ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತ್ಯಾರ್ಸಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ರಚನಾ ಪ್ರಕಾಶ ಗೌಡರ್ ಅವರು ರಾಜ್ಯಪಾಲರಿಂದ ಪ್ರತಿಷ್ಠಿತ ಬಂಗಾರದ ಪದಕವನ್ನು(ಗೋಲ್ಡ್ ಮೆಡಲ್) ಪಡೆದುಕೊಂಡು ಅಪರೂಪದ ಸಾಧನೆ ಮಾಡಿದ್ದಾರೆ.
ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ & ಪ್ರೊಡಕ್ಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಭ್ಯಾಸ ನಡೆಸಿದ್ದ ರಚನಾ, ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ಕಾಲೇಜು ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬೆಳಗಾವಿಯ ಜ್ಞಾನಸಂಗಮ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದ ವಿಟಿಯು ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರತಿಭಾವಂತೆ ರಚನಾ ಅವರಿಗೆ ಪದವಿ ಪ್ರಮಾಣಪತ್ರ ಹಾಗೂ ಚಿನ್ನದ ಪದಕವನ್ನು ಪ್ರದಾನ ಮಾಡಿ ಗೌರವಿಸಿದರು. ವೇದಿಕೆಯಲ್ಲಿದ್ದ ಗಣ್ಯರು ವಿದ್ಯಾರ್ಥಿನಿಯ ಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಸಾಧಕಿ ರಚನಾ ಅವರು ಸಿದ್ದಾಪುರ ತಾಲೂಕಿನ ತ್ಯಾರ್ಸಿಯ ಪ್ರಕಾಶ ಗೌಡ ಹಾಗೂ ರೇಖಾ ದಂಪತಿಯ ಪುತ್ರಿಯಾಗಿದ್ದಾರೆ. ಗ್ರಾಮೀಣ ಭಾಗದ ಹಿನ್ನೆಲೆಯಿಂದ ಬಂದು ಕಠಿಣ ಪರಿಶ್ರಮದಿಂದ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಥಮ ರ‍್ಯಾಂಕ್ ಹಾಗೂ ಚಿನ್ನದ ಪದಕ ಮುಡಿಗೇರಿಸಿಕೊಂಡ ರಚನಾ ಅವರ ಮಹೋನ್ನತ ಸಾಧನೆಗೆ ಪಾಲಕರು, ಕುಟುಂಬಸ್ಥರು, ಶಿಕ್ಷಕರು, ಸ್ನೇಹಿತರು, ಹಿತೈಷಿಗಳು ಹಾಗೂ ತ್ಯಾರ್ಸಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಮತ್ತು ಶುಭ ಹಾರೈಸಿದ್ದಾರೆ.
ತೃಪ್ತಿ ಪಿ.ಗೌಡ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ: ಅಂಕೋಲಾದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಮೈದಾನದಲ್ಲಿ ನಡೆದ 14 ವರ್ಷ ವಯೋಮಿತಿಯೊಳಗಿನ ಶಾಲಾ ಕ್ರೀಡಾಕೂಟದಲ್ಲಿ ತಾಲೂಕಿನ ಅಮದಳ್ಳಿಯ ಕೆಪಿಎಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ತೃಪ್ತಿ ಪಿ.ಗೌಡ ಗಮನಾರ್ಹ ಸಾಧನೆ ಮಾಡಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಗಳಿಸುವುದರೊಂದಿಗೆ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ಕ್ರೀಡಾಕೂಟದಲ್ಲಿ ತೃಪ್ತಿ ಪಿ.ಗೌಡ ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ವಿದ್ಯಾರ್ಥಿನಿಗೆ ತರಬೇತುದಾರ ಜೈರಾಮ್ ಆಗೇರ, ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಕಿ ಕೃಷ್ಣಾಬಾಯಿ ತಳೇಕರ ಹಾಗೂ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕಿ ಶ್ವೇತಾ ಹರಿಕಂತ್ರ ತರಬೇತಿ ನೀಡಿದ್ದಾರೆ.
ಇದನ್ನೂ ಓದಿದ್ದೀರಾ? ಬೀದರ್ | ಕಲ್ಯಾಣ ಕರ್ನಾಟಕದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅಗತ್ಯ : ಮೀನಾಕ್ಷಿ ಬಿರಾದರ್
ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ತೃಪ್ತಿ ಪಿ.ಗೌಡಳ ಸಾಧನೆಗೆ ಶಾಸಕ ಸತೀಶ ಸೈಲ್, ಎಸ್‌ಡಿಎಂಸಿ ಉಪಾಧ್ಯಕ್ಷರು ಹಾಗೂ ಸದಸ್ಯರು, ಶಾಲೆಯ ಶಿಕ್ಷಕ ವೃಂದ, ಪೋಷಕರು ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.




