ಭಟ್ಕಳ: ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ವೇಳೆ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಸಿಲುಕುವ ಅಪಾಯದಲ್ಲಿದ್ದ ಪ್ರಯಾಣಿಕನನ್ನು ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ತಮ್ಮ ಸಮಯಪ್ರಜ್ಞೆ ಯಿಂದ ರಕ್ಷಿಸಿ ಭಾರೀ ದುರಂತವನ್ನು ತಪ್ಪಿಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಕೊಚ್ಚಿವಲ್ಲಿಯಿಂದ ಗಂಗಾನಗರಕ್ಕೆ ತೆರಳುತ್ತಿದ್ದ ರೈಲು ಸಂಖ್ಯೆ 16312 ಅಪ್ ಬೆಳಿಗ್ಗೆ ಸುಮಾರು 7:56 ಗಂಟೆಗೆ ಮುರುಡೇಶ್ವರ (MRDW) ರೈಲು ನಿಲ್ದಾಣದಿಂದ ಹೊರಡುತ್ತಿದ್ದ ವೇಳೆ, ಮೊಹಮ್ಮದ್ ಗೌಫುರ್ (22) ಎಂಬ ಪ್ರಯಾಣಿಕ ಚಲಿಸುತ್ತಿದ್ದ ರೈಲಿನಿಂದ ಗಾಬರಿಯಿಂದ ಕೆಳಗಿಳಿಯಲು ಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ ನಿಯಂತ್ರಣ ತಪ್ಪಿ ರೈಲಿನೊಂದಿಗೆ ಎಳೆಯಲ್ಪಟ್ಟು, ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಸಿಲುಕುವ ಅಪಾಯ ಎದುರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಹಳಿಯಾಳ | ಸಿದ್ದಿ ಸಮುದಾಯದ ಯುವತಿಯರ ರಾಷ್ಟ್ರೀಯ ಸಾಧನೆ; ಶಾಲಿನಾಗೆ ಬೆಳ್ಳಿ, ಪ್ರಿನ್ಸಿಟಾಗೆ ಕಂಚು
ಅದೇ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ ಅವರು ಕ್ಷಣಾರ್ಧದಲ್ಲಿ ಧಾವಿಸಿ ಯುವಕನನ್ನು ರೈಲಿನಿಂದ ದೂರಕ್ಕೆ ಎಳೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅವರ ಸಮಯಪ್ರಜ್ಞೆ ಹಾಗೂ ಧೈರ್ಯದ ಕಾರ್ಯದಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.
ಈ ಘಟನೆ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಣಪತಿ ನಾಯ್ಕ ಅವರ ಸಾಹಸಮಯ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ರೈಲ್ವೆ ಪ್ರಯಾಣಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ತವ್ಯನಿಷ್ಠೆ ಹಾಗೂ ಸಮಯಪ್ರಜ್ಞೆ ಪ್ರದರ್ಶಿಸಿ ಪ್ರಯಾಣಿಕನ ಜೀವ ಉಳಿಸಿದ ಗಣಪತಿ ನಾಯ್ಕ್ ಅವರ ಕಾರ್ಯವನ್ನು ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (CMD) ಸಂತೋಷ್ ಕುಮಾರ್ ಝಾ ಮುಕ್ತಕಂಠದಿಂದ ಶ್ಲಾಘಿಸಿದ್ದು, ಸಂಸ್ಥೆಯ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿದ ಹಿನ್ನೆಲೆಯಲ್ಲಿ ಅವರಿಗೆ ₹10,000 ನಗದು ಬಹುಮಾನ ಘೋಷಿಸಿದ್ದಾರೆ.
ಸಿಎಂಡಿ ಅವರ ಪರವಾಗಿ ಕೊಂಕಣ ರೈಲ್ವೆಯ ಕಾರವಾರ ವಲಯ ಮೇಲ್ವಿಚಾರಕ ಸಂಜೀವ ಪೆಡನೇಕಾರ್ (AS/KAWR) ಅವರು ಗಣಪತಿ ನಾಯ್ಕ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ₹10,000 ನಗದು ಪ್ರಶಸ್ತಿ ಹಾಗೂ ಶುಭ ಹಾರೈಕೆಗಳನ್ನು ಹಸ್ತಾಂತರಿಸಿದರು. ಈ ಕುರಿತು ಮಾಹಿತಿ ನೀಡಿರುವ ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಕೆ. ಸುಧಾ ಕೃಷ್ಣಮೂರ್ತಿ, ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರ ಸಾಹಸಮಯ ಕಾರ್ಯ ಇಡೀ ರೈಲ್ವೆ ಇಲಾಖೆಗೆ ಹೆಮ್ಮೆ ತಂದಿದ್ದು, ಅವರ ಕರ್ತವ್ಯನಿಷ್ಠೆ ಇತರ ಸಿಬ್ಬಂದಿಗೂ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.




