ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ...
ಆರೆಸ್ಸೆಸ್‌ಗೊಂದು ಕಿವಿಮಾತು
ಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ ಗಲಭೆ. ಸಾವು-ನೋವುಗಳ ಸುದ್ದಿ. ಆ ಸ್ಥಳಗಳಿಗೆ ಖುದ್ದು ಭೇಟಿ ಮಾಡಲು ಗಾಂಧಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿಗೆ ಎಲ್ಲ ಸಂಘಸಂಸ್ಥೆಗಳ ನಾಯಕರು ಬಂದುಹೋಗುತ್ತಿದ್ದಾರೆ. ಹಾಗೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ನಾಯಕರೊಬ್ಬರು ಕೂಡ ಬಂದರು. ಆದರೆ ಅದಕ್ಕೂ ಮುಂಚೆಯೇ ಗಾಂಧಿಗೆ ಗಲಭೆಗೆ ಕಾರಣರು ಯಾರು ಎಂಬ ಸುದ್ದಿ ಬಂದಿತ್ತು.
ಅದನ್ನು ಮರೆಮಾಚಲು ಆರ್‌ಎಸ್‌ಎಸ್ ನಾಯಕ, “ನಾವು ಒಳ್ಳೆಯ ಜನ. ನಮ್ಮ ಸಂಘ ಯಾರನ್ನೂ ವೈರಿಗಳೆಂದು ಪರಿಗಣಿಸದು. ನಾವಿರುವುದು ಹಿಂದೂಗಳ ರಕ್ಷಣೆಗಾಗಿ. ಮುಸ್ಲಿಮರನ್ನು ಕೊಲ್ಲುವ ಉದ್ದೇಶ ನಮಗಿಲ್ಲ. ನಾವು ಶಾಂತಿಧೂತರು…” ಎಂದರು.
ಗಾಂಧೀ ಸುಮ್ಮನೇ ಇದ್ದರು. ಅವರೇ ಮುಂದುವರೆದು, “ಸಂಘದ ಕಾರ್ಯಕರ್ತರು ನಿರಾಶ್ರಿತರ ಶಿಬಿರಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮ ಪರಿಚಯ ಮಾಡಿಕೊಟ್ಟಿದ್ದಾರೆ” ಎಂದು ಕೊಂಚ ಅಹಂಕಾರದಿಂದ ಹೇಳಿದರು.
ಆಗ ಗಾಂಧಿ, “ಹಿಟ್ಲರನ ನಾಝಿಗಳು ಮತ್ತು ಮುಸಲೋನಿಯ ಫ್ಯಾಸಿಸ್ಟರು ಇದೇ ರೀತಿ ಮಾಡಿದ್ದರು ಎನ್ನುವುದನ್ನು ಮರೆಯಬೇಡಿ. ಸರ್ವಾಧಿಕಾರ ದೃಷ್ಟಿಕೋನವಿಟ್ಟುಕೊಂಡಿರುವ ಕೋಮುವಾರು ಸಂಸ್ಥೆ ನಿಮ್ಮದು” ಸ್ಪಷ್ಟವಾಗಿ, ನೇರವಾಗಿ, ಹಿಂದುಮುಂದು ನೋಡದೆ ಹೇಳಿದರು.
ಸಂಘದ ನೇತಾರನಿಗೆ ಇರುಸುಮುರುಸಾದರೂ ತೋರಗೊಡದೆ, ತಮ್ಮ ಸಂಘದ ಸಮ್ಮೇಳನಕ್ಕೆ ಗಾಂಧಿಯನ್ನು ಆಹ್ವಾನಿಸಿದರು. ಗಾಂಧಿಗೇನು ಭಯ, ಬರುತ್ತೇನೆ ಎಂದರು. ಹೇಳಿದಂತೆ ಸಭೆಗೂ ಹೋದರು. ಅದೊಂದು ಬೃಹತ್ ಸಭೆ, ಆ ನಾಯಕ ಗಾಂಧೀಜಿಯನ್ನು ಸ್ವಾಗತಿಸುತ್ತಾ, “ಹಿಂದೂ ಧರ್ಮ ಸೃಷ್ಟಿಸಿರುವ ಒಬ್ಬ ಮಹಾನ್ ಪುರುಷ ಇವರು” ಎಂದರು.
