ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ವಿರೋಧಿಸಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮೇ 30ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಯೋಜಕ ಸಂದೀಪ ಮುಕಿಂದೆ ತಿಳಿಸಿದ್ದಾರೆ.
ಬಸವಕಲ್ಯಾಣದ ಯಾತ್ರಿ ನಿವಾಸದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಎಸ್ಐಆರ್ ವಿರೋಧಿ ಜಾತ್ಯಾತೀತ , ಪ್ರಗತಿಪರ ಸಂಘಟನೆಗಳ ನೇತ್ರತ್ವದಲ್ಲಿ ಅಂದು ಬೆಳಿಗ್ಗೆ ನಗರದ ಮಹಾತ್ಮ ಗಾಂಧೀಜಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಸಹಾಯಕ ಆಯುಕ್ತರ ಮುಖಾಂತರ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗುವುದು” ಎಂದು ಹೇಳಿದರು.
“ಎಸ್ಐಆರ್ ಎಂಬುದು ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯಾಗಿದೆ. ಸಾಮಾನ್ಯ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಬಡವರು, ಕಾರ್ಮಿಕರು, ಗ್ರಾಮೀಣ ಪ್ರದೇಶದ ಜನರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ. ಸರ್ಕಾರ ಹಾಗೂ ಚುನಾವಣಾ ಆಯೋಗವು ಜನರಲ್ಲಿ ಗೊಂದಲ ಸೃಷ್ಟಿಸುವ ಬದಲು ಪಾರದರ್ಶಕ ಮತ್ತು ಸಂವಿಧಾನಬದ್ಧ ವಿಧಾನಗಳನ್ನು ಅನುಸರಿಸಬೇಕು” ಎಂದು ಆಗ್ರಹಿಸಿದರು.
ಸಾಮಾಜಿಕ ಚಿಂತಕ ಇಕ್ರಾಮ್ ಖಾದಿವಾಲ ಮಾತನಾಡಿ, ಸಂವಿಧಾನ, ಪ್ರಜಾತಂತ್ರ ವಿರೋಧಿಯಾದ, ಜನ ವಿರೋಧಿಯಾದ ಎಸ್ಐಆರ್ ರದ್ದಾಗಬೇಕು. ಸಂವಿಧಾನಬದ್ಧವಾದ ಹಾಗೂ ಜನಸ್ನೇಹಿಯಾದ ಐಆರ್ ಜಾರಿಗೆ ತರಬೇಕು. ʼಲಾಜಿಕಲ್ ಡಿಸ್ಕ್ರಿಪೆನ್ಸಿʼ ಎನ್ನುವ ಅವೈಜ್ಞಾನಿಕ, ಅಪಾರದರ್ಶಕ ವಿಧಾನವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು. ಜನವಿರೋಧಿ ಎಸ್ಐಆರ್ ವಿರುದ್ಧ ಸರ್ಕಾರವು ದಿಟ್ಟ ನಿಲುವು ತಾಳಬೇಕು ಎಂಬ ಬೇಡಿಕೆ ಸೇರಿ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆʼ ಎಂದರು.
ಹಿರಿಯ ಹೋರಾಟಗಾರ ಸುರೇಶ ಮೋರೆ ಮಾತನಾಡಿ, ʼಎಸ್ಐಆರ್ ಎಂಬುದು ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಇದನ್ನು ವಿರೋಧಿಸಿ ಮೇ 30ರಂದು ರಾಜ್ಯಾದ್ಯಂತ ʼಕರ್ನಾಟಕ ಪ್ರತಿರೋಧʼ ತೋರಲು ತೀರ್ಮಾನಿಸಿದ ಪ್ರಯುಕ್ತ ಬಸವಕಲ್ಯಾಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಿಂತಕರು, ಕಲಾವಿದರು, ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕುʼ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಈಶ್ವರ ಖಂಡ್ರೆಗೆ ಡಿಸಿಎಂ ಸ್ಥಾನ ನೀಡಲು ಕಾಂಗ್ರೆಸ್ ಮುಖಂಡರ ಆಗ್ರಹ
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ವಿ.ಬಿ.ಪಾಟೀಲ್, ಖಾಸೀಂ ಖಾನ್ ಸೇರಿದಂತೆ ವೈಸ್ ಆಫ್ ಅಂಬೇಡ್ಕರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಜಮಾಅತೆ ಇಸ್ಲಾಮಿ ಹಿಂದ್, ದಲಿತ ಸೇನಾ, ಭೀಮ ಆರ್ಮಿ, ಟಿಪ್ಪು ಸುಲ್ತಾನ್, ಕರ್ನಾಟಕ ರಕ್ಷಣಾ ವೇದಿಕೆ, ಎಸ್ಡಿಪಿಐ, ಮುಸ್ಲಿಂ ಭೀಮ ಸೇನಾ ಸ್ವಾಭಿಮಾನಿ, ಕರ್ನಾಟಕ ಟೆಕ್ನೊ ಕ್ರಿಯೇಟ್ ಸೇರಿದಂತೆ ಇತರ ಸಂಘಟನೆಗಳ ಮುಖಂಡರು ಹಾಜರಿದ್ದರು.




