನು ಜನಸಾಮಾನ್ಯರ ಬಳಿಗೆ ತಂದರು. ಬಶೀರ್ ಬದ್ರ್ ಭೋಪಾಲದಲ್ಲಿ ವಾಸಿಸಿದ್ದ ಅವಧಿಯಲ್ಲಿ ಅಲ್ಲಿ ಹಲವಾರು ಪ್ರಮುಖ ಕವಿಗಳು ಕತೆಗಾರರು, ಮತ್ತು ಚಿಂತಕರು ಸಾಹಿತ್ಯವಲಯವನ್ನು ಸಮೃದ್ಧಗೊಳಿಸಿದ್ದರು. ಮಧ್ಯ ಪ್ರದೇಶ್ ಮತ್ತು ವಿಶೇಷವಾಗಿ ಭೋಪಾಲ್ ಹಿಂದಿ –ಉರ್ದು ಸಾಹಿತ್ಯದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.
“कभी यूँ भी आ मेरी आँख में,
कि मेरी नज़र को ख़बर न हो।”
“ಒಮ್ಮೆ ಹೀಗೆ ನನ್ನ ಕಣ್ಣೊಳಗೆ ಬಾ,
ನನ್ನ ದೃಷ್ಟಿಗೂ ಅದರ ಸುಳಿವು ಸಿಗದಂತೆ.”
ಈ ಮೃದು ಭಾವನೆಗಳೇ ಬಶೀರ್ ಬದ್ರರನ್ನು ಸಾಮಾನ್ಯ ಓದುಗರ ಹೃದಯದ ಕವಿಯನ್ನಾಗಿ ಮಾಡಿವೆ. ಸಂಸತ್ತಿನಲ್ಲೂ ಇವರ ಶಾಯರಿಗಳನ್ನು ಮಲ್ಲಿಕಾರ್ಜುನ ಖರ್ಗೆ ಅಂತಹ ರಾಜಕೀಯ ಧುರೀಣರೂ ಆಗಾಗ ಉಲ್ಲೇಖಿಸಿದ್ದಾರೆ. 1972 ರ ಈ ಘಟನೆಯನ್ನು X ನಲ್ಲಿ ಯಾರೋ ಹಂಚಿಕೊಂಡಿದ್ದರು. ಬಾಂಗ್ಲಾದೇಶ್ ಸ್ವತಂತ್ರವಾಗಿತ್ತು. ಜುಲ್ಫಿಕಾರ್ ಅಲಿ ಭುಟ್ಟೋ ಹಾಗೂ ಶ್ರೀಮತಿ ಇಂದಿರಾಗಾಂಧಿ ಶಿಮ್ಲಾ ಒಪ್ಪಂದಕ್ಕಾಗಿ ಸೇರಿದ್ದರು. ಇಂದಿರಾಗಾಂಧಿ ಅಸಮಾಧಾನಗೊಂಡಿದ್ದನ್ನು ಕಂಡ ಭುಟ್ಟೋ ಒಂದು ಶೇರ್ ಹೇಳುತ್ತಾರೆ
“दुश्मनी जम कर करो लेकिन ये गुंजाइश रहे,
जब कभी हम दोस्त हो जाएँ तो शर्मिंदा न हों।”
“ ವೈರ ಮಾಡುವುದಾದರೆ ಮನಸಾರೆ ಮಾಡಿ,
ಆದರೆ ನಾಳೆ ಮತ್ತೆ ದೋಸ್ತರಾದಾಗ ನಾಚಿಕೆ ಆಗದಷ್ಟು ಮಾನವೀಯತೆ ಉಳಿಯಲಿ.”
ಆಗ ಪ್ರಧಾನಿ ಇಂದಿರಾಗಾಂಧಿ “ಓಹೋ ನಮ್ಮ ಕವಿತೆಯನ್ನು ನಮಗೇ ತಿರುಗಿಸುತ್ತಿದ್ದೀರಾ” ಎಂದರಂತೆ. ಬಳಿಕ ಇಂದಿರಾ ಗಾಂಧಿ ಶರಣಾಗತರಾಗಿದ್ದ 90 ಸಾವಿರ ಪಾಕಿಸ್ತಾನಿ ಸೈನಿಕರನ್ನು ಪಾಕಿಸ್ತಾನಕ್ಕೆ ವಾಪಸು ಒಪ್ಪಿಸುತ್ತಾರಂತೆ. ಇದು ಇತಿಹಾಸ. ಮಾನವೀಯತೆಯ ಬೆಳಕನ್ನು ಗಡಿಯಾಚೆಗೂ ಸಾಗರದಾಚೆಗೂ ಹರಡಿದ ಕವಿಯೊಬ್ಬನ ಕವಿತೆಯ ಶಕ್ತಿ !
