ರಾಜಧಾನಿಯ ಹೊರವಲಯದಲ್ಲಿರುವ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ್ ನಗರ ಪ್ರದೇಶದ ಬಿಇಎಲ್ ಬಡಾವಣೆಯಲ್ಲಿ ದಿಢೀರನೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ. ವನ್ಯಜೀವಿಯ ಆಗಮನದಿಂದಾಗಿ ಇಡೀ ಬಡಾವಣೆಯ ಜನತೆಯಲ್ಲಿ ತೀವ್ರ ಆತಂಕ ಮನೆಮಾಡಿದ್ದು, ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯಿಂದಾಗಿ ನಗರದ ಇತರ ಭಾಗದ ಜನರಿಗೂ ಸಹಜವಾಗಿಯೇ ಭಯ ಶುರುವಾಗಿದೆ.
ಇಂದು ಮುಂಜಾನೆ ಸುಮಾರು 4.30ರ ವೇಳೆಗೆ ಈ ಜನನಿಬಿಡ ಪ್ರದೇಶದಲ್ಲಿ ಚಿರತೆಯ ಓಡಾಟ ಕಂಡುಬಂದಿದೆ. ರಸ್ತೆ ದಾಟಿಕೊಂಡು ಪಾರ್ಕ್‌ನೊಳಗೆ ಹೋಗುತ್ತಿರುವ ಸ್ಪಷ್ಟ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಇನ್ನು, ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕಾಗಿ ಉದ್ಯಾನವನಕ್ಕೆ ಬಂದಿದ್ದ ನಾಗರಿಕರು, ಎದುರಿಗೇ ಚಿರತೆಯನ್ನು ಕಂಡು ಬೆಚ್ಚಿಬಿದ್ದಿದ್ದು, ಜೀವ ಭಯದಿಂದ ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ.
ಚಿರತೆ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೊದಲು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳು, ಚಿರತೆ ಓಡಾಟವನ್ನು ಅಧಿಕೃತವಾಗಿ ದೃಢಪಡಿಸಿಕೊಂಡಿದ್ದಾರೆ. ಬಳಿಕ ಸಮೀಪದ ನೈಸ್ ರಸ್ತೆಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಚಿರತೆ ಸೆರೆಹಿಡಿಯಲು ಆಯಕಟ್ಟಿನ ಜಾಗಗಳಲ್ಲಿ ಬಲೆಗಳನ್ನು ಅಳವಡಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಡದಿ ಟೌನ್‌ಶಿಪ್ | ರೈತರ ಅಹವಾಲು ಆಲಿಸಲು ಜುಲೈ 11ರಂದು ‘ಸಂಯುಕ್ತ ಹೋರಾಟ-ಕರ್ನಾಟಕ’ದಿಂದ ಬೃಹತ್ ಪಬ್ಲಿಕ್ ಹಿಯರಿಂಗ್
ವಸತಿ ಪ್ರದೇಶದ ಪೊದೆಗಳಲ್ಲಿ ಅಥವಾ ಖಾಲಿ ನಿವೇಶನಗಳಲ್ಲಿ ಅಡಗಿರಬಹುದಾದ ಚಿರತೆಯನ್ನು ಹೊರಬರುವಂತೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿಗಳನ್ನು ಸಿಡಿಸುವ ಮೂಲಕ ಶೋಧ ನಡೆಸುತ್ತಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಅನಾಹುತ ಸಂಭವಿಸದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಇಡೀ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸಿಬ್ಬಂದಿ ತಂಡಗಳಾಗಿ ವಿಂಗಡಣೆಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳೀಯ ನಿವಾಸಿಗಳು ನೀಡಿರುವ ಮಾಹಿತಿಯ ಪ್ರಕಾರ, ಬಿಇಎಲ್ ಬಡಾವಣೆಯಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲು. ಅನಿರೀಕ್ಷಿತ ಆತಂಕದಿಂದ ಕಂಗಾಲಾಗಿರುವ ಬಡಾವಣೆಯ ಜನರು, ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಕಾರ್ಯಾಚರಣೆ ಮುಗಿಸಿ, ವನ್ಯಜೀವಿಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.