ಗಾಂಧೀ ಅದರಿಂದ ಉಬ್ಬಿಹೋಗಲೂ ಇಲ್ಲ, ವಿಚಲಿತರೂ ಆಗಲಿಲ್ಲ. ಬದಲಿಗೆ ಅಷ್ಟೇ ಮಾರ್ಮಿಕವಾಗಿ ಉತ್ತರಿಸಿದರು. “ನಾನು ನನ್ನನ್ನು ಹಿಂದೂ ಎಂದು ಕರೆದುಕೊಳ್ಳಲು ಗೌರವ ಎನಿಸುತ್ತದೆ. ಆದರೆ ನನ್ನ ಹಿಂದೂ ಧರ್ಮ ಅಸಹಿಷ್ಣು ಅಲ್ಲ. ಅದರಲ್ಲಿ ಎಲ್ಲ ಧರ್ಮಗಳ ಉತ್ತಮ ವಿಚಾರಗಳು ಸಮಾಗಮಗೊಂಡಿವೆ. ಇದೇ ಅದರ ವೈಶಿಷ್ಟ್ಯ. ಭಾರತದಲ್ಲಿ ಮುಸ್ಲಿಮರಿರಬಾರದು, ಪಾಕಿಸ್ತಾನದಲ್ಲಿ ಹಿಂದೂಗಳಿರಬಾರದು ಎಂಬುದು ಬಾಲಿಶ. ಎರಡೂ ತಪ್ಪು. ಇಸ್ಲಾಂ ಧರ್ಮದ ಬಗ್ಗೆ ಯಾವುದೇ ವೈರತ್ವವಿಲ್ಲ ಎನ್ನುವ ನಿಮ್ಮ ಆಶ್ವಾಸನೆಯಿಂದ ನನಗೆ ಸಂತೋಷವಾಗಿದೆ. ಆದರೆ ಮುಸ್ಲಿಮರ ಕೊಲೆಯಲ್ಲಿ ನಿಮ್ಮ ಸಂಘಟನೆಯ ಕೈವಾಡವಿದೆ ಎನ್ನುವ ಆರೋಪ ನಿಜವಾದಲ್ಲಿ ಅದರ ಪರಿಣಾಮ ಭಯಂಕರವಾದೀತು” ಎಂದು ಹೇಳಿದರು.
ಅವರ ಬಿಚ್ಚುಮಾತು ನಾಯಕರಿಗೆ ಪಥ್ಯವಾಗಲಿಲ್ಲ. ಕೆಣಕಿದಂತಾಯಿತು. ಕೂಡಲೆ, “ದುಷ್ಟರನ್ನು ಸಂಹರಿಸಲು ಹಿಂದೂ ಧರ್ಮ ಅನುಮತಿ ನೀಡದೇನು? ಇಲ್ಲ ಎನ್ನುವುದಾದರೆ ಗೀತೆಯ ಎರಡನೆಯ ಅಧ್ಯಾಯದಲ್ಲಿ ಕೌರವರನ್ನು ನಾಶಗೊಳಿಸುವಂತೆ ಶ್ರೀಕೃಷ್ಣ ಉಪದೇಶ ಮಾಡಿದ್ದನಲ್ಲಾ, ಆ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಮರುಪ್ರಶ್ನೆ ಎಸೆದರು.
