ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ ಹೆಸರುಗಳ ಸೇರ್ಪಡೆ, ತಿದ್ದುಪಡಿ ಮತ್ತು ಅಳಿಸುವಿಕೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ Form-7 ಅರ್ಜಿಗಳ ವಿಚಾರ ಬೆಳಕಿಗೆ ಬಂದಿದೆ.
ಬ್ಯಾಡಗೊಟ್ಟ ಬೂತ್-21, ಭಾಗ ಸಂಖ್ಯೆ 208ರಲ್ಲಿ SIR ಕರಡು ಮತದಾರರ ಪಟ್ಟಿಯಲ್ಲಿರುವ 66 ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸುವಂತೆ Form-7 ಮೂಲಕ ಆಕ್ಷೇಪಣೆ ಸಲ್ಲಿಸಲಾಗಿದೆ ಎಂಬ ದಾಖಲೆಗಳು ಲಭ್ಯವಾಗಿವೆ. ಈ ಅರ್ಜಿಗಳನ್ನು ಸ್ಥಳೀಯ ಬಿಜೆಪಿ ಬೂತ್ ಏಜೆಂಟ್ ಹಾಗೂ ಬಿಜೆಪಿ ಮುಖಂಡರು/ಕಾರ್ಯಕರ್ತರು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅರ್ಜಿಗಳಲ್ಲಿ ಮತದಾರರನ್ನು ‘Absent’ ಅಥವಾ ‘Permanently Shifted’ ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ಮತದಾರರಲ್ಲಿ ಹಲವು ಮಂದಿ ಬ್ಯಾಡಗೊಟ್ಟ ವ್ಯಾಪ್ತಿಯಲ್ಲೇ ವಾಸವಿದ್ದು, ಕಳೆದ ಹಲವು ವರ್ಷಗಳಿಂದ ಅದೇ ವ್ಯಾಪ್ತಿಯಲ್ಲಿ ಮತ ಚಲಾಯಿಸುತ್ತಾ ಬಂದಿದ್ದಾರೆ ಎಂಬುದು ಸ್ಥಳೀಯರ ಹೇಳಿಕೆ. SIR ಕರಡು ಪಟ್ಟಿಯಲ್ಲಿಯೂ ಅವರ ಹೆಸರುಗಳು ಇರುವ ಸಂದರ್ಭದಲ್ಲಿ, ಏಕಾಏಕಿ ಅವರ ವಿರುದ್ಧ Form-7 ಸಲ್ಲಿಕೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಭಾರತ ಚುನಾವಣಾ ಆಯೋಗದ ಅಧಿಕೃತ Form-7 ಮಾರ್ಗಸೂಚಿಯ ಪ್ರಕಾರ, ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ಅಳಿಸಲು ಅಥವಾ ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸಲು Form-7 ಬಳಸಬಹುದು. ‘Absent/Permanently Shifted’ ಸೇರಿದಂತೆ ನಿರ್ದಿಷ್ಟ ಕಾರಣಗಳನ್ನು ಸೂಚಿಸುವ ವ್ಯವಸ್ಥೆಯೂ Form-7ನಲ್ಲಿ ಇದೆ. ಆದರೆ, ಆಕ್ಷೇಪಣೆ ಸಲ್ಲಿಸುವ ವ್ಯಕ್ತಿಯೇ ತನ್ನ ಆರೋಪ ಅಥವಾ ಕಾರಣವನ್ನು ಸಮರ್ಥಿಸುವ ಹೊಣೆ ಹೊಂದಿರುತ್ತಾನೆ ಎಂದು ಚುನಾವಣಾ ಆಯೋಗದ ಮಾರ್ಗಸೂಚಿ ಸ್ಪಷ್ಟಪಡಿಸುತ್ತದೆ. ಅರ್ಜಿಯಲ್ಲಿನ ಘೋಷಣೆಯಲ್ಲಿ ತಪ್ಪು ಮಾಹಿತಿ ನೀಡಿದರೆ Representation of the People Act, 1950ರ ಸೆಕ್ಷನ್ 31ರ ಅಡಿಯಲ್ಲಿ ಶಿಕ್ಷೆಯ ಸಾಧ್ಯತೆಯನ್ನೂ ಆಯೋಗದ ಮಾರ್ಗಸೂಚಿ ಉಲ್ಲೇಖಿಸುತ್ತದೆ. ಇದೀಗ ಬ್ಯಾಡಗೊಟ್ಟದಲ್ಲಿ ಎದುರಾಗಿರುವ ಪ್ರಮುಖ ಪ್ರಶ್ನೆಯೇನೆಂದರೆ-ನಿಜವಾಗಿಯೂ ಈ 66 ಮಂದಿ ಮತದಾರರು ಗೈರುಹಾಜರಾಗಿದ್ದಾರೆಯೇ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆಯೇ? ಅಥವಾ ಸ್ಥಳೀಯವಾಗಿ ವಾಸಿಸುತ್ತಿರುವ ಅರ್ಹ ಮತದಾರರ ವಿರುದ್ಧ ಸಮೂಹವಾಗಿ Form-7 ಅರ್ಜಿಗಳನ್ನು ಸಲ್ಲಿಸಲಾಗಿದೆಯೇ ಎಂಬುದು. ಈ ಕುರಿತು ಸಂಬಂಧಿಸಿದ ಚುನಾವಣಾ ಅಧಿಕಾರಿಗಳು ದಾಖಲೆಗಳ ಆಧಾರದ ಮೇಲೆ ಸ್ಪಷ್ಟಪಡಿಸಬೇಕಾದ ಅಗತ್ಯವಿದೆ.
