ಪಾವಗಡದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಬ್ಲೇಡ್ ಮುರಿದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿಯ ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ಬೆಳ್ಳಿಬಟ್ಲು–ಶೈಲಾಪುರ ಗ್ರಾಮಗಳ ಮಧ್ಯೆ ಸಂಭವಿಸಿದೆ.
ಚಳ್ಳಕೆರೆ ಡಿಪೋದ ಕೆಎ–06 ಎಫ್–0992 ಸಂಖ್ಯೆಯ ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಸಂಚರಿಸುತ್ತಿದ್ದ ವೇಳೆ ಬಸ್‌ನ ಬ್ಲೇಡ್ ಮುರಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿಗೆ ಚಲಿಸಿ ರಸ್ತೆ ಬದಿಯ ಹುಣಸೆ ಮರಕ್ಕೆ ಅಪ್ಪಳಿಸಿದೆ.
ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸಂಭವಿಸಿದ ವೇಳೆ ಎದುರು ದಿಕ್ಕಿನಿಂದ ಯಾವುದೇ ವಾಹನಗಳು ಬಾರದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಘಟನೆಯ ಬಳಿಕ ಸ್ಥಳೀಯರು ಪಾವಗಡ–ಚಿತ್ರದುರ್ಗ ರಾಜ್ಯ ಹೆದ್ದಾರಿಯ ಪಟ್ಟಣದಿಂದ ಲಿಂಗದಹಳ್ಳಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಎಲ್ಲೆಡೆ ಗುಂಡಿಗಳು ಉಂಟಾಗಿರುವುದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು. ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಈ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