“ಹೌದು ಮತ್ತು ಅಲ್ಲ. ನಿಮ್ಮ ಮೊದಲ ಪ್ರಶ್ನೆಗೆ ಈ ಎರಡೂ ಉತ್ತರ. ಸಂಹರಿಸುವುದಕ್ಕೆ ಮೊದಲು ಯಾರು ದುಷ್ಟರು ಎನ್ನುವುದನ್ನು ನಿರ್ಣಯಿಸುವ ಶಕ್ತಿ ನಮ್ಮಲ್ಲಿ ಬರಬೇಕು. ಅಂತಹ ಶಕ್ತಿ ನಮ್ಮಲ್ಲಿ ಬರಬೇಕಾದರೆ ನಾವು ಪೂರ್ಣ ನಿರ್ದೋಷಿಗಳಾಗಿರಬೇಕು. ಒಬ್ಬ ಪಾಪಿ ಇನ್ನೊಬ್ಬ ಪಾಪಿಯ ನ್ಯಾಯವನ್ನು ನಿರ್ಣಯಿಸಬಲ್ಲನೆ? ಅಥವಾ ಆತನನ್ನು ಗಲ್ಲಿಗೇರಿಸುವಂತೆ ಅಧಿಕಾರಯುತವಾಗಿ ಹೇಳಬಲ್ಲನೆ? ಇನ್ನು ಎರಡನೆ ಪ್ರಶ್ನೆ… ಪಾಪಿಗೆ ದಂಡ ಕೊಡುವ ಅಧಿಕಾರ ಗೀತೆ ಒಪ್ಪಿಕೊಂಡಿದೆ ಎಂದೇ ಇಟ್ಟುಕೊಳ್ಳೋಣ. ಆದರೂ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿರುವ ಸರ್ಕಾರದ ಉಪಯೋಗ ಮಾಡಿಕೊಳ್ಳಬೇಕು. ಹಾಗೆ ಮಾಡದೆ ನೀವು ಅದನ್ನು ಕೈಗೆತ್ತಿಕೊಳ್ಳುವುದಾದರೆ ಸರ್ಕಾರವೇಕಿರಬೇಕು? ನೀವೇ ಆಯ್ಕೆ ಮಾಡಿಕೊಂಡಿರುವ ನಾಯಕರಿರುವಾಗ, ಅವರು ಸೇವೆಗೆ ಸಿದ್ಧರಿರುವಾಗ, ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು ಅವರ ಪ್ರಯತ್ನಗಳನ್ನು ವಿಫಲಗೊಳಿಸಿದಂತೆ… ನಿಮ್ಮ ನಾಯಕರನ್ನು ನೀವೇ ಅವಮಾನಿಸಿದಂತೆ…” ಎಂದರು.
ಇದು ಆರೆಸೆಸ್ ಸಭೆಯಲ್ಲಿ ಗಾಂಧಿ ಆರೆಸೆಸ್ಸಿಗರಿಗೇ ಹೇಳಿದ ಕಿವಿಮಾತು. ಇವತ್ತು ಹೀಗೆ ಹೇಳುವ ನೈತಿಕತೆಯನ್ನು ಎಷ್ಟು ಮಂದಿ ಉಳಿಸಿಕೊಂಡಿದ್ದಾರೆ?

ಹೆಣ್ಣು ಮಕ್ಕಳೇ ಏಕೆ ಪಾತ್ರೆ ತೊಳೆಯಬೇಕು?
ಆಶ್ರಮದಲ್ಲಿ ಸರದಿಯಂತೆ ಎಲ್ಲರೂ ಕೆಲಸ ಮಾಡುತ್ತಿದ್ದರು. ಅದರಲ್ಲಿ ಅಡುಗೆ ಮನೆಯ ಪಾತ್ರೆಗಳನ್ನು ಸರದಿಯಂತೆ ತೊಳೆಯುವ, ತಿಕ್ಕುವ ಕೆಲಸವೂ ಒಂದು.
“ಊಟ ಮಾಡಿದ ತಟ್ಟೆಗಳನ್ನು ಅವರವರೇ ತೊಳೆಯುವುದರಿಂದ ಸಮಯ ಹಾಳಾಗುತ್ತದೆ. ಮೂರು ನಾಲ್ಕು ಜನ ಸೇರಿ ಪಾಳಿಯಂತೆ ಈ ಕೆಲಸ ಮಾಡುವುದೊಳಿತು. ಬೇರೆಯವರ ಎಂಜಲು ತಟ್ಟೆ ತೊಳೆಯುವಾಗ, ಈಗಿರುವ ನಮ್ಮ ಜಿಗುಪ್ಸಾ ಭಾವನೆ ಅಳಿದೀತು. ಪರಸ್ಪರ ಪ್ರೇಮಭಾವನೆ ವರ್ದಿಸುವುದರಲ್ಲಿ ಈ ಪದ್ಧತಿ ತುಂಬಾ ಸಹಾಯಕ” ಎಂದು ಎಲ್ಲರಿಗೂ ತಿಳಿಸಿ ಹೇಳಿದರು ಗಾಂಧೀಜಿ.
ಪಾತ್ರೆ ತೊಳೆಯುವ ಮೊದಲ ಪಾಳಿಗೆ ತಮ್ಮನ್ನು ಮತ್ತು ಕಸ್ತೂರ ಬಾ ಅವರ ಹೆಸರನ್ನು ಸೂಚಿಸಿದರು. ಇದನ್ನು ಕೇಳಿ ಅಲ್ಲಿದ್ದವರಿಗೆ ಆಶ್ಚರ್ಯ. ದೊಡ್ಡವರು ಇಂತಹ ತೊಳೆಯುವ ಕೆಲಸ ಮಾಡುವುದೆ? ಅನೇಕರು ಈ ವಿಷಯದಲ್ಲಿ ಗೊಣಗಿದ್ದೂ ಉಂಟು.