ಒಂದೇ ಕುಟುಂಬದ 9 ಮಂದಿಗೂ Form-7!
ಬ್ಯಾಡಗೊಟ್ಟ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ 9 ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ Form-7 ಸಲ್ಲಿಸಿರುವುದು ಈ ಪ್ರಕರಣದ ಮತ್ತೊಂದು ಗಮನಾರ್ಹ ಅಂಶವಾಗಿದೆ. ಕುಟುಂಬದ ಸದಸ್ಯರು ಸ್ಥಳೀಯವಾಗಿ ವಾಸಿಸುತ್ತಿದ್ದರೂ, ಅವರನ್ನು ‘Absent’ ಅಥವಾ ‘Permanently Shifted’ ಎಂದು ಗುರುತಿಸಿ ಆಕ್ಷೇಪಣೆ ಸಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ಬ್ಯಾಡಗೊಟ್ಟ ಗ್ರಾಮದಲ್ಲೇ ಮನೆ ಹೊಂದಿದ್ದು, ಉದ್ಯೋಗದ ಕಾರಣಕ್ಕಾಗಿ ಬೇರೆ ಸ್ಥಳಗಳಿಗೆ ತೆರಳಿ ಕೆಲಸ ಮಾಡುತ್ತಿರುವ ಕೆಲವು ಮುಸ್ಲಿಂ ಮತದಾರರ ಹೆಸರುಗಳನ್ನೂ ಅಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗಿದೆ. ಉದ್ಯೋಗದ ನಿಮಿತ್ತ ತಾತ್ಕಾಲಿಕವಾಗಿ ಬೇರೆಡೆ ಇರುವುದಕ್ಕೂ ಶಾಶ್ವತವಾಗಿ ಸ್ಥಳಾಂತರವಾಗಿರುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿ, ಪ್ರತಿ ಮತದಾರನ ನೈಜ ವಾಸಸ್ಥಿತಿ ಪರಿಶೀಲಿಸಿಯೇ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.
ಸೆ.23ರಂದು ಸಲ್ಲಿಕೆಯಾದ ಅರ್ಜಿಗಳು
ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ನಿಗದಿಯಾಗಿದ್ದ ಕೊನೆಯ ದಿನವಾದ ಸೆಪ್ಟೆಂಬರ್ 23ರಂದು ಈ Form-7 ಅರ್ಜಿಗಳನ್ನು ಸ್ಥಳೀಯ BLO ಅವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅರ್ಜಿಗಳಲ್ಲಿ ಉಲ್ಲೇಖಿಸಿರುವ ಕಾರಣಗಳು ನಿಜವೇ ಎಂಬುದನ್ನು ಸ್ಥಳ ಪರಿಶೀಲನೆ ಮೂಲಕ ದೃಢಪಡಿಸುವ ಜವಾಬ್ದಾರಿ ಚುನಾವಣಾ ವ್ಯವಸ್ಥೆಯ ಮುಂದಿದೆ. ಬ್ಯಾಡಗೊಟ್ಟ ಬೂತ್‌ಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, 66 ಮತದಾರರ ಹೆಸರುಗಳನ್ನು ಅಳಿಸಲು Form-7 ಅರ್ಜಿಗಳು ಸಲ್ಲಿಕೆಯಾಗಿದ್ದರೂ, ಅವುಗಳನ್ನು ಸ್ಥಳೀಯ BLO ಪರಿಶೀಲಿಸಿ ಚುನಾವಣಾ ವ್ಯವಸ್ಥೆಯಲ್ಲಿ ಅಪ್ಲೋಡ್ ಮಾಡಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ನಿಜವಾಗಿದ್ದರೆ, ಪ್ರಸ್ತುತ ಹಂತದಲ್ಲಿ ಆ ಅರ್ಜಿಗಳ ಆಧಾರದ ಮೇಲೆ ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ಮುಂದುವರಿದಿಲ್ಲ ಎಂಬುದು ಮಹತ್ವದ ಸಂಗತಿ. ಆದರೆ, ಅರ್ಜಿಗಳನ್ನು ಏಕೆ ಸಲ್ಲಿಸಲಾಯಿತು, ಅವುಗಳಲ್ಲಿ ನೀಡಿರುವ ಕಾರಣಗಳು ನಿಜವೇ, ಅರ್ಜಿದಾರರಿಗೆ ಆ ಮತದಾರರ EPIC ಸಂಖ್ಯೆ, ವಿಳಾಸ ಮತ್ತು ಇತರ ವಿವರಗಳು ಹೇಗೆ ದೊರೆತವು ಎಂಬ ಪ್ರಶ್ನೆಗಳಿಗೆ ಉತ್ತರ ಅಗತ್ಯವಾಗಿದೆ.
64 ಮತದಾರರ ವಿರುದ್ಧ ಆಕ್ಷೇಪಣೆ: ಬಿಜೆಪಿ ಮುಖಂಡರ ಹೆಸರುಗಳು
ಲಭ್ಯವಿರುವ ದಾಖಲೆಗಳ ಪ್ರಕಾರ, Form-7 ಮೂಲಕ ಆಕ್ಷೇಪಣೆ ಸಲ್ಲಿಸಿದವರಾಗಿ ಕೆಳಗಿನ ಹೆಸರುಗಳು ಉಲ್ಲೇಖವಾಗಿದ್ದು, ಅವರಿಂದ ಸಲ್ಲಿಸಲಾದ ಆಕ್ಷೇಪಣೆಗಳ ಸಂಖ್ಯೆಯೂ ಈ ಕೆಳಗಿನಂತಿದೆ:
ಕ್ರಮ| ಆಕ್ಷೇಪಣೆ ಸಲ್ಲಿಸಿದವರ ಹೆಸರು| ಆಕ್ಷೇಪಣೆಗಳ ಸಂಖ್ಯೆ
1| ಬಿ. ಎನ್. ಬಸವರಾಜು| 15
2| ಯು. ಎಚ್. ಲೋಕೇಶ್| 14
3| ಸವಿತಾ ಎನ್. ಮಲಾಲಿ| 13
4| ಎ. ಸಿ. ನಾಗರಾಜು| 12
5| ರಜನಿ ಯು. ಎಲ್.| 10
ಒಟ್ಟು| | 64
‘ಗೈರುಹಾಜರು / ಶಾಶ್ವತವಾಗಿ ಸ್ಥಳಾಂತರ’ ಎಂದು ಆಕ್ಷೇಪಿಸಲಾದ 64 ಮತದಾರರು
ಲಭ್ಯವಿರುವ ಪಟ್ಟಿಯ ಪ್ರಕಾರ, ‘Absent / Permanently Shifted’ ಎಂದು ಆಕ್ಷೇಪಣೆ ಸಲ್ಲಿಸಲಾದ 64 ಮತದಾರರ ಹೆಸರುಗಳು ಹೀಗಿವೆ:
ಮೊಹಮ್ಮದ್ ರಫೀಕ್ ಜಿ.ಎಸ್, ಅಬೂಬಕರ್ ಸಿದ್ದೀಕ್, ಫಾತಿಮಾ ಸಮೀನಾ, ಸುಬಾನ್, ಮುಸ್ತಫಾ ಕೆ., ಅಸ್ಯಮ್ಮ, ಬಿ.ಎಂ. ಅಬ್ದುಲ್ ಲತೀಫ್, ಫಾತಿಮಾ, ಅಬ್ದುಲ್ ಖಾದರ್ ಎಸ್.ಎ., ಮೊಹಿದ್ದೀನ್ ಜಿ.ಎ., ಮೈಮೂನಾ, ಸಫುವಾನ್ ಜಿ.ಎಂ., ಕತೀಜಾ, ಕೈಸರ್ ಬಿ.ಎಂ., ಟಿ. ಸುಮಯ, ರೂಬೀನಾ ಬಿ.ಎ., ಲುಕ್ಮಾನ್ ಕೈಸರ್ ಮಹಮ್ಮದ್, ಮುಫೀದ್ ಬಿ.ಎಚ್., ಅಶ್ರಫ್ ಎಸ್.ಎ., ಅಬ್ದುಲ್ ರಶೀದ್, ಆಯಿಷಾ, ಆಯಿಷಾ, ಎಸ್.ಎ. ಉಮ್ಮರ್ ಶಫೀ, ಸಾಹಿರಾ ಬಾನು, ಮೊಹಮ್ಮದ್ ಮುಹದ್ ಪಿ.ಎ., ಆಸಿಯಾ ಮುಬೀನಾ ಬಿ.ಎ., ಫಾತಿಮತ್ ರಿಲಾ, ಫಾತಿಮತಲ್ ಸಾನಿಯಾ ಜಿ.ಎ., ಅಹಿಸತಲ್ ಸಫ್ರೀನಾ, ಮೊಹಮ್ಮದ್ ಸವಾದ್ ಪಿ.ಎ., ಜಿ.ಎಸ್. ಜುಹಾರಾ, ಥಮ್ಸೀರಾ ಕೆ.ಎಚ್., ಪಿ.ಎ. ಕುಂಚಿ ಅಬ್ದುಲ್ಲಾ, ಜಾಸ್ಮಿನ್ ಕೆ.ಎಂ., ಮರಿಯಾ ಕೆ.ಎಂ., ಸಂಸಾಬಿ, ಮುಮ್ತಾಜ್ ಜಿ.ಎ., ಸಕೀನಾ ಎಸ್., ಮೊಹಮ್ಮದ್ ರಫೀ ಕೆ.ಎಂ., ಅಬ್ದುಲ್ ರಹಮಾನ್ ಜಿ.ಎ., ಅಬ್ದುಲ್ ರಶೀದ್ ಕೆ.ಎಂ., ಅಬ್ದುಲ್ ರಜಾಕ್ ಜಿ.ಎಸ್., ಅಬ್ದುಲ್ ಲತೀಫ್ ಜಿ.ಎಸ್., ಉಮ್ಮು ಕುಲ್ಸು, ಅಸ್ಯಿಯಮ, ಸಮೀನಾ, ಅಬ್ದುಲ್ ರಶೀದ್ ಕೆ.ಎ., ಜಿ.ಎಂ. ಅಬ್ದುಲ್ ಬಸಿತ್, ಬಿ.ಎಂ. ಖಲಂದರ್ ಹುಸೈನ್, ಜಮೀಲಾ ಕೆ.ಬಿ.ಎಂ., ಅಬ್ದುಲ್ ರವೂಫ್ ಬಿ.ಎಂ., ಕೆ.ಎ. ತಾಹಿರಾಬಾನು ಸಫೀಯಾ ಜಿ.ಎಸ್., ಅಬ್ದುಲ್ ಶಕೀರ್ ಜಿ.ಎ., ಅಬ್ದುಲ್ ನಾಸಿರ್ ಬಿ.ಎಂ., ಫಾತಿಮಾ, ಫಾತಿಮಾ, ನಬೀಸಾ, ಸಜೀದಾ, ಕತೀಜಮ್ಮ, ರೂಬೀನಾ ಎಲ್.ಎಸ್., ಮೊಹಮ್ಮದ್ ಹನೀಫ್ ಜಿ.ಎಸ್., ಅಶ್ರಫ್, ಅಶ್ರಫ್ ಬಿ.ಎಂ.
Form-7 ದುರುಪಯೋಗವಾಗಿದೆಯೇ? ತನಿಖೆಯಿಂದ ಸತ್ಯ ಹೊರಬರಲಿ
ಈ ಪ್ರಕರಣದ ಹಿನ್ನೆಲೆಯಲ್ಲಿ SIR ಪ್ರಕ್ರಿಯೆಯಲ್ಲಿ Form-7 ವ್ಯವಸ್ಥೆಯ ದುರುಪಯೋಗವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಚುನಾವಣಾ ಆಯೋಗದ ಪ್ರಕಾರ, ಮತದಾರರ ಪಟ್ಟಿಯಿಂದ ಹೆಸರು ಅಳಿಸಲು Form-7 ಕಾನೂನುಬದ್ಧ ವ್ಯವಸ್ಥೆಯಾಗಿದೆ. ಆದರೆ, ಅರ್ಜಿಯಲ್ಲಿ ನೀಡಲಾಗುವ ಕಾರಣ ಮತ್ತು ಅದರ ಆಧಾರವನ್ನು ಅರ್ಜಿದಾರನೇ ಸಮರ್ಥಿಸಬೇಕಾಗುತ್ತದೆ. ಹೀಗಾಗಿ, ಒಂದೇ ಬೂತ್‌ನಲ್ಲಿ, ಒಂದೇ ಸಮುದಾಯಕ್ಕೆ ಸೇರಿದ ಹಲವು ಮತದಾರರ ವಿರುದ್ಧ ಒಂದೇ ರೀತಿಯ ಕಾರಣಗಳನ್ನು ನೀಡಿ ದೊಡ್ಡ ಸಂಖ್ಯೆಯಲ್ಲಿ Form-7 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಅವುಗಳನ್ನು ಸಾಮಾನ್ಯ ಆಡಳಿತಾತ್ಮಕ ಅರ್ಜಿಗಳೆಂದು ಮಾತ್ರ ನೋಡದೆ, ಪ್ರತಿಯೊಂದು ಪ್ರಕರಣದ ವಾಸ್ತವಾಂಶವನ್ನು ಪರಿಶೀಲಿಸುವ ಅಗತ್ಯವಿದೆ. ವಿಶೇಷವಾಗಿ ಅರ್ಜಿಗಳಲ್ಲಿ ‘Absent’ ಅಥವಾ ‘Permanently Shifted’ ಎಂದು ನಮೂದಿಸಿರುವ ಮತದಾರರು ನಿಜವಾಗಿ ಸ್ಥಳೀಯವಾಗಿ ವಾಸಿಸುತ್ತಿದ್ದಾರೆಯೇ, ಅವರು ಮತ ಚಲಾಯಿಸುತ್ತಿದ್ದಾರೆಯೇ, ಅರ್ಜಿದಾರರು ಅವರಿಗೆ ಪರಿಚಿತರೇ, ಅರ್ಜಿಗಳಲ್ಲಿನ ಮಾಹಿತಿಯನ್ನು ಯಾವ ಮೂಲದಿಂದ ಪಡೆದರು ಮತ್ತು ಒಂದೇ ರೀತಿಯ ಅರ್ಜಿಗಳು ಸಾಮೂಹಿಕವಾಗಿ ಸಿದ್ಧಪಡಿಸಲ್ಪಟ್ಟಿವೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾಗಿದೆ.
ಬಿಜೆಪಿ ವಿರುದ್ಧ ಗಂಭೀರ ಆರೋಪ
ಈ Form-7 ಅರ್ಜಿಗಳ ಹಿಂದೆ ಸ್ಥಳೀಯ ಬಿಜೆಪಿ ಬೂತ್ ಏಜೆಂಟ್ ಹಾಗೂ ಬಿಜೆಪಿ ಮುಖಂಡರು/ಕಾರ್ಯಕರ್ತರು ಇದ್ದಾರೆ ಎಂಬುದು ಆರೋಪ. ಆದರೆ, ಅರ್ಜಿಗಳಲ್ಲಿ ಉಲ್ಲೇಖಿಸಿರುವ ಕಾರಣಗಳು ಸುಳ್ಳಾಗಿದ್ದರೆ ಅಥವಾ ಅರ್ಹ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಲು ತಪ್ಪು ಮಾಹಿತಿ ನೀಡಲಾಗಿದ್ದರೆ, ಅದು ಗಂಭೀರ ವಿಚಾರವಾಗುತ್ತದೆ. ಅಂತಹ ಸಂದರ್ಭದಲ್ಲಿ ಅರ್ಜಿಗಳ ಹಿಂದಿನ ಉದ್ದೇಶ, ಅರ್ಜಿದಾರರ ಪಾತ್ರ ಮತ್ತು ದಾಖಲೆಗಳ ಮೂಲದ ಕುರಿತು ತನಿಖೆ ನಡೆಯಬೇಕೆಂಬುದು ದೂರುದಾರರ ಬೇಡಿಕೆಯಾಗಿದೆ.
ಅಫ್ಸರ್ ಕೊಡ್ಲಿಪೇಟೆ: ‘ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯಾಗಲಿ’

ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ SDPI ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ Form-7 ಅನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಈ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು. Form-7 ದುರುಪಯೋಗದ ಆರೋಪಗಳನ್ನು ಕೆಲವು ಪ್ರತ್ಯೇಕ ಪ್ರಕರಣಗಳಾಗಿ ಪರಿಗಣಿಸದೆ, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಬಿಜೆಪಿಯೇತರ ಮತದಾರರನ್ನು ಗುರಿಯಾಗಿಸಿಕೊಂಡು ಸಂಘಟಿತವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಯಾವುದೇ ಪ್ರಯತ್ನ ನಡೆದಿದೆಯೇ ಎಂಬುದನ್ನೂ ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.