ಬಶೀರ್ ಬದ್ರ್ ಸರ್, ನಿಮ್ಮ ವಿದಾಯದ ನಂತರದ ಈ ನಿರ್ವಾತವನ್ನು ಉರ್ದು ಸಾಹಿತ್ಯಲೋಕ ತುಂಬಬಹುದೇ? ಕಾಲವೇ ಉತ್ತರಿಸಬಲ್ಲುದು. ಯಾಕೆಂದರೆ ಜಗತ್ತು ಅಷ್ಟೊಂದು ಕ್ರೂರವಾಗುತ್ತಿದೆ, ಮೂರು ದಶಕಗಳ ಹಿಂದೆ ನಿಮ್ಮ ಮನೆಯನ್ನು ಪುಸ್ತಕಗಳನ್ನು ಸುಟ್ಟ ಕೋಮುವಾದ ಈಗಲೂ ಜೀವಂತವಿದೆ. ಜನಸಾಮಾನ್ಯರ ಬದುಕೂ ಅತ್ಯಂತ ಕಷ್ಟಕರವಾಗಿದೆ. ನೀವು ಹೋದ ಮೇಲೆಯೂ ಈ ಜಗತ್ತೂ ಖುಷಿಯಾಗಿರುವುದಿಲ್ಲ.
ಕೋಯಿ ಹಾಥ್ ಭಿ ನ ಮಿಲಾಯೇಗಾ, ಜೊ ಗಲೇ ಮಿಲೋಗೆ ತಪಾಕ್ ಸೆ
ಯೇಹ್ ನಯೇ ಮಿಜಾಜ್ ಕಾ ಶಹರ್ ಹೈ ಜರಾ ಫಾಸಲೇ ಸೇ ಮಿಲಾ ಕರೋ
ತಟ್ಟಂತ ಆತ್ಮೀಯವಾಗಿ ತಬ್ಬಿಕೊಳ್ಳಲು ಹೋದೀಯಾ
ಇಲ್ಲಿ ಕೈ ಕುಲುಕುವುದಕ್ಕೂ ಜನ ಹಿಂಜರಿಯುತ್ತಾರೆ
ಇದು ಹೊಸ ಮನೋಭಾವದ ಶಹರು
ಸ್ವಲ್ಪ ಅಂತರ ಇಟ್ಟುಕೊಂಡೇ ಭೇಟಿಯಾಗಿರಿ” ಎಂದು ನೀವು ಭವಿಷ್ಯ ನುಡಿದಂತೆಯೇ ನಗರ ಬದಲಾಗಿದೆ. ಜನರು ಬದಲಾಗಿದ್ದಾರೆ.
ज़िंदगी तू ने मुझे क़ब्र से कम दी है ज़मीं
पाँव फैलाऊँ तो दीवार में सर लगता है
ಓ ಬದುಕೇ, ನೀನು ನನಗೆ ಸಮಾಧಿಗಿಂತಲೂ ಕಡಿಮೆ ಜಾಗ ಕೊಟ್ಟಿರುವೆ;
ಕಾಲು ಚಾಚಿದರೆ ಗೋಡೆಗೆ ತಲೆ ತಾಗುತ್ತದೆ।”
ಹೀಗೆ ಎಲ್ಲಾ ಕಾಲಕ್ಕೂ ಸಲ್ಲುವ ಸಾಹಿತ್ಯದ ಮೌಲ್ಯಗಳನ್ನು, ಗಝಲ್ನ ಸಂವೇದನೆಯನ್ನು ಮತ್ತು ಬರವಣಿಗೆಯ ಗೌರವವನ್ನು ಬಲಪಡಿಸಿದ ನಿಮಗಿದೋ ನುಡಿ ನಮನ..
उजाले अपनी यादों के हमारे साथ रहने दो,
न जाने किस गली में जिंदगी की शाम हो जाए..
“ನಿಮ್ಮ ನೆನಪುಗಳ ಬೆಳಕು ನಮ್ಮೊಂದಿಗೇ ಇರಲಿ,
ಜೀವನದ ಸಂಜೆ ಯಾವ ಓಣಿಯಲ್ಲಿ ಇಳಿಯುವುದೋ ಗೊತ್ತಿಲ್ಲ…”

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ



