ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ತೋಟಗಾರಿಕೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಬೇಕು. ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಸಂಸ್ಥೆ ಹಾಗೂ ಪಾಲಕರ ಕೀರ್ತಿಯನ್ನು ದೇಶಾದ್ಯಂತ ಹರಡಿಸಬೇಕು ಎಂದು ಬೀದರದ ಶಿವನಗರ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.
ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪ್ರವೇಶ ಪಡೆದ ಬಿಎಸ್ಸಿ (ಆನರ್ಸ್) ತೋಟಗಾರಿಕೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೀಕ್ಷಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕೆ ಪದವಿ ಪರಿಸರದೊಂದಿಗೆ ಬೆರೆತು ಕಾರ್ಯನಿರ್ವಹಿಸುವ ಹಾಗೂ ದೇಶಕ್ಕೆ ಅನ್ನ ನೀಡುವ ಮಹತ್ವದ ವಿದ್ಯಾಭ್ಯಾಸವಾಗಿದೆ. ಇಂತಹ ಪದವಿಗೆ ಪ್ರವೇಶ ಪಡೆದಿರುವುದು ವಿದ್ಯಾರ್ಥಿಗಳ ಸುದೈವ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, “ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದ ಆರಂಭದಿಂದಲೇ ಅಧ್ಯಯನಕ್ಕೆ ವಿಶೇಷ ಗಮನ ನೀಡಬೇಕು. ತೋಟಗಾರಿಕೆ ಕ್ಷೇತ್ರದಲ್ಲಿ ಅಗತ್ಯವಾದ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು” ಎಂದು ಪ್ರೇರೇಪಿಸಿದರು.
ಡಾ.ಶಾಂತಲಾ ಆರ್.ಕೌಜಲಗಿ ಮಾತನಾಡಿ, ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಮಾನವನ ಆರೋಗ್ಯ ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.

ದೀಕ್ಷಾರಂಭ ಕಾರ್ಯಕ್ರಮದ ಅಂಗವಾಗಿ 2026-27ನೇ ಶೈಕ್ಷಣಿಕ ಸಾಲಿನ ಪಠ್ಯಕ್ರಮದ ಅನುಸಾರ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಆಂಜನೇಯ ಎನ್., ಅನುರಾಧಾ, ಡಾ. ನಾಗೇಂದ್ರ ಕವಳೆ, ಡಾ. ಮುಹಮ್ಮದ್ ಫಾರೂಕ್, ಡಾ. ಶ್ರೀನಿವಾಸ ಎನ್. ಸೇರಿದಂತೆ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ನೂತನ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಉಪಸ್ಥಿತರಿದ್ದರು. ಜಾನವಿ ಡಿ.ಆರ್. ನಿರೂಪಿಸಿದರು. ಡಾ.ವಿಜಯಮಹಾಂತೇಶ ವಂದಿಸಿದರು.
ಇದನ್ನೂ ಓದಿ : ಬೀದರ್ | ವಾಲ್ಮೀಕಿ ರಾಮಾಯಣ ಮಾನವ ಸಂಬಂಧಗಳ ಮೌಲ್ಯ ಸಾರುತ್ತದೆ: ನಾ.ಗೀತಾಚಾರ್ಯ