ಇಂತಹ ಪ್ರಯತ್ನಗಳ ಹಿಂದೆ ಯಾವುದೇ ಸಂಘಟಿತ ರಾಜಕೀಯ ಜಾಲ, ಕ್ರಿಮಿನಲ್ ಒಳಸಂಚು ಅಥವಾ ಧರ್ಮದ್ವೇಷದಿಂದ ಪ್ರೇರಿತ ಉದ್ದೇಶ ಇದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಬೇಕು ಎಂದು ಅವರು ಹೇಳಿದರು. ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ರಾಜಕೀಯ ಅಭಿಪ್ರಾಯ ಹೊಂದಿರುವ ನಾಗರಿಕರನ್ನು ಅವರ ಮತದಾನದ ಹಕ್ಕಿನಿಂದ ವಂಚಿಸುವ ಉದ್ದೇಶ ಸಾಬೀತಾದರೆ, ಅದು ಕೇವಲ ಚುನಾವಣಾ ನಿಯಮಗಳ ಉಲ್ಲಂಘನೆಯಲ್ಲ; ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಮೇಲಿನ ಗಂಭೀರ ಪರಿಣಾಮ ಬೀರುವ ವಿಚಾರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಮೀನ್ ಮೊಸಿನ್: ‘SIT ರಚಿಸಿ ರಾಜ್ಯಾದ್ಯಂತ ತನಿಖೆ ನಡೆಸಲಿ’

SDPI ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮೊಸಿನ್ ಮಾತನಾಡಿ, ರಾಜ್ಯ ಸರ್ಕಾರ ತಕ್ಷಣ ವಿಶೇಷ ತನಿಖಾ ತಂಡ (SIT) ರಚಿಸಿ Form-7 ದುರುಪಯೋಗದ ಕುರಿತು ರಾಜ್ಯಾದ್ಯಂತ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ದೊಡ್ಡ ಪ್ರಮಾಣದಲ್ಲಿ Form-7 ಸಲ್ಲಿಸಿರುವವರ ವಿವರ, ಅರ್ಜಿಗಳನ್ನು ಸಲ್ಲಿಸಿದವರ ಹಾಗೂ ಅವುಗಳ ಹಿಂದೆ ಕಾರ್ಯನಿರ್ವಹಿಸಿರುವವರ ಸಂಪರ್ಕ, ಒಂದೇ ರೀತಿಯ ಅಥವಾ ಸಾಮೂಹಿಕವಾಗಿ ಸಿದ್ಧಪಡಿಸಲಾದ ಅರ್ಜಿಗಳಿವೆಯೇ, ಮತದಾರರ ವೈಯಕ್ತಿಕ ಮಾಹಿತಿ, EPIC ಸಂಖ್ಯೆ ಮತ್ತು ವಿಳಾಸಗಳನ್ನು ಹೇಗೆ ಪಡೆಯಲಾಗಿದೆ, ಮತದಾರರ ಅರಿವು ಅಥವಾ ಅನುಮತಿಯಿಲ್ಲದೆ ಅರ್ಜಿಗಳನ್ನು ಸಲ್ಲಿಸಲಾಗಿದೆಯೇ, ನಕಲಿ ಅಥವಾ ಸುಳ್ಳು ದಾಖಲೆಗಳನ್ನು ಬಳಸಲಾಗಿದೆಯೇ, ಯಾವುದೇ ರಾಜಕೀಯ ಅಥವಾ ಸಂಘಟಿತ ಜಾಲದ ಮೂಲಕ ಅರ್ಜಿಗಳನ್ನು ಸಲ್ಲಿಸಲಾಗಿದೆಯೇ, ನಿರ್ದಿಷ್ಟ ಸಮುದಾಯಗಳು ಅಥವಾ ಬಿಜೆಪಿಯೇತರ ಮತದಾರರನ್ನು ಆಯ್ದು ಗುರಿಯಾಗಿಸಲಾಗಿದೆಯೇ ಎಂಬ ಎಲ್ಲ ಅಂಶಗಳನ್ನು ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅರ್ಜಿಗಳ ಹಿಂದೆ ಧರ್ಮದ್ವೇಷ ಅಥವಾ ಮತದಾರರ ರಾಜಕೀಯ ಹಕ್ಕುಗಳನ್ನು ದುರ್ಬಲಗೊಳಿಸುವ ಉದ್ದೇಶವಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಅವರು ಹೇಳಿದರು. ಅಕ್ಟೋಬರ್ 3ರಂದು ಶನಿವಾರ ಮಡಿಕೇರಿ ಬಸ್ ನಿಲ್ದಾಣ ಬಳಿಯ ಚೌಕಿ ವೃತ್ತದ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು. Form-7 ಅರ್ಜಿಗಳಿಂದಾಗಿ SIR ಪ್ರಕ್ರಿಯೆಯಲ್ಲಿ ತೊಂದರೆಗೊಳಗಾಗಿದ್ದೇವೆ ಎಂದು ಹೇಳಲಾಗುತ್ತಿರುವ 66 ಮಂದಿ ಮತದಾರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಮೀನ್ ಮೊಸಿನ್ ಮಾಹಿತಿ ನೀಡಿದರು.