ಎಂಜಲಾಗಿ ಕೊಳಕಾಗಿರುವ ಸ್ಥಳಗಳನ್ನು ಗುಡಿಸಿ ಚೊಕ್ಕಟ ಮಾಡುವುದು ನಿಜವಾದ ಪುಣ್ಯ ಕಾರ್ಯ. ಕೊಳಕು ಮಾಡಿ ಚಾಕರಿ ಮಾಡಿಸಿಕೊಳ್ಳುವುದರಲ್ಲಿ ಆತ್ಮದರ್ಶನ ಲಭ್ಯವಾಗದು. ಶುಚಿತ್ವ ಆತ್ಮದರ್ಶನ ಮಾಡಿಸುವ ಕೈಗನ್ನಡಿ. ಹೀಗಿದ್ದೂ ಶುದ್ಧೀಕರಣದ ವಿಷಯದಲ್ಲಿ ಬೇರೆ ವರ್ಗವನ್ನು ಸೃಷ್ಟಿಸಿಕೊಂಡಿದ್ದೇವೆ. ಶುದ್ಧೀಕರಣ ಮಾಡುವ ಕಾರ್ಯ ಮೈಲಿಗೆ ಎನ್ನುವ ಭಾವನೆ ರೂಢಿಯಲ್ಲಿದೆ. ಇದು ತಪ್ಪು ತಿಳಿವಳಿಕೆ. ಇದನ್ನು ಅಲ್ಲಗಳೆಯಲೆಂದೇ ಗಾಂಧೀಜಿ ಶುದ್ಧೀಕರಣ ಕಾರ್ಯಕ್ಕೆ ಕೈ ಹಾಕಿದರು.
ಆಶ್ರಮವಾಸಿಗಳಿಗೆ ಏನೋ ಒಂದು ಬಗೆಯ ಕಸಿವಿಸಿ. ತೊಳೆಯುವ ಜಾಗದಲ್ಲಿ ನಿಂತಿದ್ದ ಗಾಂಧೀಜಿಯನ್ನು ನೋಡುತ್ತಾ ಮರು ಮಾತಾಡದೆ ಒಬ್ಬೊಬ್ಬರೂ ತಟ್ಟೆಯನ್ನಿಟ್ಟು ಹೋಗುತ್ತಿದ್ದರು. ಅವರ ತಟ್ಟೆಗಳನ್ನು ಒಂದೊಂದಾಗಿ ಎತ್ತಿಕೊಂಡು ಬಾ ಮತ್ತು ಬಾಪೂ ತೊಳೆಯುವ ಕೆಲಸದಲ್ಲಿ ನಿರತರಾದರು.
ಇದನ್ನು ಓದಿದ್ದೀರಾ?: ಕಾಲಮಾನ | ದೇಹವೇ ನೈತಿಕ ಹೋರಾಟದ ತಾಣವಾದಾಗ…
“ಮನಸ್ಸಿದ್ದರೆ ಎಂತಹ ಕೆಲಸ ಬೇಕಾದರೂ ಮಾಡಬಹುದು. ನಮ್ಮ ಮನೆಗಳಲ್ಲಿ ಮಾಡುವುದಿಲ್ಲವೆ? ಹೆಣ್ಣುಮಕ್ಕಳೇ ಮನೆಯ ಪಾತ್ರೆಗಳನ್ನು ತೊಳೆಯುತ್ತಾರೆ. ಹಾಗೆಯೇ ಇದೂ ಒಂದು ನಮ್ಮ ಪರಿವಾರ. ಪ್ರಮಾಣದಲ್ಲಿ ದೊಡ್ಡದು. ನಾವು ಹೆಣ್ಣು-ಗಂಡುಗಳ ಭೇದವನ್ನು ಅಳಿಸಿಹಾಕಬೇಕು. ಎಂತಲೇ ನಾನು ಅಡುಗೆಯ ಜವಾಬ್ದಾರಿಯನ್ನು ಮಹಿಳೆಯರಿಗೆ ವಹಿಸಿ ಕೊಟ್ಟಿಲ್ಲ. ಕೆಲಸದ ವಿಷಯದಲ್ಲಿ ಸ್ತ್ರೀ-ಪುರುಷ ಎನ್ನುವ ಭೇದ ಇರಕೂಡದು. ಇಂತಹ ಸಾಮೂಹಿಕ ವ್ಯವಸ್ಥೆಯಲ್ಲಿ ಕೌಟುಂಬಿಕ ಭಾವನೆ ಬೆಳೆಯುತ್ತದೆ. ಬಂದವರಿಗೆ ಊಟ ಬಡಿಸುವುದಿದೆಯಲ್ಲಾ, ಅದು ಆಧ್ಯಾತ್ಮಿಕ ಭಾವನೆಗೆ ಪೂರಕ. ಅದೇ ನಿಜವಾದ ಸೇವೆ.”
“ಪ್ರತಿಯೊಂದು ಕೆಲಸವು ಭಕ್ತಿಮಯವಾಗಬೇಕು. ಸೇವಾಮಯವಾಗಬೇಕು. ಆಗ ಅದರ ಸಾರ್ಥಕತೆ. ಶ್ರೀರಾಮನಿಗೆ ಬೋರೇಹಣ್ಣು ತಿನ್ನಿಸಿದಳು ಶಬರಿ, ಅದರಲ್ಲೇನಿತ್ತು? ಎಲ್ಲೂ ಸಿಗದಂಥ ಹಣ್ಣುಗಳೇ ಅವು? ತನ್ನ ಪ್ರೀತಿಯನ್ನು ಆಕೆ ಜೇನಾಗಿ ಹಿಂಡಿದ್ದಳು ಅದರಲ್ಲಿ.”
ಗಾಂಧೀಜಿಯ ಒಂದೊಂದು ಮಾತಿನಲ್ಲಿ ಅಮೃತ ಹನಿಯುತ್ತಿತ್ತು. ಜೀವನವನ್ನು ಆಧ್ಯಾತ್ಮಕವಾಗಿಸುವ ಕಲೆಯನ್ನು ಅವರು ಬಲು ಚೆನ್ನಾಗಿ ಅರಿತಿದ್ದರು. ಅವರ ಸನಿಹಕ್ಕೆ ಬಂದವರಿಗೆಲ್ಲ ಇದೇ ಶಿಕ್ಷಣ. ಬರಿ ಗೊಡ್ಡು ಕರ್ಮವಲ್ಲ. ಕರ್ಮದಲ್ಲಿ ಯೋಗವನ್ನು ಎರಕ ಹೊಯ್ದ ಕರ್ಮ ಕುಶಲಿ.
ಅಂತರಾತ್ಮದ ಸಂಶೋಧನೆ ಮುಖ್ಯ
1927ರಲ್ಲಿ ಬೆಂಗಳೂರಿನ ಸೈನ್ಸ್ ಇನ್ಸ್‌ಟಿಟ್ಯೂಟ್‌ಗೆ ಬಂದಿದ್ದ ಗಾಂಧಿ ಅಲ್ಲಿನ ವಿಭಾಗಗಳ ಪರಿಚಯ ಮಾಡಿಕೊಂಡು ಸಂಪ್ರೀತರಾದಂತೆ ಕಾಣಲಿಲ್ಲ. ಅವರ ಭಾವನೆಗಳೇನೆಂಬುದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದಾಗ ಸ್ಪಷ್ಟವಾಗಿತ್ತು.
“ನಾನೆಲ್ಲಿಗೆ ಬಂದಿದ್ದೇನೆಂದು ಅಚ್ಚರಿಯಾಗುತ್ತಿದೆ. ನನ್ನಂತಹ ಹಳ್ಳಿಗನಿಗೆ ಇದು ಸರಿಯಾದ ಸ್ಥಳವಲ್ಲ. ನಾನು ಮಾತಿಲ್ಲದ ಬೆರಗಿನಿಂದ ನಿಲ್ಲಬಲ್ಲೆನಷ್ಟೇ. ನಾನು ಹೇಳಬೇಕೆಂದಿರುವುದಿಷ್ಟೇ: ನೀವಿಲ್ಲಿ ನೋಡುತ್ತಿರುವ ಬೃಹತ್ ಪ್ರಯೋಗಾಲಯಗಳು ಮತ್ತು ಅವುಗಳ ಉಪಕರಣಗಳು ಮಿಲಿಯಗಟ್ಟಲೆ ಜನರ ಶ್ರಮದ ಹಣದ ಫಲ. ಟಾಟಾರ ಮೂವತ್ತು ಲಕ್ಷ ರೂಪಾಯಿಗಳಾಗಲೀ ಅಥವಾ ಮೈಸೂರು ಸರ್ಕಾರದ ಧನವಾಗಲೀ ಎಲ್ಲಿಂದಲೋ ಬಂದದ್ದಲ್ಲ. ಈ ದರಿದ್ರ ನಾಡಿನ ಜನರ ಶ್ರಮದಿಂದಲೇ ಬಂದದ್ದು.