ಲತೀಫ್: ‘ನಮ್ಮ ಮನೆಯ 9 ಮಂದಿಯ ಹೆಸರನ್ನೇ ತೆಗೆಯಲು ಅರ್ಜಿ’

ಕೊಡ್ಲಿಪೇಟೆ ನಿವಾಸಿ ಲತೀಫ್ ಮಾತನಾಡಿ, ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷದ ಕಾರ್ಯಕರ್ತರು Form-7 ಸಲ್ಲಿಸಿದ್ದಾರೆ ಎಂದು ಆರೋಪಿಸಿದರು. “ನಮ್ಮ ಮನೆಯ ಒಂದೇ ಕುಟುಂಬದ 9 ಜನರ ಹೆಸರುಗಳನ್ನು ತೆಗೆದುಹಾಕಲು Form-7 ಸಲ್ಲಿಸಲಾಗಿದೆ. ಅದರಲ್ಲಿ ನಾನೂ ಒಬ್ಬ. ನಮ್ಮ ವಿರುದ್ಧ ಆಕ್ಷೇಪಣೆ ಸಲ್ಲಿಸಿರುವವರು ನಮ್ಮ ಮನೆಯ ಮುಂಭಾಗದವರು ಹಾಗೂ ನಮ್ಮ ಒಡನಾಟದಲ್ಲಿರುವ, ಆಪ್ತರಾಗಿರುವವರೇ ಆಗಿದ್ದಾರೆ. ಆತ್ಮೀಯರಂತೆ ವರ್ತಿಸಿ ನಮ್ಮ ಹಿಂದೆ ಇಂತಹ ಕೆಲಸ ಮಾಡಿರುವುದು ಅಚ್ಚರಿ ಮತ್ತು ಬೇಸರ ಉಂಟುಮಾಡಿದೆ” ಎಂದು ಅವರು ಹೇಳಿದರು. ಆದರೆ ಈ ಆರೋಪಗಳ ಸತ್ಯಾಸತ್ಯತೆಯನ್ನು ದಾಖಲೆಗಳು, ಸ್ಥಳ ಪರಿಶೀಲನೆ ಮತ್ತು ಸಂಬಂಧಿಸಿದವರ ಹೇಳಿಕೆಗಳ ಆಧಾರದ ಮೇಲೆ ಚುನಾವಣಾ ಅಧಿಕಾರಿಗಳೇ ನಿರ್ಧರಿಸಬೇಕಾಗಿದೆ.
‘Form-7 ಆಧಾರದ ಮೇಲೆ ಆತುರದ ಅಳಿಸುವಿಕೆ ಬೇಡ’
Form-7 ಅರ್ಜಿಯ ಆಧಾರದ ಮೇಲೆ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಆತುರದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ. ವಿಶೇಷವಾಗಿ ‘Absent’ ಅಥವಾ ‘Permanently Shifted’ ಎಂದು ಅರ್ಜಿಯಲ್ಲಿ ನಮೂದಿಸಿರುವ ಪ್ರತಿಯೊಬ್ಬ ಮತದಾರನ ನೈಜ ವಾಸಸ್ಥಳವನ್ನು ಪರಿಶೀಲಿಸಬೇಕು. ಅಗತ್ಯವಿದ್ದರೆ ಮತದಾರರಿಂದ ಪ್ರತಿಕ್ರಿಯೆ ಪಡೆಯಬೇಕು. ಅರ್ಜಿದಾರರು ನೀಡಿರುವ ಕಾರಣಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನೂ ಪರಿಶೀಲಿಸಬೇಕು. ತನಿಖೆಯಲ್ಲಿ ಸುಳ್ಳು ಮಾಹಿತಿ ನೀಡಿರುವುದು, ನಕಲಿ ದಾಖಲೆ ಬಳಸಿರುವುದು ಅಥವಾ ಉದ್ದೇಶಪೂರ್ವಕವಾಗಿ ಅರ್ಹ ಮತದಾರರ ಹೆಸರು ತೆಗೆದುಹಾಕಲು ಪ್ರಯತ್ನಿಸಿರುವುದು ಸಾಬೀತಾದಲ್ಲಿ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.
SIR ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಪ್ರಶ್ನೆ
SIRನ ಉದ್ದೇಶವೇ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅರ್ಹ ಮತದಾರರ ಹೆಸರುಗಳನ್ನು ಸರಿಯಾಗಿ ಉಳಿಸುವುದು ಮತ್ತು ಅನರ್ಹ/ದ್ವಂದ್ವ/ಸ್ಥಳಾಂತರಗೊಂಡ ಮತದಾರರ ವಿವರಗಳನ್ನು ನಿಯಮಾನುಸಾರ ಪರಿಷ್ಕರಿಸುವುದು. ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿ Form-7 ಅಳಿಸುವಿಕೆ ಅಥವಾ ಆಕ್ಷೇಪಣೆಗೆ ನಿಗದಿತ ಮಾರ್ಗವಾಗಿದೆ. ಹೀಗಾಗಿ, Form-7 ಅರ್ಜಿಗಳ ಸಲ್ಲಿಕೆ ನಡೆದಿರುವುದೇ ಅಕ್ರಮದ ಅಂತಿಮ ಸಾಕ್ಷಿ ಎಂದು ಹೇಳಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಒಂದೇ ಬೂತ್‌ನಲ್ಲಿ ಒಂದೇ ಸಮುದಾಯಕ್ಕೆ ಸೇರಿದ ದೊಡ್ಡ ಸಂಖ್ಯೆಯ ಮತದಾರರ ವಿರುದ್ಧ ‘Absent/Permanently Shifted’ ಎಂಬ ಕಾರಣದಡಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಆರೋಪವನ್ನು ನಿರ್ಲಕ್ಷಿಸುವಂತೆಯೂ ಇಲ್ಲ.