“ಹಳ್ಳಿಯ ಮಂದಿಯನ್ನು ನಾವೇನಾದರೂ ಭೇಟಿಯಾಗಿ ನೀವು ಬೆವರು ಹರಿಸಿ ದುಡಿದುಕೊಟ್ಟ ಹಣವನ್ನು ಕಟ್ಟಡ ಮತ್ತು ಪ್ರಯೋಗಾಲಯಗಳ ನಿರ್ಮಾಣಕ್ಕಾಗಿ ಉಪಯೋಗಿಸುತ್ತೇವೆ, ಅವುಗಳಿಂದ ನಿಮ್ಮ ಮುಂದಿನ ತಲೆಮಾರಿಗೆ ಉಪಯೋಗವಾಗುತ್ತದೆ ಎಂದೆಲ್ಲ ಹೇಳಿದರೆ ಅವರಿಗೆ ಹೇಗೆ ತಾನೇ ಅರ್ಥವಾದೀತು? ಅವರು ನಮಗೆ ಬೆನ್ನು ಮಾಡಿ ಹೊರಟುಹೋಗುತ್ತಾರೆ ಅಷ್ಟೇ. ನಾವೆಂದೂ ಹಳ್ಳಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.
“…ಪ್ರಯೋಗಾಲಯಗಳಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳನ್ನು ಪರಿಶೋಧಿಸಲು ವರ್ಷಾನುಗಟ್ಟಲೆ ಬೇಕೆಂದು ನಿಮ್ಮ ಪ್ರೊಫೆಸರ್ ನನಗೆ ಹೇಳಿದರು. ಆದರೆ ಈ ಹಳ್ಳಿಗಳನ್ನು ಪರಿಶೋಧಿಸುವವರು ಯಾರು? ನಿಮ್ಮ ಪ್ರಯೋಗಾಲಯಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳಾದರೂ ಸಂಶೋಧನೆ ನಿರಂತರವಾಗಿ ನಡೆಯುತ್ತಿರುವಂತೆ ನಿಮ್ಮ ಹೃದಯದ ಒಂದು ಮೂಲೆಯಲ್ಲಿ ಮಿಲಿಯಗಟ್ಟಲೇ ಬಡಜನರ ಅಭಿವೃದ್ಧಿಯ ಸಂಗತಿ ಬಿಸಿಯಾಗಿರಲಿ.
“ನಮ್ಮ ಕೈಯಲ್ಲಾದುದನ್ನು ಮಾಡಿದ್ದೇವೆ, ಬನ್ನಿ ಇನ್ನು ಬಿಲಿಯರ್ಡ್ಸ್ ಮತ್ತು ಟೆನ್ನಿಸ್ ಆಡೋಣ ಎನ್ನುವ ಧೋರಣೆ ಬೇಡ. ಕ್ರೀಡಾಂಗಣದಲ್ಲಿ ಕೂಡ ನಿಮ್ಮನ್ನು ಋಣದ ಭಾರ ಕಾಡುತ್ತಿರಬೇಕು. ನಿಮ್ಮೆಲ್ಲರ ಸಂಶೋಧನೆಗಳ ಅಂತಿಮ ಗುರಿ ಬಡವರ ಉದ್ಧಾರವಾಗಿರಬೇಕು. ಇಲ್ಲದಿದ್ದರೆ ನಿಮ್ಮ ಪ್ರಯೋಗಾಲಯಗಳಿಗೂ ಸೈತಾನನ ಕಾರ್ಯಾಗಾರಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.”

ಹರಿಜನರಿಗಿಲ್ಲದ ದೇವಸ್ಥಾನ ನಮಗೂ ಬೇಡ
ಒಮ್ಮೆ ಗಾಂಧೀಜಿ ಪುರಿಗೆ ಹೋಗಿದ್ದರು. ಅಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಬಾಗಿಲಲ್ಲಿ, “ಹಿಂದೂಗಳ ಹೊರತು ಮತ್ಯಾರಿಗೂ ಪ್ರವೇಶ ಇಲ್ಲ” ಎಂದು ಬೋರ್ಡ್ ಹಾಕಿದ್ದನ್ನು ಕಂಡು, ಆ ಬೋರ್ಡ್ ತೆಗೆಯಬೇಕು ಹಾಗೂ ಮಂದಿರಕ್ಕೆ ಹರಿಜನರಿಗೆ ಪ್ರವೇಶ ನೀಡಬೇಕೆಂದು ಗಾಂಧಿ ಆಗ್ರಹಿಸಿದರು. ಆದರೆ ದೇವಸ್ಥಾನದವರು ಹರಿಜನರಿರಲಿ, ಗಾಂಧೀಜಿಯನ್ನೂ ಒಳಗೆ ಬಿಡದೆ ತಡೆದರು. ಅಷ್ಟೇ ಅಲ್ಲ ಅವರ ಮೇಲೆ ಹಲ್ಲೆಯನ್ನೂ ಮಾಡಿದರು.
ಇದಾದ ಮೇಲೆ ಗಾಂಧಿ ಪುರಿ ಸಮ್ಮೇಳನದ ಅಂಗವಾಗಿ ಮತ್ತೊಂದು ಬಾರಿ ಪುರಿಗೆ ಹೋಗಿದ್ದರು. ಗ್ರಾಮೋದ್ಯೋಗ ಮತ್ತು ಅಭಿವೃದ್ಧಿಯ ಪ್ರದರ್ಶನವನ್ನು ಉದ್ಘಾಟಿಸಿ ಮಾಡಿದ ಭಾಷಣದಲ್ಲಿ, “ಎಲ್ಲಿಯವರೆಗೆ ಪುರಿ ಜಗನ್ನಾಥ ದೇವಸ್ಥಾನಕ್ಕೆ ಹರಿಜನರನ್ನು ಬಿಡುವುದಿಲ್ಲವೋ ಅಲ್ಲಿಯವರೆಗೆ ಅದನ್ನು ಜಗನ್ನಾಥನ ದೇವಸ್ಥಾನ ಎಂದು ಕರೆಯಲಾಗದು. ಅದನ್ನು ಅಲ್ಲಿರುವ ಪೂಜಾರಿಗಳ ಒಡೆತನದ ದೇವಸ್ಥಾನ ಎಂದಷ್ಟೇ ಕರೆಯಬಹುದು” ಎಂದು ಬಹಿರಂಗವಾಗಿಯೇ ಟೀಕಿಸಿದ್ದರು.
ಇದಾಗಿ ಎಷ್ಟೋ ದಿನಗಳ ನಂತರ ಕಸ್ತೂರ್ ಬಾ ಪುರಿಗೆ ಹೋಗಬೇಕಾಗಿಬಂತು. ಅವರೊಂದಿಗೆ ಮಹದೇವ ದೇಸಾಯಿ, ಮತ್ತವರ ಪತ್ನಿ ಕೂಡ ಇದ್ದರು. ಪುರಿಗೆ ಬಂದಿರುವುದರಿಂದ ಜಗನ್ನಾಥ ಮಂದಿರಕ್ಕೆ ಹೋಗುವ ಇಚ್ಛೆಯನ್ನು ಕಸ್ತೂರ್ ಬಾ ವ್ಯಕ್ತಪಡಿಸಿದರು. ಮಹದೇವ ದೇಸಾಯಿರ ಪತ್ನಿ ಮತ್ತು ಬಾ ಇಬ್ಬರೂ ಮಂದಿರಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದರು. ಅವರ ಮುಖದಲ್ಲಿ ಸಂಪೂರ್ಣ ತೃಪ್ತಿ ತುಂಬಿತ್ತು.
“ಶ್ರೀಮತಿ ಗಾಂಧಿ ದೇವಸ್ಥಾನದೊಳಗೆ ಹೋಗಿ ಬಂದರಂತೆ” ಎಂಬ ಗುಸುಗುಸು ಪುರಿ ಪಟ್ಟಣದ ತುಂಬ ಹರಡಿತು. ಇದು ಹೇಗೋ ಬಾಪು ಕಿವಿಗೂ ತಲುಪಿತು.