ಬ್ಯಾಡಗೊಟ್ಟ ಪ್ರಕರಣದಲ್ಲಿ 66 ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಮಾಹಿತಿ, ಅವುಗಳಲ್ಲಿ 64 ಅರ್ಜಿಗಳಿಗೆ ಸಂಬಂಧಿಸಿದಂತೆ ಐದು ಆಕ್ಷೇಪಕರ ಹೆಸರುಗಳು ಮತ್ತು ಸಂಖ್ಯೆಗಳು ಲಭ್ಯವಿರುವುದು, ಒಂದೇ ಕುಟುಂಬದ 9 ಮಂದಿಯ ಹೆಸರುಗಳೂ ಪಟ್ಟಿಯಲ್ಲಿರುವ ಆರೋಪ, ಹಾಗೂ BLO ಅರ್ಜಿಗಳನ್ನು ಅಪ್ಲೋಡ್ ಮಾಡಿಲ್ಲ ಎಂಬ ಮಾಹಿತಿ-ಇವೆಲ್ಲವೂ ಸಮಗ್ರ ಪರಿಶೀಲನೆಗೆ ಒಳಪಡಬೇಕಾದ ಅಂಶಗಳಾಗಿವೆ.
ಈ ವಿಶೇಷ ವರದಿ ಓದಿದ್ದೀರಾ? ಕೊಡಗಿನಲ್ಲಿ ಮಳೆ ಕೊರತೆ; ಭತ್ತಕ್ಕೆ ಬೆಂಕಿ ರೋಗ-ಕೀಟ ಬಾಧೆ
ಅಂತಿಮವಾಗಿ, ಈ ಪ್ರಕರಣದಲ್ಲಿ Form-7 ಅರ್ಜಿಗಳನ್ನು ಯಾರು ಸಲ್ಲಿಸಿದರು, ಯಾವ ಕಾರಣಕ್ಕೆ ಸಲ್ಲಿಸಿದರು, ಅರ್ಜಿಗಳಲ್ಲಿನ ಮಾಹಿತಿಯ ಮೂಲವೇನು, ಆ ಕಾರಣಗಳು ನಿಜವೇ, ಸಂಬಂಧಿಸಿದ ಮತದಾರರು ನಿಜವಾಗಿಯೂ ಸ್ಥಳಾಂತರಗೊಂಡಿದ್ದಾರೆಯೇ, ಅರ್ಜಿಗಳನ್ನು BLO/ERO ಯಾವ ರೀತಿಯಲ್ಲಿ ಪರಿಶೀಲಿಸಿದರು ಎಂಬ ಪ್ರಶ್ನೆಗಳಿಗೆ ದಾಖಲೆ ಆಧಾರಿತ ಉತ್ತರ ಸಿಗಬೇಕಾಗಿದೆ.
ಈ ವಿಶೇಷ ವರದಿ ಓದಿದ್ದೀರಾ? SIR: ‘ನಮ್ಮ ಸಂವಿಧಾನ-ನಮ್ಮ ಹೋರಾಟ-ನಮ್ಮ ಹಕ್ಕು; ನಾವು ಹೋರಾಟಕ್ಕೆ ಸಿದ್ಧ’- ಪ್ರಕಾಶ್ ರಾಜ್
ಈ ಪ್ರಶ್ನೆಗಳಿಗೆ ಪಾರದರ್ಶಕವಾಗಿ ಉತ್ತರ ದೊರೆತಾಗ ಮಾತ್ರ SIR ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸ ಮತ್ತಷ್ಟು ಬಲವಾಗಲಿದೆ. ಮತದಾರರ ಹೆಸರು ಅಳಿಸುವ ಪ್ರಕ್ರಿಯೆಯಲ್ಲಿ ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಸಂಘಟಿತ ಒತ್ತಡವಿಲ್ಲದೆ ಪ್ರತಿಯೊಂದು ಅರ್ಜಿಯನ್ನೂ ಸಮಾನ ಮಾನದಂಡದಲ್ಲಿ ಪರಿಶೀಲಿಸುವುದು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಅತ್ಯಂತ ಮುಖ್ಯವಾಗಿದೆ.