ಬಾ ಪುರಿಗೆ ಹೋದರೂ ದೇವಸ್ಥಾನಕ್ಕೆ ಹೋಗಲಾರರು ಮತ್ತು ಸಮುದ್ರ ಸ್ನಾನ ಮಾಡಿ ಬರುತ್ತಾರೆಂದು ನಂಬಿದ್ದ ಗಾಂಧಿಗೆ ಇದು ಸಹಿಸಲಸಾಧ್ಯ ನೋವನುಂಟುಮಾಡಿತು. ತೀವ್ರ ಆಘಾತಕ್ಕೊಳಗಾದರು. ಮಹದೇವ್‌ರನ್ನು ಕರೆದು ಬಾಪು, “ನೀನು ದೊಡ್ಡ ತಪ್ಪು ಮಾಡಿದೆ. ಇವರೆಲ್ಲರಿಗೆ ಹಿಂದೆ ನಡೆದದ್ದನ್ನು ತಿಳಿಸಿ ಹೇಳುವುದು ನಿನ್ನ ಕರ್ತವ್ಯವಾಗಿತ್ತು. ಪುರಿಯಲ್ಲಿ ನನ್ನ ಮೇಲಾದ ಹಲ್ಲೆಯ ಬಗ್ಗೆ ತಿಳಿಸಬೇಕಿತ್ತು. ವಿಷಯವನ್ನು ಅರ್ಥ ಮಾಡಿಸುವ ಹೊಣೆ ನಿನ್ನದಾಗಿತ್ತು. ಇಂದು ಹರಿಜನರು ನಾವು ಮೋಸಗಾರರು ಎಂದುಕೊಂಡರೆ ಅದರಲ್ಲಿ ತಪ್ಪಿಲ್ಲ. ಅವರೇಕೆ ಹಾಗೆ ಅಂದುಕೊಳ್ಳಬಾರದು. ಅವರಿಗೆ ಪ್ರವೇಶವಿಲ್ಲದ ದೇವಸ್ಥಾನಕ್ಕೆ ನಾವು ಹೋಗುತ್ತೇವೆ ಎಂದಾದರೆ, ಅವರು ನಮ್ಮನ್ನು ತಮ್ಮವರು ಎಂದು ಹೇಗೆ ನಂಬಿಯಾರು?” ಎಂದು ವೇದನೆಯಿಂದಲೇ ಹೇಳಿದರು.
ಇದನ್ನು ಓದಿದ್ದೀರಾ?: ಗಾಂಧಿ ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ
ಅಷ್ಟೇ ಅಲ್ಲ, ಸೇವಾ ಸಂಘದ ಸದಸ್ಯರನ್ನು ಕರೆದ ಬಾಪು, “ಬಾ ದೇವಸ್ಥಾನಕ್ಕೆ ಹೋಗದೆ ಬಂದಿದ್ದರೆ ಚೆನ್ನಾಗಿತ್ತು. ನಾನೀಗ ಹಳ್ಳದಲ್ಲಿ ಬಿದ್ದಿದ್ದೇನೆ. ನನ್ನ ಕೆಲಸದಲ್ಲಿನ ಆಧಾರವೇ ಕುಸಿದು ಬಿದ್ದಂತಾಗಿದೆ. ತಾವೇನು ಮಾಡುತ್ತಿದ್ದೀವಿ ಎಂಬುದರ ಅರಿವು ಇವರಿಗೆ ಇರಲಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅವರಿಗೆ ತಿಳಿವಳಿಕೆ ಹೇಳದೇ ಇದ್ದ ತಪ್ಪು ನಮ್ಮದೆ” ಎಂದು ಅರಿಕೆ ಮಾಡಿಕೊಂಡು ತಮ್ಮ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದರು.
ಆಳವಾದ ಧರ್ಮ-ವಿವೇಕದ ಪ್ರಜ್ಞೆಯುಳ್ಳ ಮತ್ತು ಐವತ್ತು ವರ್ಷಕ್ಕೂ ಮೀರಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿ ಗಾಂಧೀಜಿಯವರ ನಡೆ-ನುಡಿ ಒಂದೇ ಆಗಿತ್ತು ಎಂಬುದನ್ನು ಇದು ತೋರುತ್ತದೆ.
ಸಂಪಾದನೆ: ಬಸವರಾಜು ಮೇಗಲಕೇರಿ




